ಉತ್ತರ ಕರ್ನಾಟಕಕ್ಕೆ ಸಿಹಿ ಸುದ್ದಿ ಕೊಟ್ಟ ಕರ್ನಾಟಕ ಸರ್ಕಾರ
ಬೆಂಗಳೂರು, ಫೆಬ್ರವರಿ 16 : ಉತ್ತರ ಕರ್ನಾಟಕ ಭಾಗದ ಹಲವಾರು ವರ್ಷಗಳ ಬೇಡಿಕೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಕೃಷ್ಣಭಾಗ್ಯ ಜಲ ನಿಗಮ ಸೇರಿದಂತೆ 10 ಕಚೇರಿಗಳನ್ನು ಸ್ಥಳಾಂತರ ಮಾಡಲು ಅಧಿಸೂಚನೆ ಹೊರಡಿಸಿದೆ.
ಪ್ರಾದೇಶಿಕವಾಗಿ ಹೊಂದಿಕೆಯಾಗುವ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು. ಈಗ ಸರ್ಕಾರ ಈ ಕುರಿತು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಕಚೇರಿಗಳ ಸ್ಥಳಾಂತರದ ಬಗ್ಗೆ ಚರ್ಚೆ ನಡೆದಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಆದರೆ, ಕಚೇರಿ ಮಾತ್ರ ಸ್ಥಳಾಂತರವಾಗಿರಲಿಲ್ಲ.

ಈಗ ಕರ್ನಾಟಕ ಸರ್ಕಾರ ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್) ಸೇರಿದಂತೆ 10 ಕಚೇರಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ.
ಸ್ಥಳಾಂತರವಾಗುವ ಕಚೇರಿಗಳ ಪಟ್ಟಿ
* ಕೃಷ್ಣ ಭಾಗ್ಯ ಜಲ ನಿಗಮ : ಆಲಮಟ್ಟಿ
* ಕರ್ನಾಟಕ ನೀರಾವರಿ ನಿಗಮ : ದಾವಣಗೆರೆ
* ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ (ವಿದ್ಯುತ್ ಮಗ್ಗಗಳ ಅಭಿವೃದ್ಧಿ ನಿಗಮ) : ಬೆಳಗಾವಿ
* ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ : ಬೆಳಗಾವಿ
* ಪುರಾತತ್ವ ಸಂಗ್ರಹಾಲಯಗಳ ನಿರ್ದೇಶಕರು, ಪರಂಪರೆ ಇಲಾಖೆ : ಹಂಪಿ
* ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಇದನ್ನು ವಿಭಾಗಿಸಲಾಗಿದ್ದು ಬೆಂಗಳೂರಲ್ಲೂ ಕಚೇರಿ ಇರಲಿದೆ : ಹುಬ್ಬಳ್ಳಿ
* ರಾಜ್ಯ ಮಾನವ ಹಕ್ಕುಗಳ ಆಯೋಗದ ಒಬ್ಬ ಸದಸ್ಯರ ಕಚೇರಿ : ಧಾರವಾಡ
* ರಾಜ್ಯ ಮಾಹಿತಿ ಆಯೋಗದ ಆಯುಕ್ತರಲ್ಲಿ ಒಬ್ಬರು : ಬೆಳಗಾವಿ
* ರಾಜ್ಯ ಮಾಹಿತಿ ಆಯೋಗದ ಆಯುಕ್ತರಲ್ಲಿ ಒಬ್ಬರು : ಕಲಬುರಗಿ
* ಲೋಕಾಯುಕ್ತ ಕಚೇರಿಯ ಒಬ್ಬರು ಉಪ ಲೋಕಾಯುಕ್ತರ ಕಚೇರಿ : ಧಾರವಾಡ












Click it and Unblock the Notifications