Karnataka High Court: ಮಾಲೂರು ಶಾಸಕ ನಂಜೇಗೌಡಗೆ ಸಂಕಷ್ಟ, ತನಿಖೆಗೆ ಹೈಕೋರ್ಟ್ ಗ್ನೀನ್ ಸಿಗ್ನಲ್
ಬೆಂಗಳೂರು, ಅ 2: ಕೋಲಾರ ಜಿಲ್ಲೆಯ ಮಾಲೂರು ಶಾಸಕ ಕೆ.ವೈ.ನಂಜೇಗೌಡಗೆ ಸಂಕಷ್ಟ ಎದುರಾಗಿದೆ. ಹಿಂದಿನ ಅವಧಿಯಲ್ಲಿ ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದಾಗ ಮಾಡಿದ ಅಕ್ರಮ ಭೂ ಮಂಜೂರಾತಿ ಇದೀಗ ಅವರಿಗೆ ಉರುಳಾಗಿದ್ದು, ಅವರು ತನಿಖೆಯನ್ನು ಎದುರಿಸಲೇಬೇಕಾಗಿದೆ.
ಕಳೆದ 2019ರಲ್ಲಿ ಮಾಲೂರು ತಾಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೋಟ್ಯಂತರ ರು.ಗಳ ಬೆಲೆ ಬಾಳುವ ಸುಮಾರು 80 ಎಕರೆ ಸರ್ಕಾರಿ ಭೂಮಿಯನ್ನು ಮೃತರು ಸೇರಿದಂತೆ ಅನರ್ಹರಿಗೆ ಮಂಜೂರು ಮಾಡಿದ್ದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದದೆ.

ಆ ಮೂಲಕ ಶಾಸಕರು ಇದೀಗ ತನಿಖೆಯನ್ನು ಎದುರಿಸಲೇಬೇಕಾಗಿದ್ದು, ಕೋರ್ಟ್ ಕೂಡ ಅದಕ್ಕೆ ಅನುಮತಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದುಕೋರಿ ನಂಜೇಗೌಡ ಸೇರಿದಂತೆ ಸಮಿತಿಯ ಇತರೆ ಮೂವರು ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಧಿಕಾರ ದುರುಪಯೋಗಕ್ಕೆ ಉದಾಹರಣೆ: ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವುದಕ್ಕೆ ಅರ್ಹರಲ್ಲದ ವ್ಯಕ್ತಿಗಳಿಗೆ ಹಂಚಿಕೆ ಮಾಡುವ ಮೂಲಕ ಜನ ಪ್ರತಿನಿಧಿಗಳಿಗೆ ನೀಡಿರುವ ಅಧಿಕಾರವನ್ನು ಅರ್ಜಿದಾರರು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣಗಳಲ್ಲಿ ಇದು ಶ್ರೇಷ್ಟ ಉದಾಹರಣೆಯಾಗಿದೆ ಎಂದು ತಿಳಿಸಿರುವ ಹೈಕೋರ್ಟ್ ಅರ್ಜಿ ವಜಾಗೊಳಿಸಿದ್ದು, ಪ್ರಕರಣ ಸಂಬಂಧ ತನಿಖೆಗಾಗಿ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ.
ಅಲ್ಲದೆ, ಆರೋಪ ಸಂಬಂಧ ಈ ಮೊದಲೇ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅರ್ಜಿದಾರರ ಆರೋಪಿಗಳಾಗಿಲ್ಲ, ಆದ್ದರಿಂದ ಎರಡನೇ ಎಫ್‌ಐಆರ್‌ನ್ನು ರದ್ದು ಪಡಿಸುವಂತೆ ಅರ್ಜಿದಾರರ ಕೋರಿಕೆಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಅನರ್ಹರಿಗೆ ಭೂ ಮಂಜೂರು: 2004ರಲ್ಲಿ ಮೃತರಾಗಿದ್ದ ನಾರಾಯಣಪ್ಪ ಎಂಬುವರಿಗೆ 2019ರಲ್ಲಿ 1.39 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಕಳೆದ 50ವರ್ಷಗಳಿಂದ ಭೂಮಿಯ ಸಾಗುವಳಿ ಮಾಡುತ್ತಿದ್ದ ಎಂಬ ಕಾರಣ ನೀಡಿ 40 ವರ್ಷದ ಆನಂದಗೌಡ ಎಂಬ ವ್ಯಕ್ತಗೆ ಜಮೀನು ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಅಂಶಗಳನ್ನು ಪರಿಶೀಲಿಸಿದರೆ ಸಮಿತಿಯ ಅಧ್ಯಕ್ಷರಾಗಿದ್ದ ಅರ್ಜಿದಾರರು ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಜತೆಗೆ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ; 2019ರಲ್ಲಿ ಶಾಸಕರಾಗಿದ್ದ ಅರ್ಜಿದಾರ ನಂಜೇಗೌಡರಿಗೆ ಸರ್ಕಾರಿ ಭೂಮಿಗಳನ್ನು ಅರ್ಹರಿಗೆ ಮಂಜೂರು ಮಾಡುವ ತಾಲೂಕು ಭೂ ಮಂಜೂರಾತಿ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಮೃತರು ಸೇರಿದಂತೆ ಅನರ್ಹರಿಗೆ ಕೋಟ್ಯಂತರ ಬೆಲೆ ಬಾಳುವ ಸರ್ಕಾರಿ ಭೂಮಿಗಳನ್ನು ಮಂಜೂರು ಮಾಡಿದ್ದ ಆರೋಪ ಎದುರಾಗಿತ್ತು.
ಕೋಲಾರದ ಸಮಾಜ ಸೇವಕ ಕೆ.ಸಿ.ರಾಜಣ್ಣ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕೋರಿದ್ದರು. ಆದರೆ, ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು.
ಬಳಿಕ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿದಾರ ನಂಜೇಗೌಡ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮಾಲೂರು ಪೊಲೀಸರಿಗೆ ಸೂಚನೆ ನೀಡಿತ್ತು. ಈ ಆಧಾರದಲ್ಲಿ ನಂಜೇಗೌಡ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಇದನ್ನು ಪ್ರಶ್ನಿಸಿ ನಂಜೇಗೌಡ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ಆರೋಪ ಸಂಬಂಧ ತಹಶೀಲ್ದಾರ್ ವಿರುದ್ಧ ಈಗಾಗಲೇ ಒಂದು ಎಫ್‌ಐಆರ್ ದಾಖಲಾಗಿದೆ. ಇದೀಗ ವಿಶೇಷ ನ್ಯಾಯಾಲಯದ ಆದೇಶದಂತೆ ಮತ್ತೊಂದು ಎಫ್‌ಐಆರ್ ದಾಖಲಾಗಿದ್ದು, ಇದು ಕಾನೂನು ಬಾಹಿರ ಎಂದು ನ್ಯಾಯಾಲಯದಲ್ಲಿ ಅರ್ಜಿದಾರರು ವಾದ ಮಂಡಿಸಿದ್ದರು.












Click it and Unblock the Notifications