ನೈರುತ್ಯ ರೈಲ್ವೇಯಲ್ಲಿ ಕನ್ನಡಕ್ಕೆ ಅವಮಾನ: ಪರೀಕ್ಷೆಗಳಲ್ಲಿ ಕನ್ನಡ ಕಡೆಗಣಿಸಿದರೆ ರೈಲು ತಡೆ ಹೋರಾಟ-ಕರವೇ ಎಚ್ಚರಿಕೆ

ಬೆಂಗಳೂರು: ನೈರುತ್ಯ ರೈಲ್ವೇಯ ಹುಬ್ಬಳ್ಳಿ ವಿಭಾಗವು ಇತ್ತೀಚೆಗೆ ಹೊರಡಿಸಿರುವ ಎಲ್.ಡಿ.ಸಿ.ಇ (LDCE) ಪದೋನ್ನತಿ ಪರೀಕ್ಷೆಗಳ ನೋಟಿಫಿಕೇಶನ್‌ನಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ. ಈ ಭಾಷಾ ತಾರತಮ್ಯವನ್ನು ಸರಿಪಡಿಸದಿದ್ದಲ್ಲಿ ರಾಜ್ಯಾದ್ಯಂತ ರೈಲು ಸಂಚಾರ ಸ್ಥಗಿತಗೊಳಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಎಚ್ಚರಿಸಿದ್ದಾರೆ.

ಕನ್ನಡಿಗರ ಅಸ್ಮಿತೆಯ ಮೇಲೆ ದಾಳಿ

ನೈರುತ್ಯ ರೈಲ್ವೇಯ ಹುಬ್ಬಳ್ಳಿ ವಿಭಾಗದಲ್ಲಿ ಆಫೀಸ್ ಸೂಪರಿಂಟೆಂಡೆಂಟ್ (39 ಹುದ್ದೆ), ಸೀನಿಯರ್ ಕ್ಲಾರ್ಕ್ (25 ಹುದ್ದೆ) ಮತ್ತು ಇಂಟರ್ಮೀಡಿಯಟ್ ಅಪ್ರೆಂಟಿಸ್ ಮೆಕಾನಿಕ್ಸ್ (9 ಹುದ್ದೆ) ಸೇರಿದಂತೆ ವಿವಿಧ ಹುದ್ದೆಗಳಿಗೆ ಬಡ್ತಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಸಲಾಗುವುದು ಎಂದು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿದೆ. ಕರ್ನಾಟಕದ ಮಣ್ಣಿನಲ್ಲಿ ಕನ್ನಡಿಗರ ಬೆವರಿನಿಂದ ನಿರ್ಮಾಣವಾದ ರೈಲ್ವೇ ಇಲಾಖೆಯಲ್ಲಿ ಕನ್ನಡಕ್ಕೆ ಸ್ಥಾನವಿಲ್ಲದಿರುವುದು ಕನ್ನಡಿಗರ ಭಾಷಾ ಹಕ್ಕುಗಳ ಉಲ್ಲಂಘನೆ ಮತ್ತು ಕನ್ನಡ ಅಸ್ಮಿತೆಯ ಮೇಲಿನ ದಾಳಿ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

Karnataka Language Row

ರೈಲ್ವೇ ಇಲಾಖೆಯ ಈ ಕ್ರಮವು ಕನ್ನಡಿಗ ಉದ್ಯೋಗಿಗಳನ್ನು ವ್ಯವಸ್ಥಿತವಾಗಿ ಉನ್ನತ ಹುದ್ದೆಗಳಿಂದ ದೂರವಿಡುವ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಗ್ರಾಮೀಣ ಭಾಗದ ಮತ್ತು ಕನ್ನಡ ಮಾಧ್ಯಮದಲ್ಲಿ ಓದಿದ ನೌಕರರಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ ಬರೆಯುವುದು ಕಷ್ಟಕರ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಿತ್ತುಕೊಂಡು ಹಿಂದಿ ಭಾಷಿಕರಿಗೆ ನೀಡುವ ಸ್ಪಷ್ಟ ಷಡ್ಯಂತ್ರವಾಗಿದೆ. ಇದು ಕನ್ನಡಿಗರನ್ನು ತಮ್ಮದೇ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡುವ ಪ್ರಯತ್ನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡವನ್ನು ಅಧಿಕೃತ ಭಾಷೆಯಾಗಿ ಘೋಷಿಸಲಾಗಿದೆ. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಕಡ್ಡಾಯವಾಗಿದೆ. ಆದರೆ ಕೇಂದ್ರ ಸರ್ಕಾರದ ಅಡಿಯಲ್ಲಿರುವ ನೈರುತ್ಯ ರೈಲ್ವೇ ಇಲಾಖೆಯು ಕರ್ನಾಟಕದಲ್ಲಿ ಕನ್ನಡವನ್ನು ಪೂರ್ಣವಾಗಿ ಕಡೆಗಣಿಸುತ್ತಿರುವುದು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕನ್ನಡಿಗರ ಸ್ವಾತಂತ್ರ್ಯಹರಣದ ಉದಾಹರಣೆಯಾಗಿದೆ. ಇದು ಕನ್ನಡಿಗರ ಭಾವನೆಗಳನ್ನು ತಿರಸ್ಕಾರದಿಂದ ನೋಡುವ, ಅವರ ಗೌರವವನ್ನು ಕುಗ್ಗಿಸುವ ಕೆಟ್ಟ ಬೆಳವಣಿಗೆ ಎಂದಿದ್ದಾರೆ.

ರಾಜಕೀಯ ಅಖಾಡದಲ್ಲಿ ನಟರ ಅಬ್ಬರ: ಆಂಧ್ರ-ತಮಿಳುನಾಡಿನಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಯಾಕೆ ವರ್ಕ್ ಆಗುತ್ತಿಲ್ಲ?
ರಾಜಕೀಯ ಅಖಾಡದಲ್ಲಿ ನಟರ ಅಬ್ಬರ: ಆಂಧ್ರ-ತಮಿಳುನಾಡಿನಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಯಾಕೆ ವರ್ಕ್ ಆಗುತ್ತಿಲ್ಲ?

ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದ ಸಾವಿರಾರು ಕನ್ನಡಿಗ ರೈಲ್ವೇ ಉದ್ಯೋಗಿಗಳು ಇಂದು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅಸಮರ್ಥರಾಗುತ್ತಿದ್ದಾರೆ. ಅವರಲ್ಲಿ ಅನೇಕರು ಗ್ರಾಮೀಣ ಹಿನ್ನೆಲೆಯಿಂದ ಬಂದವರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು. ಅವರಿಗೆ ಇಂಗ್ಲಿಷ್-ಹಿಂದಿ ಪರೀಕ್ಷೆಯು ತುಂಬಾ ಕಷ್ಟಕರವಾಗುತ್ತದೆ. ಇದರಿಂದಾಗಿ ಅವರ ಉದ್ಯೋಗಾವಕಾಶಗಳು ಕುಂಠಿತವಾಗುತ್ತವೆ. ಇದು ಕನ್ನಡಿಗರನ್ನು ತಮ್ಮದೇ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡುವ ಷಡ್ಯಂತ್ರ ಎಂದು ದೂರಿದ್ದಾರೆ.

ಸರ್ಕಾರ ಮತ್ತು ಸಂಸದರ ಮೌನಕ್ಕೆ ಖಂಡನೆ

ಈ ಅನ್ಯಾಯದ ಕುರಿತು ರಾಜ್ಯ ಸರ್ಕಾರ ಮತ್ತು ಕರ್ನಾಟಕದ ಸಂಸದರು ಮೌನವಾಗಿರುವುದನ್ನು ಕರವೇ ಖಂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ವಿಶೇಷವಾಗಿ ರೈಲ್ವೇ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ತಕ್ಷಣವೇ ಎಚ್ಚೆತ್ತುಕೊಂಡು ಈ ನೋಟಿಫಿಕೇಶನ್ ತಿದ್ದುಪಡಿ ಮಾಡಿಸಿ ಕನ್ನಡದಲ್ಲಿ ಪರೀಕ್ಷೆ ನಡೆಸಲು ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಒಂದು ವೇಳೆ ರೈಲ್ವೇ ಇಲಾಖೆಯು ಈ ತಪ್ಪು ತಿದ್ದಿಕೊಳ್ಳದಿದ್ದಲ್ಲಿ ಮತ್ತು ತ್ರಿಭಾಷಾ ಸೂತ್ರದಡಿ (ಕನ್ನಡ-ಇಂಗ್ಲಿಷ್-ಹಿಂದಿ) ಪರೀಕ್ಷೆ ನಡೆಸದಿದ್ದಲ್ಲಿ, ಕರವೇ ವತಿಯಿಂದ ನಿರ್ಣಾಯಕ ಹೋರಾಟ ನಡೆಯಲಿದೆ. ನಾವು ಈ ದ್ರೋಹವನ್ನು ಸಹಿಸುವುದಿಲ್ಲ. ಅನ್ಯಾಯ ಮುಂದುವರಿದರೆ ಕರ್ನಾಟಕದಲ್ಲಿ ರೈಲ್ವೇ ವ್ಯವಸ್ಥೆಯನ್ನೇ ಸ್ಥಗಿತಗೊಳಿಸುವ ಹಂತಕ್ಕೆ ನಮ್ಮ ಹೋರಾಟ ತಲುಪಲಿದೆ ಎಂದು ಟಿ.ಎ.ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+