PSI Scam: ಸಿಎಂ ಕೈ ಸೇರಿದ ಅಕ್ರಮದ ವರದಿ, ಶೀಘ್ರವೇ ಸೂಕ್ತ ನಿರ್ಧಾರ: ಜಿ.ಪರಮೇಶ್ವರ
ಬೆಂಗಳೂರು, ಜನವರಿ 23: ಅಗತ್ಯ ಮುಂಜಾಗ್ರತೆ, ಎಚ್ಚರಿಕೆ ಕ್ರಮಗಳ ಸಹಿತ ಪಿಎಸ್ಐ ಮರುಪರೀಕ್ಷೆ (PSI reexam) ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಕಳೆದ ಬಾರಿ ನಡೆದ ಪಿಎಸ್‌ಐ ಅಕ್ರಮ ಬಗ್ಗೆ ವರದಿ ನೋಡಿಕೊಂಡು ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ಪಿಎಸ್ಐ ಪರೀಕ್ಷೆ ಇಂದು ನಡೆಯುತ್ತಿದೆ. ಕಳೆದ ಬಾರಿ ರೀತಿ ಆಗದಂತೆ ಈ ಪರೀಕ್ಷೆಯನ್ನು ಎಚ್ಚರಿಕೆಯಿಂದ ನಡೆಸುತ್ತಿದ್ದೇವೆ. ಹೈಕೋರ್ಟ್ ಆದೇಶದ ಪ್ರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಪಿಎಸ್‌ಐ ಅಕ್ರಮದ ವರದಿ ಸಿಎಂ ಕೈಗೆ
ಕಳೆದ ಬಾರಿ ಅಕ್ರಮದ ಕುರಿತು ನ್ಯಾ. ವೀರಪ್ಪ ಅವರ ಆಯೋಗದ ವರದಿ ಕೊಟ್ಟಿದೆ. ನಾನು ಆ ವರದಿಯನ್ನು ನೋಡಿಲ್ಲ. ಸದ್ಯ ವರದಿ ಮುಖ್ಯಮಂತ್ರಿಗಳ ಕೈ ಸೇರಿದೆ. ಆ ವರದಿಯಲ್ಲಿ ಏನು ಶಿಫಾರಸು ಮಾಡಿದ್ದಾರೋ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಅದರಲ್ಲಿ ಯಾರ ಹೆಸರು ಇದೆ ಎಂಬುದು ಗೊತ್ತಿಲ್ಲ. ನಾವೆಲ್ಲ ಸಿಎಂ ಜೊತೆ ಕುಳಿತು ವರದಿ ವಿಶ್ಲೇಷಣೆ ಮಾಡುತ್ತೇವೆ.
ಆಡಿಯೋ ವೈರಲ್ ಪ್ರಕರಣಕ್ಕು ಪಿಎಸ್ಐ ಮರುಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಎಸ್ಐ ಲಿಂಗಯ್ಯ ಎಂಬುವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಆರೋಪಿತ ಎಸ್ಐ ಇಂಟಲಿಜೆನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಈ ಪರೀಕ್ಷೆಯಲ್ಲಿಯೂ ಅಕ್ರಮ ನಡೆಯುತ್ತಿರಬಹುದು. ಅದರ ಸುಳಿವು ಸಿಗಬಹುದು ಎಂಬ ನಿಟ್ಟಿನಲ್ಲಿ ನಕಲಿ (Fake call) ಕರೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಸಿಸಿಬಿ ಅವರು ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಶಾಂತಿ ಸಂದೇಶ ಸಾರಲು 'ರಾಗಾ' ಯಾತ್ರೆ
ರಾಹುಲ್ ಗಾಂಧಿ ಅವರು ಹಿಂದೆ ಭಾರತ್ ಜೋಡೋ ಪಾದ ಯಾತ್ರೆ ಮಾಡಿದ್ದರು. ದೇಶದಲ್ಲಿ ಒಳ್ಳೆಯ ವಾತಾವರಣ ಮೂಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಇರಬೇಕು ಎಂಬುದೇ ಅವರ ಪಾದಯಾತ್ರೆಯ ಉದ್ದೇಶವಾಗಿದೆ. ಅದು ಮುಂದುವರೆದ ಭಾಗವಾಗಿ ಈಗ 6 ಸಾವಿರ ಕಿ.ಮೀ ಮತ್ತೆ ಪಾದಯಾತ್ರೆ ಆರಂಭಿಸಿದ್ದಾರೆ. ಅದು ಶಾಂತಿಯುತವಾಗಿ ಕೈಗೊಂಡಿದ್ದಾರೆ. ಶಾಂತಿ ಸಂದೇಶ ಸಾರಲು ಯಾತ್ರೆ ನಡೆಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ರಾಗಾ' ಯಾತ್ರೆಯಿಂದ ಬಿಜೆಪಿ ಭಯ?: ಪರಮೇಶ್ವರ
ಬಿಜೆಪಿಯವರು ಉದ್ದೇಶಪೂರ್ವಕವಾಗಿ ಪಾದಯಾತ್ರೆ ತಡೆಯುತ್ತಿದ್ದಾರೆ. ಯಾತ್ರಿಗಳ ಮೇಲೆ ಗಲಾಟೆ ಮಾಡಿಸುತ್ತಿದ್ದಾರೆ. ಯಾತ್ರೆಯಿಂದ ಬಿಜೆಪಿಗೆ ಭಯ ಅಗುತ್ತಿರಬಹುದು. ಅಸ್ಸಾಂ ಮುಖ್ಯಮಂತ್ರಿಗೆ ಏನು ನೋವಿದೆಯೋ ಗೊತ್ತಿಲ್ಲ. ಅವರು ನಮ್ಮ ಪಕ್ಷದಲ್ಲಿ ಇದ್ದವರು. ಇಂತಹ ಯಾತ್ರೆಗೆ ಅವಕಾಶ ಕೊಡಲಿಲ್ಲ ಅಂದರೆ ಹೇಗೆ?. ರಾಹುಲ್ ಗಾಂಧಿಗೆ ಹೀಗೆ ಆದರೆ, ದೇಶದಲ್ಲಿನ ಸಾಮಾನ್ಯ ಜನರ ಕಥೆ ಏನು? ಎಂದು ಅವರು ಪ್ರಶ್ನಿಸಿದರು.

ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರರನ್ನು ನೇಮ ಮಾಡವಾಗ ನಮ್ಮ ಅಭಿಪ್ರಾಯವನ್ನು ಯಾರು ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿದ್ದೇನೆ. ಆದರೆ, ನಮ್ಮ ಜತೆ ಮಾತಾಡಿ ಪಟ್ಟಿ ಮಾಡಿಲ್ಲ. ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮುಖಂಡರ ಕೆಲಸ ನಮಗೆ ಗೊತ್ತಿರುತ್ತದೆ. ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಇದ್ದಾರೆ. ಆಯ್ಕೆ ವಿಚಾರದ ಜವಾಬ್ದಾರಿಯನ್ನು ಅವರಿಗೆ ಬಿಡಬೇಕು ಎಂದರು.
ದುಡಿದವರಿಗೆ ಅಧಿಕಾರ ಕೊಡಬೇಕು
ನಾನು ಸಹ 8 ವರ್ಷ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಯಾರು ಯಾರು ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಹತ್ತಾರು ವರ್ಷ ಪಕ್ಷಕ್ಕೆ ದುಡಿದವರಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರುವುದರಿಂದ ಹೀಗೆ ಆಗಿದೆ. ಕೆಲಸ ಮಾಡದವರಿಗೆ ಅಧಿಕಾರ ಕೊಟ್ಟರೆ, ಕೆಲಸ ಮಾಡಿರುವರಿಗೆ ನೋವು, ಅಸಮಾಧಾನವಾಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಲಹೆಗಳನ್ನು ಕೇಳಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೈ ಶ್ರೀರಾಮ್ ಅಂದರೆ ತಪ್ಪೇನು?: ಸಚಿವರ ಪ್ರಶ್ನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಅಂದರೆ ತಪ್ಪೇನು. ನಾವೆಲ್ಲರೂ ಜೈ ಶ್ರೀರಾಮ್ ಅಂತ ಹೇಳಿದ್ದೇವೆ. ಹೇಳದೇ ಇದ್ದರೆ ಶ್ರೀರಾಮನ ವಿರೋಧ ಅಂತಾರೆ. ಹೇಳಿದರೆ ಹೀಗೆ ಅಂತಾರೆ. ಇದರಲ್ಲಿ ಯಾವುದು ಸರಿ ಎಂದರು.
ನಾವೆಲ್ಲ ಶ್ರೀರಾಮನ ಭಕ್ತರೇ. ಒಂದಲ್ಲ ಒಂದು ರೀತಿ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಅಂತ ಹೇಳುತ್ತೀವಿ. ಶ್ರೀರಾಮ ಬರೀ ನಾಲ್ಕು ಜನಕ್ಕೆ ಸೀಮಿತವಲ್ಲ. ನಮಗೆ ದಶರಥ ರಾಮ ಬೇಕು. ಮೋದಿಯ ರಾಮ ಬೇಕಾಗಿಲ್ಲ. ನಮಗೆ ಈ ದೇಶವನ್ನು ರಾಮರಾಜ್ಯ ಮಾಡಿದ ದಶರಥ ರಾಮ ಬೇಕೆ ಹೊರತು. ರಾಮನ ಹೆಸರು ಹೇಳಿಕೊಂಡು ಒಡೆದಾಳುವ ನೀತಿ ಆಚರಣೆ ಮಾಡುವವರು ಬೇಕಿಲ್ಲ ಎಂದು ಹೇಳಿದರು.












Click it and Unblock the Notifications