Just in: ನಾಳೆಯ ಕರ್ನಾಟಕ ಸಾರಿಗೆ ಮುಷ್ಕರ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ, ಸರ್ಕಾರಕ್ಕೆ ನೋಟಿಸ್ ಜಾರಿ
ಬೆಂಗಳೂರು, ಮಾರ್ಚ್ 23: ವಿವಿಧ ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಿ ನಾಳೆ ಶುಕ್ರವಾರ ಮಾರ್ಚ್ 24ರಂದು ಮುಷ್ಕರ ನಡೆಸಲು ಸಜ್ಜಾಗಿದ್ದ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ'ಗೆ ಹಿನ್ನಡೆಯಾಗಿದೆ.
ರಾಜ್ಯದ ಸರ್ಕಾರದ ಭರವಸೆ ಬಳಿಕವು ಶುಕ್ರವಾರ ಮುಷ್ಕರ ನಡೆಸಿಯೇ ತಿರುತ್ತೇವೆ ಎಂದು ಸಮಿತಿ ತಿಳಿಸಿತ್ತು. ಆದರೆ ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಷ್ಕರಕ್ಕೆ ತಡೆಯಾಜ್ಞೆ ಗುರುವಾರ ನೀಡಿ ಆದೇಶ ಹೊರಡಿಸಿದೆ.

ಸದ್ಯ ಪಿಯುಸಿ ಸೇರಿದಂತೆ ವಿವಿಧ ತರಗತಿ ಮಕ್ಕಳು ಪರೀಕ್ಷೆ ಎದುರಿಸುತ್ತಿದ್ದಾರೆ. ಮುಷ್ಕರದಿಂದ ಸಾರ್ವಜನಿಕರಿಗೂ ತೊಂದರೆಯಾಗಲಿದೆ ಎಂದು ಹೈಕೋರ್ಟ್ ಹೇಳಿದೆ. ಅದಲ್ಲದೇ ಮುಂದಿನ ತಿಂಗಳು ಏಪ್ರಿಲ್ 6ರಂದು ಮತ್ತೆ ಸಾರಿಗೆ ಆಯುಕ್ತರ ಜೊತೆಗೆ ಸಾರಿಗೆ ಮುಷ್ಕರರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಹೀಗಾಗಿ ಮಾರ್ಚ್ 24ರಂದು ಮುಷ್ಕರ ನಡೆಸುವುದು ಒಳ್ಳೆಯದಲ್ಲ ಎಂದು ತಿಳಿಸಿದ ಹೈಕೋರ್ಟ್, ಮುಂದಿನ ಮೂರು ವಾರಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸದಂತೆ ಸೂಚಿಸಿ ತಡೆಯಾಜ್ಞೆ ಹೊರಡಿಸಿದೆ.
ಇತ್ತ ಸಲ್ಲಿಕೆಯಾಗಿರುವ ಅರ್ಜಿ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ'ಯು ಸಾರಿಗೆ ನೌಕರರಿಗೆ ಸರಿಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿತ್ತು. ಇದಾದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ ಆಯುಕ್ತ ಕಳೆದ ಮಾರ್ಚ್ 18ರಂದು ಶನಿವಾರ ರಾತ್ರಿ ಸಮಿತಿ ಸದಸ್ಯರು ಹಾಗೂ ಸಾರಿಗೆ ನೌಕರರ ಮುಖಂಡರ ಜೊತೆ ಸಭೆ ನಡೆಸಿತು.
ಈ ವೇಳೆ ಸಂಧಾನ ಸಭೆ ಯಶಸ್ವಿಯಾಗಿದೆ. ಸಮಾನವೇತನ ಸೇರಿ ಒಂದ ಹಂತಕ್ಕೆ ಬೇಡಿಕೆಗಳು ಈಡೇರಿಕೆಯಾಗಲಿವೆ ಎಂದು ಹೇಳಿದ್ದ ಸಮಿತಿ ಮುಖಂಡರು ಮುಷ್ಕರ ವಾಪಸ್ ಪಡೆಯುವುದಾಗಿ ತಿಳಿಸಿದ್ದರು. ಇತ್ತ ರಾಜ್ಯ ಸರ್ಕಾರ ಸಭೆಯಲ್ಲಿ ನೀಡಿದ ಭರವಸೆಯಂತೆ ಸಾರಿಗೆನೌಕರರ ವೇತನವನ್ನು ಶೇಕಡಾ 15ರಷ್ಟು ಹೆಚ್ಚಿಸಿ ಆದೇಶಿಸಿತ್ತು.
ಇದಾದ ಬಳಿಕ ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಅವರು, ವೇತನ ಪರಿಷ್ಕರಣೆ ಆದೇಶದಿಂದ ಸಾರಿಗೆ ನಿಗಮದ ಸಾವಿರಾರು ನೌಕರರಿಗೆ ಅನ್ಯಾಯವಾಗಿದೆ. ಸರ್ಕಾರದ ಆದೇಶಕ್ಕೆ ನಮ್ಮ ಸಮ್ಮತಿ ಇಲ್ಲ ಎಂದರು. ಶುಕ್ರವಾರದ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೇಡಿಕೆ ಈಡೇರುವ ತನಕ ಮುಷ್ಕರ ಮುಂದುವರಿಯಲಿದೆ. ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಅವರು ತಿಳಿಸಿದ್ದರು.
ಸಮಿತಿ ಸರ್ಕಾರದ ಭರವಸೆಗೆ ಒಪ್ಪಿಲ್ಲ. ಮುಷ್ಕರ ನಡೆಸಲು ನಿರ್ಧರಿಸಿದೆ ಎಂಬುದು ತಿಳಿಯುತ್ತಿದ್ದಂತೆ ಈ ಮೊದಲ ಕರೆ ನೀಡಿದಂತೆ ನೌಕರರು ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಈ ವೇಳೆ ಅಹೋರಾತ್ರಿ ಧರಣಿಗೆ ಕುಳಿತ ಸಾರಿಗೆ ನೌಕರರಲ್ಲಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.












Click it and Unblock the Notifications