ಸರ್ಕಾರದಿಂದ 1 ಲಕ್ಷ ಕುಟುಂಬಗಳಿಗೆ ಡಿಜಿಟಲ್ ಹಕ್ಕುಪತ್ರ ವಿತರಣೆ, ಯಾವಾಗ?
ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆ ಜನಪರ ಆಡಳಿತಕ್ಕೆ ಸಾಕ್ಷಿಯಾಗಿ ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ. ಮೇ 20ರಂದು ಡಿಜಿಟಲ್ ಹಕ್ಕುಪತ್ರ ವಿತರಣೆ ನಡೆಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಸಂಬಂಧ ಅವರು ವಿಕಾಸಸೌಧದಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಕೂಡ ನಡೆಸಿದ್ದಾರೆ.
ಹಾಡಿ, ಹಟ್ಟಿ, ತಾಂಡಾಗಳು ಸೇರಿದಂತೆ ಜನ ವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಅಂಗೀಕರಿಸದ ಕಾರಣ ಅಲ್ಲಿನ ನಿವಾಸಿಗಳು ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಕೊಡಲು ಕಳೆದ ಎರಡು ವರ್ಷದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಂತೆ ಹಟ್ಟಿ, ತಾಂಡಾ ನಿವಾಸಿಗಳ ತ್ರಿಶಂಕು ಸ್ಥಿತಿ ನಿವಾರಿಸಲು ಹಾಗೂ ಅವರಿಗೆ ಶಾಶ್ವತ ನೆಮ್ಮದಿ ನೀಡುವ ಸಲುವಾಗಿ ತಾಂಡಾಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಹಟ್ಟಿ, ತಾಂಡಾ ನಿವಾಸಿಗಳ ಮನೆಗಳಿಗೆ ಕಾನೂನಿನ ಆಸರೆ ನೀಡಬೇಕು ಎಂಬ ಉದ್ದೇಶದಿಂದ 2016-17ರಲ್ಲೇ ಅಂದಿನ ಕಾಂಗ್ರೆಸ್ ಸರ್ಕಾರ ಸೂಕ್ತ ಕಾನೂನು ತಂದಿತ್ತು. ಇದರ ಸಹಾಯದಿಂದ ಹಿಂದಿನ ಸರ್ಕಾರ ಐದು ವರ್ಷದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿತ್ತು. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಕೇವಲ ಒಂದೂವರೆ ವರ್ಷದಲ್ಲಿ 3,221 ಜನ ವಸತಿ ಪ್ರದೇಶಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೊಸಪೇಟೆಯಲ್ಲಿ ಕಾರ್ಯಕ್ರಮ
ಈ ಪ್ರಕಾರ 14,62,344 ಕುಟುಂಬಗಳಿಗೆ 94ಡಿ ಕರ್ನಾಟಕ ಭೂ ಕಂದಾಯ ಕಾನೂನಿನಡಿ ಹಕ್ಕುಪತ್ರ ನೀಡಲು ತಯಾರಾಗಿದೆ. ಮೇ 20ರಂದು 1 ಲಕ್ಷ ಕುಟುಂಬಗಳಿಗೆ ಹೊಸಪೇಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಹಕ್ಕುಪತ್ರ ವಿತರಿಸಲಿದ್ದಾರೆ. ಈ ವರ್ಷದ ಅಂತ್ಯಕ್ಕೆ ಹಲವು ಕಾರಣಗಳಿಂದಾಗಿ ಬಿಟ್ಟುಹೋದ ಜನ ವಸತಿ ಪ್ರದೇಶಗಳನ್ನೂ ಗುರುತಿಸಿ, ಕನಿಷ್ಠ 2 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.

ಫಲಾನುಭವಿಗಳಿಗೆ ಡಿಜಿಟಲ್ ಹಕ್ಕುಪತ್ರ ನೀಡುವ ಮೂಲಕ ಮುಂದಿನ ದಿನಗಳಲ್ಲಿ ನಡೆಯಬಹುದಾದ ಅಕ್ರಮಗಳಿಗೂ ತಡೆಯೊಡ್ಡಿ ಅವರಿಗೆ ಶಾಶ್ವತ ನೆಮ್ಮದಿ ನೀಡಲಾಗುವುದು. ಮೊದಲೆಲ್ಲ ಹಕ್ಕುಪತ್ರಗಳನ್ನು ಕಾಗದದಲ್ಲಿ ನೀಡಲಾಗುತ್ತಿತ್ತು. ಕೆಲವೊಮ್ಮೆ ಹಕ್ಕುಪತ್ರಗಳಿಗೆ ಮೂಲಪತ್ರ ಇಲ್ಲದೆ ಬೆಲೆ ಇಲ್ಲದಂತಾಗುತ್ತಿತ್ತು. ಕಾಗದ ಹಕ್ಕುಪತ್ರಗಳನ್ನು ತಿದ್ದುವ ಮೂಲಕ ವ್ಯಾಜ್ಯಗಳು ಉಂಟಾಗಿರುವ ಉದಾಹರಣೆಗಳು ಸಾಕಷ್ಟಿವೆ. ಈ ಕಾರಣಕ್ಕೆ ಡಿಜಿಟಲ್ ಹಕ್ಕುಪತ್ರ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಮೂಲ ದಾಖಲೆ ಕಳೆದು ಹೋಗುವ ಅಥವಾ ದಾಖಲೆಗಳನ್ನು ತಿದ್ದುವ ಪ್ರಶ್ನೆಯೇ ಇಲ್ಲ. ಇದಲ್ಲದೆ, ಸರ್ಕಾರದಿಂದ ಕ್ರಯ ಪತ್ರದ ಮೂಲಕ ನೋಂದಣಿ ಮಾಡಿಸಿ ಸ್ಥಳೀಯ ಸಂಸ್ಥೆಯಿಂದ ಖಾತೆಯೂ ಮಾಡಿಕೊಡಲಾಗುವುದು. ಇದರಿಂದ ಫಲಾನುಭವಿಗಳು ಮತ್ತೆ ಸರ್ಕಾರಿ ಕಚೇರಿಗಳಿಗೆ ಅಲೆಯುವ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ವರ್ಷಾಂತ್ಯದೊಳಗೆ ಪೋಡಿ ದುರಸ್ಥಿ
ದಶಕಗಳ ಹಿಂದೆ ಸರ್ಕಾರದಿಂದ ಭೂ ಮಂಜೂರಾಗಿದ್ದರೂ ಪಕ್ಕಾ ದಾಖಲೆಗಳಲ್ಲಿದೆ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಈ ವರ್ಷಾಂತ್ಯದೊಳಗೆ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪೋಡಿ ದುರಸ್ಥಿ ಮಾಡಿಕೊಡಲಾಗುವುದು. ರೈತರಿಗೆ ಕಳೆದ 60 ವರ್ಷಗಳಿಂದ ನಾನಾ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಭೂ ಮಂಜೂರಾಗಿದೆ. ಆದರೆ ರೈತರು ಆ ಜಮೀನಿನಲ್ಲಿ ಅನುಭೋಗದಲ್ಲಿದ್ದಾರೆ. ಪಹಣಿಯಲ್ಲಿ ಅವರ ಹೆಸರಿದೆ ಎಂಬುದನ್ನು ಬಿಟ್ಟರೆ, ಬೇರೆ ಯಾವ ದಾಖಲೆಗಳೂ ಇಲ್ಲ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರೈತರು ಪಕ್ಕಾ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಕಳೆದ ಜನವರಿ ತಿಂಗಳಿಂದ ರಾಜ್ಯಾದ್ಯಂತ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಕಂದಾಯ ಮತ್ತು ಸರ್ವೇ ಇಲಾಖೆ ಒಟ್ಟಾಗಿ ಸಾಕಷ್ಟು ಅಧ್ಯಯನ ನಡೆಸಿ ಪೋಡಿ ದುರಸ್ಥಿ ಕೆಲಸಕ್ಕೆ ಸರಳೀಕೃತ ನಿಯಮ ರಚಿಸಿ ಅಧಿಸೂಚನೆ ಹೊರಡಿಸಿತ್ತು. ಕಳೆದ ಸರ್ಕಾರದ ಅವಧಿಯಲ್ಲಿ ಐದು ವರ್ಷದಲ್ಲಿ ಕೇವಲ 5800 ಜನರಿಗೆ ಮಾತ್ರ ಪೋಡಿ ದುರಸ್ಥಿ ಮಾಡಿಕೊಡಲಾಗಿತ್ತು. ಆದರೆ, ಪ್ರಸ್ತುತ ಕಳೆದ ಜನವರಿಯಿಂದ ಈವರೆಗೆ 88,886 ಮಂಜೂರಿದಾರರದ್ದು ನಾವೇ ಖುದ್ದಾಗಿ ಮನೆ ಮನೆಗೆ ತೆರಳಿ 1-5 ದಾಖಲೆ ಸಿದ್ದಪಡಿಸಿದ್ದೇವೆ. ಈ ಪೈಕಿ 30,476 ಪ್ರಕರಣಗಳಲ್ಲಿ ಸರ್ವೇ ಇಲಾಖೆಯಿಂದ ಅಳತೆ ಕೆಲಸವನ್ನೂ ಕೈಗೆತ್ತಿಕೊಂಡಿದ್ದೇವೆ. ಪ್ರತಿ ತಿಂಗಳೂ 5,000 ಪ್ರಕರಣಗಳಲ್ಲಿ ಸರ್ವೇ ಕೆಲಸ ಮಾಡಬೇಕು ಎಂಬ ಗುರಿ ನೀಡಲಾಗಿದೆ ಎಂದಿದ್ದಾರೆ.
ಎಲ್ಲ ಸರ್ಕಾರಿ ಜಮೀನುಗಳು ಮೂರು-ನಾಲ್ಕು ತಲೆಮಾರುಗಳ ಹಿಂದೆ ಮಂಜೂರಾಗಿದ್ದು, ಪ್ರತಿ ಅರ್ಜಿಯ ಹಿಂದೆಯೂ 5ರಿಂದ 15 ಜನ ವಾರಸುದಾರರಿದ್ದಾರೆ. ಎಲ್ಲರಿಗೂ ಪೋಡಿ ದುರಸ್ಥಿ ಮಾಡಿ ಈ ವರ್ಷಾಂತ್ಯದಲ್ಲಿ ಪಕ್ಕಾ ದಾಖಲೆ ಮಾಡುವ ಗುರಿ ಇದೆ. ಒಂದು ವೇಳೆ ಅನಿವಾರ್ಯ ಕಾರಣಗಳಿಂದಾಗಿ ಕೆಲವು ಪ್ರಕರಣಗಳು ಬಾಕಿ ಉಳಿದರೆ, ಮುಂದಿನ ವರ್ಷದೊಳಗೆ ಎಲ್ಲ ಪ್ರಕರಣಗಳನ್ನೂ ಮುಗಿಸಲು ಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ಭೂ ಸುರಕ್ಷಾ ಯೋಜನೆಯಡಿಯಲ್ಲಿ ವರ್ಷಾಂತ್ಯದೊಳಗೆ ತಹಶೀಲ್ದಾರ್ ಕಚೇರಿಗಳಲ್ಲಿರುವ ಎಲ್ಲ ಮೂಲ ಕಡತಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗುವುದು. ರೈತರು ತಹಶೀಲ್ದಾರ್ ಕಚೇರಿಗಳಲ್ಲಿ ತಮ್ಮ ಭೂ ದಾಖಲೆಗಳನ್ನು ತೆಗೆದುಕೊಳ್ಳಲು ಸಾಕಷ್ಟು ಪರದಾಡುತ್ತಿದ್ದರು. ಎಷ್ಟೋ ದಾಖಲೆಗಳು ಕಳೆದೇ ಹೋಗಿದ್ದರೆ, ದಾಖಲೆಗಳನ್ನು ಕಾನೂನು ಬಾಹಿರವಾಗಿ ತಿದ್ದುವ ಮೂಲಕ ರೈತರನ್ನು ಕೋರ್ಟು ಕಚೇರಿಗಳಿಗೆ ಅಲೆದಾಡಿಸಲಾಗುತ್ತಿದೆ. ರೈತರಿಗೆ ಈ ಎಲ್ಲ ಶೋಷಣೆಗಳಿಂದ ಮುಕ್ತಿ ನೀಡಲು ಭೂ ಸುರಕ್ಷಾ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆ ಯಶಸ್ವಿಯಾದರೆ ಹಲವು ಅಕ್ರಮಗಳನ್ನು ತಡೆಯಬಹುದು. ರೈತರು ಅನಗತ್ಯವಾಗಿ ಸರ್ಕಾರಿ ಕಚೇರಿ ಅಲೆಯುವುದನ್ನು ತಪ್ಪಿಸುವುದರ ಜೊತೆಗೆ ಮನೆಯಿಂದ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ದಾಖಲೆ ಪಡೆದುಕೊಳ್ಳಬಹುದು ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.












Click it and Unblock the Notifications