
Datta Jayanti: ದತ್ತಪೀಠದಲ್ಲಿ ದತ್ತ ಜಯಂತಿಗೆ ಅನುಮತಿ ನೀಡಿದ ಹೈಕೋರ್ಟ್
ಬೆಂಗಳೂರು. ನ.30: ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯ ವಿವಾದಾತ್ಮಕ ದತ್ತ ಪೀಠದಲ್ಲಿ ಡಿಸೆಂಬರ್ 6, 7, 8 ರಂದು ದತ್ತ ಜಯಂತಿಗೆ ಹೈಕೋರ್ಟ್ ಅನುಮತಿ ಮಂಜೂರಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪ್ರಕರಣದಲ್ಲಿ ಅನುಮತಿ ನೀಡಲಾಗಿದ್ದು, ದತ್ತ ಜಯಂತಿ ನಿರ್ವಿಘ್ನವಾಗಿ ನಡೆಯಲಿದೆ.
ಸರ್ಕಾರ ರಚಿಸಿದ ಸಮಿತಿ, ಭಕ್ತರಿಂದ ಪೂಜಾವಿಧಿ ನಡೆಸಲು ಮತ್ತು ದತ್ತ ಪಾದುಕೆ ಪೂಜೆಗೆ ಹೈಕೋರ್ಟ್ ಅವಕಾಶ ನೀಡಿದೆ. "ಸರ್ಕಾರ ಈಗಾಗಲೇ ನಿರ್ವಹಣಾ ಸಮಿತಿ ರಚಿಸಿದೆ. ಹಿಂದೂ, ಮುಸ್ಲಿಂ ಸದಸ್ಯರ ಸಮಿತಿಯಿಂದ ಅರ್ಚಕ, ಮುಜಾವರ್ ನೇಮಕವಾಗಿದೆ. ಪ್ರತಿದಿನ ಎರಡೂ ಸಮುದಾಯದವರೂ ಪೂಜೆ ನಡೆಸುತ್ತಿದ್ದಾರೆ. ಹಾಗಾಗಿ ದತ್ತ ಜಯಂತಿಗೆ ಅನುಮತಿ ನೀಡಬೇಕು ಎಂದು ಹೈಕೋರ್ಟ್‌ಗೆ ಎಜಿ ಪ್ರಭುಲಿಂಗ್ ನಾವದಗಿ ಮನವಿ ಮಾಡಿದರು. ಅದಕ್ಕೆ ಒಪ್ಪಿದ ನ್ಯಾಹಯಪೀಠ ದತ್ತ ಜಯಂತಿ ಆಚರಣೆಗೆ ಅನುಮತಿ ನೀಡಿ ವಿಚಾರಣೆ ಜ. 12 ಕ್ಕೆ ಮುಂದೂಡಿತು.
ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದ ವಿವಾದಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಮುಂದುವರಿಸಿದೆ. ಹಾಗಾಗಿ ಸದ್ಯ ಈ ಹಿಂದೆ ಇದ್ದಂತೆಯೇ ಪೂಜಾ ವಿಧಿ ವಿಧಾನಗಳು ಮುಂದುವರಿಯಲಿದೆ. ನ್ಯಾಯಾಲಯ ಕಳೆದ ಆ.22ರಂದು ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದೆ.
ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾವಿಧಿಗೆ ಮುಜಾವರ್ ಹಾಗೂ ಅರ್ಚಕರಿಂದ ಪೂಜಾವಿಧಿಗೆ ಅವಕಾಶ ಕಲ್ಪಿಸಲು ಸಂಪುಟದ ನಿರ್ಧಾರ ಹೈಕೋರ್ಟ್ ಗೆ ಸಲ್ಲಿಕೆಯಾಗಿದೆ. ಸರ್ಕಾರದ ನಿರ್ಧಾರಕ್ಕೆ ಸೈಯದ್ ಗೌಸ್ ಮೊಹಿಯುದ್ದೀನ್ ಶಾ ಖಾದ್ರಿ ಆಕ್ಷೇಪಣೆ ಎತ್ತಿದ್ದಾರೆ.
ಈ ಮಧ್ಯೆ ಸರ್ಕಾರ ಕಳೆದ ವಿಚಾರಣೆ ವೇಳೆ ಹೈಕೋರ್ಟ್‌ಗೆ ಮೆಮೋ ಸಲ್ಲಿಸಿ, ದತ್ತ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಧರ್ಮಗಳ ಸಂಪ್ರದಾಯಗಳಂತೆ ಪೂಜಾ ವಿಧಿವಿಧಾನ ನೆರವೇರಿಸಲು ಅವಕಾಶ ಕಲ್ಪಿಸಲು ಕೈಗೊಂಡಿರುವ ನಿರ್ಣಯದ ಕುರಿತು ಮಾಹಿತಿ ನೀಡಿದೆ.
ಸರ್ಕಾರಿ ವಕೀಲರ ಮೆಮೋ ಪರಿಗಣಿಸಿದ ನ್ಯಾಯಪೀಠ, ಸರ್ಕಾರವು ಅದರ ಪ್ರತಿಯನ್ನು ಮೇಲ್ಮನವಿದಾರರಿಗೆ ಒದಗಿಸಬೇಕು. ಸರ್ಕಾರದ ನಿರ್ಧಾರಕ್ಕೆ ಅರ್ಜಿದಾರರಿಗೆ ಯಾವುದಾದರೂ ಆಕ್ಷೇಪಣೆಯಿದ್ದರೆ ಸಲ್ಲಿಸಬಹುದು ಎಂದು ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಅಲ್ಲದೆ, ಸಮಿತಿಯ ನಿರ್ಣಯವು ಈ ಮೇಲ್ಮನವಿ ಕುರಿತ ವಿಭಾಗೀಯ ಪೀಠದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಒಂದೊಮ್ಮೆ ಈ ಅವಧಿಯಲ್ಲಿ ಸರ್ಕಾರವು ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಾನದಲ್ಲಿ ಯಾವುದೇ ಮಾರ್ಪಾಡು ಮಾಡಿದರೆ, ಆ ಕುರಿತು ಪ್ರಶ್ನಿಸಿ ಸೂಕ್ತ ಅರ್ಜಿ ಸಲ್ಲಿಸಲು ಪಕ್ಷಗಾರರಿಗೆ ಅವಕಾಶವಿದೆ ಎಂದು ತಿಳಿಸಿ 2022ರ ಮೇ 31ರಂದು ಹೊರಡಿಸಿರುವ ಆದೇಶವು ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿತ್ತು.

*ವರದಿ ಅನುಮೋದನೆ*
ಸರ್ಕಾರಿ ವಕೀಲರು ಮೆಮೋ ಸಲ್ಲಿಸಿ, 2021ರ ಸೆ.28ರ ಹೈಕೋರ್ಟ್ ಏಕಸದಸ್ಯಪೀಠದ ಆದೇಶದಂತೆ ಸರ್ಕಾರ ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯನ್ನು ಪ್ರಕರಣವನ್ನು ಮರು ಪರಿಶೀಲನೆ ನಡೆಸಿ 2022ರ ಜೂ.30ರಂದು ವರದಿ ಸಲ್ಲಿಸಿತ್ತು. ವರದಿಯಲ್ಲಿ 10 ಶಿಫಾರಸು ಮಾಡಲಾಗಿದ್ದು, ಅದನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಹೇಳಿದ್ದರು.
ಅಲ್ಲದೆ, ಸಚಿವ ಸಂಪುಟ ಉಪ ಸಮಿತಿಯ ವರದಿ ಆಧರಿಸಿ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳದಂತೆ ಪೂಜಾ ವಿಧಿ ವಿಧಾನ ನೆರವೇರಿಸುವುದಕ್ಕೆ ಅವಕಾಶ ಕಲ್ಪಿಸಲು 2022ರ ಜು.1ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ದತ್ತಾತ್ರೇಯ ಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಮತ್ತು ಅರ್ಚಕರನ್ನು ನೇಮಿಸಲು 2022 ಜು.19ರಂದು ಆದೇಶಿಸಲಾಗಿದೆ. ಹಾಗೆಯೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಆ.13ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದರು.
*ಪ್ರಕರಣದ ಹಿನ್ನೆಲೆ*
ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ 2018ರಲ್ಲಿ ಆದೇಶಿಸಿತ್ತು. ಅದನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯಪೀಠ, ಪ್ರಕರಣವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಹಾಗೆಯೇ, ಪ್ರಕರಣದ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿ ಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು 2021ರ ಸೆ.28ರಂದು ನಿರ್ದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಗೌಸ್ ಮೊಹಿದ್ದೀನ್ ಮೇಲ್ಮನವಿ ಸಲ್ಲಿಸಿದ್ದಾರೆ.