ಕರ್ನಾಟಕ: ವಿಮಾನ ನಿಲ್ದಾಣಗಳ ಹತ್ತಿರದ ಪ್ರದೇಶದಲ್ಲಿ 'ಕೈಗಾರಿಕಾ ಪಾರ್ಕುಗಳ' ನಿರ್ಮಾಣ
ಬೆಂಗಳೂರು, ಜನವರಿ 08: ಕರ್ನಾಟಕದಲ್ಲಿ ವಿಮಾನ ನಿಲ್ದಾಣಗಳಿಂದ ಸುಮಾರು 2 ಗಂಟೆ ರಸ್ತೆ ಪ್ರಯಾಣದ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸಿದರೆ ಹೆಚ್ಚಿನ ಹೂಡಿಕೆ ಸೆಳೆಯಲು ಅನುಕೂಲವಾಗುತ್ತದೆ ಎಂದು ಇನ್ವೆಸ್ಟ್ ಕರ್ನಾಟಕ ಫೋರಮ್ (ಐಕೆಎಫ್) ಸಹ-ಅಧ್ಯಕ್ಷರಾದ ಉದ್ಯಮಿ ಸಜ್ಜನ್ ಜಿಂದಾಲ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸೋಮವಾರ ಇನ್ವೆಸ್ಟ್ ಕರ್ನಾಟಕ ಫೋರಮ್ (ಐಕೆಎಫ್) ಪುನರ್ ರಚನೆ ನಂತರ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ವಿಮಾನ ನಿಲ್ದಾಣಗಳಿಗೆ ಹತ್ತಿರವಿರುವ ಪ್ರದೇಶಗಳನ್ಜು ಗುರುತಿಸಿ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸುವುದು ಸೂಕ್ತ ಎಂದು ತಿಳಿಸಿದರು..

ಕರ್ನಾಟಕದಲ್ಲಿ ನೆಲೆಸಿರುವ ಒಬ್ಬ ಉದ್ಯಮಿಯಾಗಿ ಈ ರಾಜ್ಯ ಹೂಡಿಕೆ ಮಾಡಲು ಎಷ್ಟು ಸೂಕ್ತ ಎಂಬುದು ನನಗೆ ಚೆನ್ನಾಗಿ ಗೊತ್ತು. ಇಲ್ಲಿನ, ಕಾರ್ಯಪರಿಸರವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಶಸ್ವಿ ಉದ್ದಿಮೆಗಳನ್ನು ಕಟ್ಟಬಹುದು.
ಸರ್ಕಾರವು ಪಾರ್ಕುಗಳ ನಿರ್ಮಾಣ ಉದ್ದೇಶ ಹೊಂದಿದೆ
ಸಜ್ಜನ್ ಅವರ ಈ ಸಲಹೆಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲರು, ಸುಮಾರು 5-10 ಸಾವಿರ ಎಕರೆಗಳಲ್ಲಿ ಇಂತಹ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೂ ಇದೆ. ಈ ಪಾರ್ಕುಗಳಲ್ಲಿ ಉದ್ದಿಮೆ ಸ್ಥಾಪನೆಗೆ ಅನುಕೂಲವಾಗುವಂತೆ ಪ್ಲಗ್- ಇನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 55,000 ಕೋಟಿ ರೂಪಾಯಿಯ ಹೂಡಿಕೆ ಖಾತರಿಯಾಗಿದೆ. ಉಳಿದಂತೆ 40,000 ಕೋಟಿಯಿಂದ 1 ಲಕ್ಷ ಕೋಟಿ ರೂಪಾಯಿವರೆಗಿನ ಹಲವು ಪ್ರಸ್ತಾವಗಳು ಬೇರೆ ಬೇರೆ ಹಂತದ ಪ್ರಕ್ರಿಯೆಯಲ್ಲಿವೆ ಎಂದು ಸಚಿವರು ಹೇಳಿದರು.
ಕೈಗಾರಿಕೆಯಲ್ಲಿನ ಬೆಳವಣಿಗೆ, ಆತ್ಮಾವಲೋಕನ
ಪುನರ್ ರಚಿತ ಐಕೆಎಫ್ ನಲ್ಲಿ ವಲಯಧಾರಿತ ಉಪಸಮಿತಿಗಳನ್ನು ರಚಿಸಿ ಹೂಡಿಕೆ ಆಕರ್ಷಿಸಲು ಒತ್ತು ನೀಡುವುದಕ್ಕೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಕಳೆದ ಆರು ತಿಂಗಳಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಅವಲೋಕಿಸುವ ಜೊತೆಗೆ ಮುಂದೆ ಇಡಬೇಕಾದ ಹೆಜ್ಜೆಗಳ ಬಗ್ಗೆಯೂ ಸಮಾಲೋಚಿಸಲಾಯಿತು ಎಂದು ಅವರು ತಿಳಿಸಿದರು.
ಐಕೆಎಫ್ ನಿರ್ದೇಶಕರಾದ ಕಿರ್ಲೊಸ್ಕರ್ ಸಿಸ್ಟೆಮ್ಸ್ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ಕೆನ್ನಮೆಟಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕೃಷ್ಣನ್ ವೆಂಕಟೇಶನ್ ಸಭೆಯಲ್ಲಿದ್ದರು. ಮತ್ತೊಬ್ಬ ನಿರ್ದೇಶಕ, ನೆಟ್ವರ್ಕ್ಸ್ ಸಹ ಸ್ಥಾಪಕ ಅಂಕಿತ್ ಫತೇಪುರಿಯ ಆನ್ಲೈನ್ ಮೂಲಕ ಪಾಲ್ಗೊಂಡಿದ್ದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಮುಖ್ಯ ನಿರ್ವಹಣಾಧಿಕಾರಿ ಸಿ.ಟಿ.ಮುದ್ದುಕುಮಾರ ಮತ್ತಿತರರು ಸಚಿವರ ಜತೆ ಸಭೆಯಲ್ಲಿದ್ದರು.












Click it and Unblock the Notifications