ವ್ಯಂಗ್ಯ ಚಿತ್ರ ಅರ್ಥ ಮಾಡಿಕೊಳ್ಳದ ಬುದ್ಧಿಗೇಡಿಗಳಿಗೆ ಧಿಕ್ಕಾರ
ಬೆಂಗಳೂರು, ಜ. 8: ಪ್ಯಾರೀಸ್ ಪತ್ರಿಕಾ ಕಚೇರಿ ಮೇಲೆ ದಾಳಿ ಮಾಡಿರುವ ಉಗ್ರರ ಕ್ರಮವನ್ನು ಕರ್ನಾಟಕ ಪತ್ರಕರ್ತರ ಅಧ್ಯಯನ ಕೇಂದ್ರ ಖಂಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಮಾಧ್ಯಮ ಸ್ವಾತಂತ್ರ್ಯವನ್ನು ಮುಕ್ತವಾಗಿ ಸ್ವೀಕರಿಸದೆ ನರಮೇಧ ನಡೆಸಿದ್ದು ನಿಜಕ್ಕೂ ದುರಂತ ಎಂದಿದೆ.
ಮಾಧ್ಯಮ, ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಂಗ್ಯಚಿತ್ರದ ಕನಿಷ್ಠ ತಿಳಿವಳಿಕೆಯೂ ಇಲ್ಲದ ಮೂಲಭೂತವಾದಿಗಳಿಗೆ ವ್ಯಂಗ್ಯಚಿತ್ರವೊಂದನ್ನು ಆರೋಗ್ಯಕರವಾಗಿ ಸ್ವೀಕರಿಸುವಷ್ಟು ವ್ಯವಧಾನವಿಲ್ಲ. ವ್ಯಂಗ್ಯಚಿತ್ರ ಆಯಾ ಕಾಲದ ಪ್ರಸಕ್ತ ವಿದ್ಯಮಾನಗಳಿಗೆ ಕನ್ನಡಿ ಇದ್ದಂತೆ. ಇದನ್ನು ಅತ್ಯಂತ ಮುಕ್ತ ಮನಸ್ಸಿನಿಂದ ನೋಡಲಾಗದ ಉಗ್ರರು ಹೇಯ ಕೃತ್ಯ ಮಾಡಿದ್ದಾರೆ ಎಂದು ಹೇಳಿದೆ.[ಉಗ್ರರ ವಿರುದ್ಧ ಹೋರಾಟ: ಫ್ರಾನ್ಸಿಗೆ ಸಾಧ್ಯ, ಭಾರತಕ್ಕೆ ಸಾಧ್ಯವಿಲ್ಲವೇ?]

'ಚಾರ್ಲಿ ಹೆಬ್ದೊ' ಪತ್ರಿಕೆ ವ್ಯಂಗ್ಯಚಿತ್ರಗಳ ಮೂಲಕ ಸತ್ಯವನ್ನು ಜನರೆದುರು ತೆರೆದಿಡುತ್ತಾ ಬಂದಿದೆ. ಸತ್ಯ ಮತ್ತು ವಾಸ್ತವವನ್ನು ಎದುರಿಸಲಾಗದ ಉಗ್ರರು ಸಂಪಾದಕೀಯ ಸಭೆ ನಡೆಸುತ್ತಿದ್ದ ಪತ್ರಕರ್ತರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಹೇಡಿಗಳು ಮಾತ್ರ ಇಂಥ ಹಿಂಸೆ ಮತ್ತು ಭಯದ ಸೃಷ್ಟಿಗೆ ಕಾರಣರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇಂಥ ಘಟನೆಗಳಿಂದ ಹೆದರದೆ ಮಾನವೀಯತೆ ಮತ್ತು ಅದನ್ನು ಎತ್ತಿ ಹಿಡಿಯುವುದಕ್ಕೆ ಶ್ರಮಿಸುವ ಪತ್ರಿಕಾಧರ್ಮವನ್ನು ಮತ್ತಷ್ಟು ಗಟ್ಟಿ ಮಾಡಬೇಕು. ಸ್ವತಃ ಚಾರ್ಲಿ ಹೆಬ್ಡೋ ಈ ಘಟನೆಯನ್ನು ಮರುದಿನದ ಸಂಚಿಕೆಯ ಮೂಲಕ ಪ್ರತಿಭಟಿಸಿದ್ದು ನಮಗೆ ಮಾದರಿಯಾಗಬೇಕು. ಸಾಮಾಜಿಕ ಪ್ರಜ್ಞೆ ಕಾರ್ಯಕ್ಕೆ ಕೈ ಜೋಡೊಸಬೇಕು ಎಂದು ಹೇಳಿದೆ.[ಪ್ಯಾರಿಸ್ ದಾಳಿ ಮಾಡಿದ ಉಗ್ರರಿಗೆ 51 ಕೋಟಿ ಬಹುಮಾನ!]
ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಸಂಘಟನೆ ಶ್ರದ್ಧಾಂಜಲಿ ಸಲ್ಲಿಸುತ್ತದೆ. ಸಾಮಾಜಿಕ ನೆಲೆಗಟ್ಟನ್ನು ಭದ್ರ ಮಾಡಲು ಇಂಥ ಕುಕೃತ್ಯಗಳನ್ನು ಪ್ರತಿಯೊಬ್ಬರು ಪ್ರತಿಭಟಿಸಬೇಕಾಗಿದೆ ಎಂದು ಹೇಳಿದೆ.












Click it and Unblock the Notifications