ಡೆಲಿವರಿ ಸಿಬ್ಬಂದಿಗೆ ಭರ್ಜರಿ ಸಿಹಿಸುದ್ದಿ, ಗಿಗ್ ಕಾರ್ಮಿಕರ ಮಂಡಳಿ ರಚನೆಗೆ ಸರ್ಕಾರ ತೀರ್ಮಾನ
ಸ್ವಿಗ್ಗಿ, ಜೊಮಾಟೋ, ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್ ಸೇರಿದಂತೆ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗಿಗ್ ಕಾರ್ಮಿಕರಿಗೆ (ಸ್ವತಂತ್ರ್ಯ ಉದ್ಯೋಗಿಗಳು) ರಾಜ್ಯ ಸರ್ಕಾರವು 4 ಲಕ್ಷ ಮೌಲ್ಯದ ವಿಮೆ ಘೋಷಿಸಿದೆ. ಮುಂದುವರಿದಂತೆ ಗಿಗ್ ಕಾರ್ಮಿಕರ ನೆರವಿಗಾಗಿ ಸರ್ಕಾರವು ಇದೀಗ ರಾಜ್ಯದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ತೀರ್ಮಾನಿಸಿದೆ. ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜೊತೆ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಅಸಂಘಟಿತ ವಲಯದ ಈ ಕಾರ್ಮಿಕರಿಗೆ ಮೊದಲ ಬಾರಿಗೆ ಅಪಘಾತ ವಿಮೆ ಘೋಷಣೆ ಮಾಡಿದ್ದ ಕರ್ನಾಟಕ ಸರ್ಕಾರವು ಈಗ ಇನ್ನೊಂದು ಮಹತ್ವದ ನಿರ್ಧಾರ ಕೈಗೊಂಡು ಶ್ರಮಜೀವಿಗಳ ಬಗೆಗಿನ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೂ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಪರವಾಗಿ ಧ್ವನಿ ಎತ್ತಿದ್ದರು. ನಂತರ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹತ್ತಾರು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳಿಗಾಗಿ ಮುಂದಾಗಿತ್ತು ಎಂದಿದ್ದಾರೆ.

ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸುವ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದ್ದು, ಇದಕ್ಕೆ ಸಂಬಂಧಿತ ಸಂಸ್ಥೆಗಳಿಂದ ಶೇ 5ರಷ್ಟು ಸೆಸ್ ಸಂಗ್ರಹಿಸುವುದು ಹಾಗೂ ಉಳಿದ ಅಗತ್ಯ ಹಣವನ್ನು ಸರ್ಕಾರವೇ ಭರಿಸಿ, ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸುವುದು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಮೆಜಾನ್, ಫ್ಲಿಪ್‌ಕಾರ್ಟ್, ಓಲಾ, ಉಬರ್ ಮತ್ತು ಗಿಗ್ ಕೆಲಸಗಾರರನ್ನು ನೇಮಿಸಿಕೊಳ್ಳುವ ಇತರ ಕಂಪನಿಗಳಿಂದ 5% ಸೆಸ್ ಸಂಗ್ರಹಿಸಲಾಗುವುದು. ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಅಗತ್ಯವಿರುವ ಉಳಿದ ಹಣವನ್ನು ರಾಜ್ಯ ಸರ್ಕಾರ ಒದಗಿಸುತ್ತದೆ ಎಂದಿದ್ದಾರೆ.
ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗೆ ಮನವಿ
ದೆಹಲಿಯಲ್ಲಿ ಬೀಡುಬಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಮನವಿ ಪತ್ರ ನೀಡಿದ್ದಾರೆ. ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳು ಹಾಗೂ ಇದಕ್ಕೆ ಸಂಬಂಧಿಸಿದ ವಿಷಯಗಳಿಗೆ ಅನುಮತಿ ನೀಡುವುದಕ್ಕೆ ನಾನು ತಮ್ಮ ಗಮನ ಸೆಳೆಯಬಯಸುತ್ತೇನೆ. ಕೇಂದ್ರ ಸರ್ಕಾರದ ಅನುಮತಿಗಾಗಿ ಬಾಕಿಯಿರುವ ಕರ್ನಾಟಕದ ಮೇಕೆದಾಟು ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಅನುಷ್ಠಾನದ ಕುರಿತು ತಾವು ವೈಯಕ್ತಿಕವಾಗಿ ಗಮನ ಹರಿಸಲು ಮನವಿ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳಿಗೆ, ಪ್ರಸ್ತಾವನೆಗಳಿಗೆ ಅನುಮತಿ ನೀಡಲು ಜಲಶಕ್ತಿ ಸಚಿವಾಲಯಕ್ಕೆ ತಾವು ನಿರ್ದೇಶನ ನೀಡಬೇಕು. ಈ ಯೋಜನೆಗಳು ರಾಜ್ಯದ ನೀರಾವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆ ಮೂಲಕ ರೈತರ ಕಲ್ಯಾಣಕ್ಕೆ ನೆರವಾಗಲಿದೆ ಎಂದು ಮನವಿ ಮಾಡಿದ್ದಾರೆ.
ದೇಶದಲ್ಲೇ ರಾಜಸ್ಥಾನವನ್ನು ಹೊರತುಪಡಿಸಿದರೆ, ಕರ್ನಾಟಕ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯ. ಕರ್ನಾಟಕದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಗೂ ಅನುಷ್ಠಾನಗೊಳಿಸಿರುವ ನೀರಾವರಿ ಯೋಜನೆಗಳು, ರಾಜ್ಯದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿವೆ. ಉತ್ಪಾದನೆಯಲ್ಲಿ ಹೆಚ್ಚಳ, ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನೀರಿನ ನಿರ್ವಹಣೆಯಲ್ಲಿ ಸುಧಾರಣೆ, ಹವಾಮಾನ ವೈಪರೀತ್ಯದ ನಿರ್ವಹಣೆ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ರಾಜ್ಯ ಸರ್ಕಾರ ಕೃಷಿ ಉತ್ಪಾದನೆ ಹೆಚ್ಚಳ, ರೈತರ ಆದಾಯ ಹೆಚ್ಚಳ ಮಾಡಲು ಪೂರಕವಾಗಿ ನಿರಂತರ ಮತ್ತು ಸಮರ್ಪಕ ನೀರಾವರಿ ಪೂರೈಕೆಗೆ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications