ಒಂದಂಕಿ ಹಗರಣ : ಅಲೋಕ್ ಕುಮಾರ್ ಅಮಾನತು ರದ್ದು
ಬೆಂಗಳೂರು, ಅಕ್ಟೋಬರ್ 15 : ಕರ್ನಾಟಕ ಸರ್ಕಾರ ಒಂದಂಕಿ ಲಾಟರಿ ಹಗರಣದ ನಂಟು ಹೊಂದಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಅಮಾನತು ಆದೇಶವನ್ನು ಗುರುವಾರ ಹಿಂಪಡೆದಿದೆ.
ಒಂದಂಕಿ ಲಾಟರಿ ಹಗರಣದ ತನಿಖೆ ನಡೆಸುತ್ತಿದ್ದ ಸಿಐಡಿ ಹಗರಣದಲ್ಲಿ ಅಲೋಕ್ ಕುಮಾರ್ ಭಾಗಿಯಾಗಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿತ್ತು. ವರದಿ ಅನ್ವಯ ಸರ್ಕಾರ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಲೋಕ್ ಕುಮಾರ್ ಅವರನ್ನು 2015ರ ಮೇ 23ರಂದು ಅಮಾನತು ಮಾಡಿತ್ತು. [ಅಲೋಕ್ ಕುಮಾರ್ ಅಮಾನತು]

ಗುರುವಾರ ಅಮಾನತು ಆದೇಶ ಹಿಂಪಡೆದಿರುವ ಸರ್ಕಾರ ಅಲೋಕ್ ಕುಮಾರ್ ಅವರ ವಿರುದ್ಧದ ಇಲಾಖಾ ತನಿಖೆಯನ್ನು ಜಾರಿಯಲ್ಲಿಟ್ಟು ನೇಮಕಾತಿ ಆದೇಶ ಹೊರಡಿಸಿದೆ. ಅಲೋಕ್ ಕುಮಾರ್ ಅವರು ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.[ಸಿಐಡಿ ಪ್ರಶ್ನೆಗಳಿಗೆ ಅಲೋಕ್ ಕುಮಾರ್ ಉತ್ತರವೇನು?]
ವರ್ಗಾವಣೆ ಮಾಡಲಾಗಿತ್ತು : ಅಮಾನತ್ತಿನಲ್ಲಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಜೂನ್ 12ರಂದು ಬಡ್ತಿ ನೀಡಿ, ವರ್ಗಾವಣೆ ಮಾಡಲಾಗಿತ್ತು. ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರ ಸ್ಥಾನಕ್ಕೆ ಸಿ.ಎಚ್.ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರ ಅಲೋಕ್ ಕುಮಾರ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಿತ್ತು.[ಅಲೋಕ್ ಕುಮಾರ್ ವರ್ಗಾವಣೆ]
ಅಲೋಕ್ ಕುಮಾರ್ ಅವರ ಅಮಾನತು ಆದೇಶ ರದ್ದಾಗಿರುವುದರಿಂದ ಅವರು ಐಜಿಪಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ರಾಜ್ಯ ಸರ್ಕಾರ ಅವರ ಮೇಲೆ ನಡೆಯುತ್ತಿದ್ದ ಇಲಾಖಾ ತನಿಖೆಯನ್ನು ಜಾರಿಯಲ್ಲಿಟ್ಟಿದ್ದು. ತನಿಖೆ ಮುಂದುವರೆಯಲಿದೆ. ಅಂದಹಾಗೆ ಕರ್ನಾಟಕ ಸರ್ಕಾರ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಐಗೆ ವಹಿಸಿದ್ದು, ತನಿಖೆ ನಡೆಯುತ್ತಿದೆ. [ಒಂದಂಕಿ ಲಾಟರಿ ದಂಧೆ : ಪಾರಿ 'ಕಿಂಗ್ ಪಿನ್' ಅಲ್ಲರೀ!]












Click it and Unblock the Notifications