ಭೂ ಕಬಳಿಕೆದಾರರಿಗೆ ಶಾಕ್ ಕೊಟ್ಟ ಸರ್ಕಾರ, ಅಧಿವೇಶನದಲ್ಲಿ ಮಹತ್ವದ ನಿರ್ಧಾರ
ರಾಜ್ಯ ಸರ್ಕಾರವು ಭೂಕಬಳಿಕೆದಾರರಿಗೆ ಶಾಕ್ ಕೊಟ್ಟಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಭೂಕಬಳಿಕೆದಾರರಿಗೆ ಬಿಸಿ ಮುಟ್ಟಿಸಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ ರಿಯಲ್ ಎಸ್ಟೇಟ್ ಹೆಸರಿನಲ್ಲಿ ಭೂಮಿಗೆ ದುಬಾರಿ ಬೆಲೆ ಇರುವ ಜಾಗಗಳಲ್ಲಿ ಕಬಳಿಕೆ ಮಿತಿಮೀರಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಭೂಕಬಳಿಕೆದಾರರಿಗೆ ವಾರ್ನಿಂಗ್ ಕೂಡ ನೀಡಿದೆ. ಬಗರ್ ಹುಕುಂ ಭೂಮಿ ಕಬಳಿಸುವವರಿಗೂ ಕಾನೂನಿನ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಮಾತನಾಡಿದ್ದಾರೆ. ಕಾನೂನು ಉಲ್ಲಂಘಿಸಿ, ಬಗರ್ ಹುಕುಂ ಭೂಮಿಯನ್ನು ಕಬಳಿಸಿರುವವರು ಹಾಗೂ ಅಕ್ರಮವಾಗಿ ನೆಲೆಸಿರುವವರಿಗೆ ಭೂಮಿ ಮಂಜೂರು ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖೆ ಶಿಸ್ತುಕ್ರಮ ತೆಗೆದುಕೊಳ್ಳಲಿದೆ. ಇದರ ಜೊತೆಗೆ ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಶಾಸಕ ರಮೇಶ್ ಬಾಬು ಅವರು ಈ ಬಗ್ಗೆ ಪ್ರಶ್ನೆ ಕೇಳಿದ್ದರು.

ಇದಕ್ಕೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಭೂ ಕಬಳಿಕೆದಾರರಿಗೆ ನೀಡುವ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಅಕ್ರಮದಲ್ಲಿ ಕೆಲ ಅಧಿಕಾರಿಗಳು ಭಾಗಿರುವುದು ಬೇಸರದ ಸಂಗತಿ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಸುಮಾರು 98 ಜನರಿಗೆ ರೈತರ ಹೆಸರಿನಲ್ಲಿ ಸಾಗುವಳಿ ಚೀಟಿ ನೀಡಿರುವ ಪ್ರಕರಣ ಇಲಾಖೆ ಗಮನಕ್ಕೆ ಬಂದಿದೆ. ಈ ನಕಲಿ ಸಾಗುವಳಿ ಚೀಟಿ ಮೇಲೆ ಖಾತೆಗೆ ಅರ್ಜಿ ಸಲ್ಲಿಸಿದ ಭೂ ಕಬಳಿಕೆದಾರರ ವಿರುದ್ಧ ಈಗಾಗಲೇ ಎಫ್ಐಆರ್ ಕೂಡ ದಾಖಲು ಮಾಡಲಾಗಿದೆ ಎಂದಿದ್ದಾರೆ.
ಅಧಿಕಾರಿಗಳ ವಿರುದ್ಧ ಎಫ್‌ಐಆರ್
ರೈತರ ಹೆಸರಿನಲ್ಲಿ ನಕಲಿ ಭೂ ಸಾಗುವಳಿ ಚೀಟಿ ನೀಡುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ತನಿಖಾ ತಂಡವನ್ನು ರೂಪಿಸಿ ಚಿಕ್ಕನಾಯಕನಹಳ್ಳಿಗೆ ಕಳುಹಿಸಿದ್ದೇವೆ. ಈ ತನಿಖೆ ಸದ್ಯ ಪ್ರಗತಿಯಲ್ಲಿದೆ. ಇನ್ನು ಅಧಿಕಾರಿಗಳ ಸಹಾಯವಿಲ್ಲದೆ ಕಡತಗಳನ್ನು ತಿದ್ದಲು ಸಾಧ್ಯವೇ ಇಲ್ಲ. ಹೀಗಾಗಿ 2018ರಿಂದ ಈವರೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಇಲಾಖೆಯಲ್ಲಿ ಉಸ್ತುವಾರಿ ವಹಿಸಿದ್ದ ಎಲ್ಲ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.
ನಕಲಿ ಸಾಗುವಳಿ ಚೀಟಿಯಲ್ಲಿರುವ ಅಧಿಕಾರಿಗಳ ಸಹಿ ಪೈಕಿ ಯಾರ ಸಹಿ ಅಸಲಿ, ಯಾರ ಸಹಿ ನಕಲಿ ಎಂದು ಪತ್ತೆ ಮಾಡುವ ಕೆಲಸದಲ್ಲಿ ತನಿಖಾ ತಂಡ ಕಾರ್ಯಪ್ರವೃತ್ತಿಯಾಗಿದೆ. ನಿಜವಾದ ಸಹಿ ತಾಳೆಗೆ ಸಂಬಂಧಿಸಿದ ವರದಿ ನೀಡಲು ಅಧಿಕಾರಿಗಳು ಇನ್ನೂ ಒಂದು ವಾರ ಸಮಯ ಕೇಳಿದ್ದಾರೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವರದಿ ಕೈ ಸೇರುತ್ತಿದ್ದಂತೆ ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹೂಡುವ ಜೊತೆಗೆ ಇಲಾಖೆಯಿಂದ ಶಿಸ್ತುಕ್ರಮ ಕೂಡ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಹಲವೆಡೆ ಬಗರ್ ಹುಕುಂ ಹೆಸರಲ್ಲಿ ಅಕ್ರಮಗಳು ವರದಿಯಾಗಿವೆ. ರೈತರ ಹೆಸರಿನಲ್ಲಿ ನಕಲಿ ಸಾಗುವಳಿ ಚೀಟಿ ನೀಡಿ ಭೂಕಬಳಿಕೆ ಮಾಡುವ ಮೂಲಕ ಅಕ್ರಮವಾಗಿ ನೆಲೆಯೂರಿರುವ ಪ್ರಕರಣಗಳಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಭೂಮಾಫಿಯಾ ವಿರುದ್ಧ ಕೇಸ್ ದಾಖಲಿಸಲು ಸರ್ಕಾರ ಮುಂದಾಗಿದೆ.












Click it and Unblock the Notifications