ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಶಿಕ್ಷಣ ನೀತಿ ಜಾರಿ ಡೌಟ್: ವರದಿ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ರಚನೆ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ರದ್ದುಗೊಳಿಸಲು ನಿರ್ಧರಿಸಿದ್ದ ಕರ್ನಾಟಕದ ಕಾಂಗ್ರೆಸ್ ಸರ್ಕಾರವು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ 'ಕರ್ನಾಟಕ ರಾಜ್ಯ ಶಿಕ್ಷಣ ನೀತಿ' (SEP) ಯನ್ನು ಜಾರಿಗೊಳಿಸುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಇಪಿ ಆಯೋಗದ ಅಂತಿಮ ಶಿಫಾರಸುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ.
ಯುಜಿಸಿ (UGC) ಮಾಜಿ ಅಧ್ಯಕ್ಷರಾಗಿರುವ ಎಸ್‌ಇಪಿ ಆಯೋಗದ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಅವರು ಆಗಸ್ಟ್ 9, 2025 ರಂದು 2,197 ಪುಟಗಳ ವಿಸ್ತೃತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು. ಮೂಲಗಳ ಪ್ರಕಾರ, ಈ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ವಾರ್ಷಿಕ 10,000 ಕೋಟಿ ರೂಪಾಯಿಗೂ ಅಧಿಕ ಅನುದಾನದ ಅಗತ್ಯವಿದ್ದು, ಇಷ್ಟು ದೊಡ್ಡ ಮೊತ್ತದ ಆರ್ಥಿಕ ಹೊರೆಯ ಬಗ್ಗೆ ಸರ್ಕಾರಕ್ಕೆ ಆತಂಕವಿದೆ.

ಇದರ ಜೊತೆಗೆ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ಕೆಲವು ಪ್ರಭಾವಿ ನಾಯಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಎಸ್‌ಇಪಿ ಜಾರಿಗೊಳಿಸಲು ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುವ ಉದ್ದೇಶದಿಂದ ಸಂಪುಟವು ಉಪ ಸಮಿತಿ ರಚನೆಯ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಸಂಪುಟ ಉಪ ಸಮಿತಿಯನ್ನು ರಚಿಸುವ ವಿವೇಚನಾಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, "ಸಂಪುಟ ಉಪ ಸಮಿತಿ ರಚನೆಯಾದರೂ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶಾಲೆಗಳು ಮತ್ತು ಕಾಲೇಜುಗಳಿಗೆ ಎಸ್‌ಇಪಿ ಜಾರಿಗೊಳಿಸುತ್ತೇವೆ ಎಂಬುದು ಖಚಿತವಿಲ್ಲ. ಎಸ್‌ಇಪಿ ಆಯೋಗವು ಎಂಟು ಸಂಪುಟಗಳ ವರದಿಯನ್ನು ಸಲ್ಲಿಸಿರುವುದರಿಂದ, ಇದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸಮಯ ಬೇಕಾಗುತ್ತದೆ. ಉಪ ಸಮಿತಿಯು ಎಸ್‌ಇಪಿ ಜಾರಿಯ ಆರ್ಥಿಕ ಪರಿಣಾಮಗಳ ಕುರಿತು ಚರ್ಚಿಸಬೇಕಿದೆ. ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಎದುರಿಸಬಹುದಾದ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ಅಗತ್ಯವಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪುಟ ಸಭೆಯಲ್ಲಿ ಕುಸಿದು ಬಿದ್ದ ಪ್ರೊ. ಥೋರಟ್
ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಸಂಪುಟದಲ್ಲಿ ಕೂಲಂಕಷವಾಗಿ ಚರ್ಚಿಸಲಾಗಿದ್ದು, ಇದನ್ನು ಜಾರಿಗೊಳಿಸುವ ಮುನ್ನ ಸಂಪುಟ ಉಪಸಮಿತಿಯ ಅಧ್ಯಯನ ಅತ್ಯಗತ್ಯ ಎಂಬ ತೀರ್ಮಾನಕ್ಕೆ ಬರಲಾಗಿದೆ. ಇದೇ ವೇಳೆ, ಸಚಿವ ಸಂಪುಟ ಸಭೆಯಲ್ಲಿ ತಮ್ಮ ಅಂತಿಮ ವರದಿಯ ಪ್ರಸ್ತುತಿ (Presentation) ನೀಡಲು ಆಹ್ವಾನಿತರಾಗಿದ್ದ ಎಸ್‌ಇಪಿ ಆಯೋಗದ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಅವರು ತೀವ್ರ ಅಸ್ವಸ್ಥರಾಗಿ ಪ್ರಸ್ತುತಿ ಆರಂಭಿಸುವ ಮುನ್ನವೇ ಕುಸಿದು ಬಿದ್ದ ಘಟನೆಯೂ ನಡೆದಿದೆ. ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿದ್ದರಿಂದ ಅವರು ಪ್ರಜ್ಞೆ ತಪ್ಪಿದ್ದರು ಎಂದು ಮೂಲಗಳು ತಿಳಿಸಿವೆ. ತಕ್ಷಣವೇ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಯಿತು. ಹಣ್ಣಿನ ರಸ ಸೇವಿಸಿ ಸ್ವಲ್ಪ ಸಮಯದ ಬಳಿಕ ಚೇತರಿಸಿಕೊಂಡ ಪ್ರೊ. ಥೋರಟ್, ನಂತರ ತಮ್ಮ ವರದಿ ಪ್ರಸ್ತುತಿಯನ್ನು ಮುಂದುವರಿಸಿದರು.












Click it and Unblock the Notifications