ಸುಧಾಕರ್ಗೆ ಸಂಕಷ್ಟ: ಚಾಮರಾಜನಗರ ಆಸ್ಪತ್ರೆ ದುರಂತದ ಬಗ್ಗೆ ಹೊಸದಾಗಿ ತನಿಖೆಗೆ ದಿನೇಶ್ ಗುಂಡೂರಾವ್ ಸೂಚನೆ
ಬೆಂಗಳೂರು,ಮೇ 31: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯ ಬೆನ್ನಲೇ ಬಿಜೆಪಿ ನಾಯಕರನ್ನ ನಿದ್ದೆಗೆಡಿಸುವಂತೆ ಮಾಡಿದೆ. ಈ ಹಿಂದೆ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಆಡಳಿತ ನಡೆಸಿದ್ದ ಬಿಜೆಪಿಯ ಹಗರಣಗಳು ಹಾಗೂ ಭ್ರಷ್ಟಚಾರಗಳ ವಿರುದ್ದ ಕಾಂಗ್ರೆಸ್ ಸರ್ಕಾರ ತನಿಖೆಯ ಅಸ್ತ್ರವನ್ನ ಪ್ರಯೋಗಿಸಿದೆ.
ಈಗಾಗಲೇ ಹಲವು ಹಗರಣಗಳ ವಿರುದ್ದ ತನಿಖೆಗೆ ಚಿಂತನೆ ನಡೆಸಿದ್ದ ಸರ್ಕಾರ, ಇದೀಗ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿರುವ ವಿವಿಧ ಹಗರಣಗಳ ಆರೋಪಗಳ ಬಗ್ಗೆ ಹೊಸದಾಗಿ ತನಿಖೆ ಪ್ರಾರಂಭಿಸಲು ಮುಂದಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 36 ರೋಗಿಗಳು ಮೃತಪಟ್ಟಿದ್ದಕ್ಕೆ ಸಂಬಂಧಿಸಿದ ಆರೋಪ ಮತ್ತು ಇತರ ಹಗರಣಗಳ ಬಗ್ಗೆ ತನಿಖೆ ನಡೆಸುವಂತೆ ಇಲಾಖೆಯ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ಸೂಚಿಸಿದರು.
ಇನ್ನೂ ಈ ದುರಂತ ಸಂಭವಿಸಿದ್ದ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಆರೋಗ್ಯ ಸಚಿವರಾಗಿ ಡಾ. ಕೆ ಸುಧಾಕರ್ ಆರೋಗ್ಯ ಸಚಿವರಾಗಿದ್ದರು. ಘಟನೆ ಸಂಬಂಧ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕೋವಿಡ್ ನಿರ್ವಹಣಾ ಸಮಿತಿಯು ಹೈಕೋರ್ಟ್‌ಗೆ ಈಗಾಗಲೇ ವರದಿ ಸಲ್ಲಿಸಿದ್ದು, ಮೇ 2-3, 2021 ರ ರಾತ್ರಿ 36 ಒಳರೋಗಿಗಳ ಸಾವಿಗೆ ಆಮ್ಲಜನಕದ ಲಭ್ಯತೆ ಕೊರತೆಯೇ ಕಾರಣ ಎಂದು ಉಲ್ಲೇಖಿಸಿದೆ.
ಚಾಮರಾಜನಗರದ ಸರ್ಕಾರಿ ಆಸ್ಪತ್ರೆ ದುರಂತದ ಕುರಿತು ವಿಧಾನಸೌಧದಲ್ಲಿ ತಮ್ಮ ಇಲಾಖೆಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚವ ದಿನೇಶ್ ಗುಂಡೂರಾವ್, ಸಾವಿಗೆ ಯಾರು ಹೊಣೆ ಮತ್ತು ತಪ್ಪಿತಸ್ಥರು ಯಾರು ಎಂಬುದರ ಪತ್ತೆಗೆ ಯಾವುದೇ ತನಿಖೆ ನಡೆದಿಲ್ಲ. ಹೀಗಾಗಿ ತಕ್ಷಣ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.












Click it and Unblock the Notifications