ಅನಾಥ ಲೋಕಾಯುಕ್ತ ಸಂಸ್ಥೆಗೆ ಉಪ ಲೋಕಾಯುಕ್ತರ ನೇಮಕ
ಬೆಂಗಳೂರು, ಮಾ. 23: ಅನಾಥವಾಗಿರುವ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಕೊನೆಗೂ ಉಪ ಲೋಕಾಯುಕ್ತರನ್ನು ನೇಮಕ ಮಾಡಿ ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶ ಹೊರಡಿಸಿದೆ. ಹೈಕೋರ್ಟ್ ನಿವೃತ್ತ ನ್ಯಾ. ಕೆ.ಎನ್. ಫಣೀಂದ್ರ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲೋಕಾಯುಕ್ತರಾಗಿ ಐದು ವರ್ಷ ಪೂರೈಸಿದ್ದ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ನಿವೃತ್ತಿ ಬಳಿಕ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಅನಾಥವಾಗಿತ್ತು. ಇರುವ ಏಕೈಕ ಉಪ ಲೋಕಾಯುಕ್ತರಾದ ನ್ಯಾ. ಪಾಟೀಲ್ ಅವರು ದಿನಕ್ಕೆ 12 ತಾಸು ಕೆಲಸ ಮಾಡಿದರೂ ಕಡತ ವಿಲೇವಾರಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಬದ್ಧತೆ ಇದ್ದ ಸರ್ಕಾರ ಆಗಿದ್ದಲ್ಲಿ, ನ್ಯಾ. ವಿಶ್ವನಾಥ ಶೆಟ್ಟಿ ಅವರ ನಿರ್ಗಮನ ಮೊದಲೇ ಅರ್ಹ ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕಿತ್ತು ಎಂಬ ಅಭಿಪ್ರಾಯ ಕೇಳಿಬಂದಿತ್ತು. ನ್ಯಾ. ವಿಶ್ವನಾಥ ಶೆಟ್ಟಿ ಅವರು ನಿವೃತ್ತಿಯದರೂ ಅದರ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳಲಿಲ್ಲ. ಇದೀಗ ಕೊನೆಗೂ ಎಚ್ಚೆತ್ತ ಬಸವರಾಜ ಬೊಮ್ಮಾಯಿ ಸರ್ಕಾರ, ವರ್ಷಗಳಿಂದ ಖಾಲಿಯಿದ್ದ ಉಪ ಲೋಕಾಯುಕ್ತ ಹುದ್ದೆಗೆ ನ್ಯಾ. ಕೆ.ಎನ್ ಫಣೀಂದ್ರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕನಿಷ್ಠ ಇಬ್ಬರು ಉಪ ಲೋಕಾಯುಕ್ತರು ನೇಮಕಗೊಂಡಂತಾಗಿದೆ.

ನ್ಯಾ. ಕೆ.ಎನ್. ಫಣೀಂದ್ರ ಹಿನ್ನೆಲೆ:
ಮೂಲತಃ ತುಮಕೂರು ಮೂಲದ ನ್ಯಾ. ಕೆ.ಎನ್. ಫಣೀಂದ್ರ ಅವರು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. 1958 ರಲ್ಲಿ ಜನಿಸಿರುವ ನ್ಯಾ. ಫಣೀಂದ್ರ ಅವರು, 1985 ರಲ್ಲಿ ವಕೀಲರಾಗಿ ತುಮಕೂರಿನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. 1998 ರಲ್ಲಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. ಬೆಂಗಳೂರು, ಶಿವಮೊಗ್ಗದಲ್ಲಿ ಅಡಿಷನಲ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಉಡುಪಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2013 ರಲ್ಲಿ ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ. ಫಣೀಂದ್ರ ಅವರು 2016 ರಲ್ಲಿ ಹೈಕೋರ್ಟ್‌ನ ಪೂರ್ಣಾವಧಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡು ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಇದೀಗ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉಪ ಲೋಕಾಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಲೋಕಾಯುಕ್ತ ಪುಟಿದೇಳುವುದೇ?
ಕರ್ನಾಟಕ ಲೋಕಾಯುಕ್ತ ಸಂಸ್ಥೆ ಇಡೀ ದೇಶಕ್ಕೆ ಮಾದರಿ ಎಂಬ ಕೀರ್ತಿ ಗಳಿಸಿತ್ತು. ನ್ಯಾ. ಎನ್. ವೆಂಕಟಾಚಲ ಲೋಕಾಯುಕ್ತ ಸಂಸ್ಥೆ ಇದೆ ಎಂದು ತೋರಿಸಿಕೊಟ್ಟಿದ್ದರು. ಅದನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದು ನ್ಯಾ. ಎನ್. ಸಂತೋಷ್ ಹೆಗ್ಡೆ, ಭ್ರಷ್ಟ್ರ ರಾಜಕಾರಣಿಗಳ ಪಾಲಿಗೆ ಲೋಕಾಯುಕ್ತ ಸಂಸ್ಥೆ ಸಿಂಹಸ್ವಪ್ನವಾಗಿ ನಿದ್ದೆಯಲ್ಲೂ ಕಾಡಿತ್ತು. ಇನ್ನೇನು ಲೋಕಾಯುಕ್ತ ಮುಗಿಯಿತು ಎನ್ನುವಷ್ಟರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಬಂದ ನ್ಯಾ. ಎನ್. ಕೆ. ಸುಧೀಂದ್ರರಾವ್ ಅವರು ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸುವ ಮಹತ್ವದ ಆದೇಶಗಳು ಹೊರ ಬಿದ್ದವು. ಲೋಕಾಯುಕ್ತ ಸಂಸ್ಥೆಯ ಹೆಸರು ರಾಷ್ಟ್ರ ಮಟ್ಟದಲ್ಲಿ ರಾರಾಜಿಸಿತು.

ಯಾವಾಗ ಲೋಕಾಯುಕ್ತ ಸಂಸ್ಥೆ ಭ್ರಷ್ಟ ಜನ ಪ್ರತಿನಿಧಿಗಳ ನಿದ್ದೆ ಕಸಿಯಿತೋ ಅದನ್ನು ಅದನ್ನು ಮುಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಕಾಕತಾಳೀಯ ಎಂಬಂತೆ ಲೋಕಾಯುಕ್ತ ಸಂಸ್ಥೆ ಹೆಸರಿನಲ್ಲಿ ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಅವರ ಪುತ್ರ ಮಾಡಿದ್ದ ಅಕ್ರಮ ಬಯಲಿಗೆ ಬಂದಿತ್ತು. ಇದನ್ನೆ ನೆಪ ಮಾಡಿಕೊಂಡ ಮಾಜಿ ಮುಖ್ಯಮಂತ್ರಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಭಾಗವಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಬೇರ್ಪಡಿಸಿ ಲೋಕಾಯುಕ್ತ ಸಂಸ್ಥೆಯ ಅಧಿಕಾರ ವ್ಯಾಫ್ತಿಯನ್ನು ಕಡಿತಗೊಳಿಸಿತು. ಇದೇ ಅವಧಿಗೆ ನ್ಯಾ. ವಿಶ್ವನಾಥ ಶೆಟ್ಟಿ ಅವರನ್ನು ಸರ್ಕಾರ ನೇಮಿಸಿ ಸುಮ್ಮನಾಗಿತು. ತನ್ನ ದೂರಿಗೆ ನ್ಯಾಯ ಸಿಗಲಿಲ್ಲ ಎಂದು ದೂರುದಾರ ತೇಜರಾಜ ಶರ್ಮಾ ಎಂಬಾತ ನ್ಯಾ. ವಿಶ್ವನಾಥಶೆಟ್ಟಿ ಅವರಿಗೆ ಚಾಕು ಇರಿದು ಬಂಧನಕ್ಕೆ ಒಳಗಾದರು. ವಿಶ್ರಾಂತಿ ಮೊರೆ ಹೋದ ಲೋಕಾಯುಕ್ತರು ವಾಪಸು ಬಂದರೂ ಅದರ ಕಾರ್ಯ ವ್ಯಾಪ್ತಿ ವಿಸ್ತಾರವಾಗಲಿಲ್ಲ. ಲೋಕಾಯುಕ್ತ ಸಂಸ್ಥೆ ಹೆಸರಿಗೆ ಎಂಬಂತೆ ಅದರ ಅಧಿಕಾರವನ್ನು ಎಲ್ಲಾ ಆಯಾಮದಲ್ಲೂ ಸರ್ಕಾರ ಮೊಟಕುಗೊಳಿಸಿಬಿಟ್ಟಿತು. ಇದೀಗ ಏಕಾಂಗಿ ಉಪ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರೊಬ್ಬರೇ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಇದೀಗ ನೂತನ ಉಪ ಲೋಕಾಯುಕ್ತರಾಗಿ ನ್ಯಾ. ಫಣೀಂದ್ರ ಅವರು ನೇಮಕಗೊಂಡಿದ್ದಾರೆ. ಖಡಕ್ ತೀರ್ಪುಗಳಿಗೆ ಹೆಸರು ವಾಸಿಯಾಗಿರುವ ನ್ಯಾ. ಫಣೀಂದ್ರ ಅವರ ಆಗಮನದ ಬಳಿಕ ಮತ್ತೆ ಲೋಕಾಯುಕ್ತ ರಾರಾಜಿಸಲಿದೆಯಾ ಕಾದು ನೋಡಬೇಕು.












Click it and Unblock the Notifications