Karnataka: 100 ಟಿಬಿ ರೋಗಿಗಳನ್ನು ದತ್ತು ಪಡೆದ ರಾಜ್ಯಪಾಲರು
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯಿಂದ ನಡೆದ 'ಕ್ಷಯ ರೋಗಿಗಳ ದತ್ತು ಪಡೆಯುವ ಮತ್ತು ನಿಕ್ಷಯ ಮಿತ್ರ(ದಾನಿಗಳ) ಸನ್ಮಾನ ಸಮಾರಂಭದಲ್ಲಿ ರಾಜ್ಯಪಾಲರು ರೋಗಿಗಳನ್ನು ದತ್ತು ಪಡೆದರು. ಅದರ ವಿವರ ಇಲ್ಲಿದೆ.
ಬೆಂಗಳೂರು ಮಾರ್ಚ್ 13: ಟಿಬಿ ಮುಕ್ತ ಭಾರತಕ್ಕಾಗಿ ಕರೆ ನೀಡಿರುವ ದೇಶದ ಪ್ರಧಾನಿಯವರು ಸಾರ್ವಜನಿಕ ಸಹಭಾಗಿತ್ವಕ್ಕೆ ಕರೆ ನೀಡಿದ್ದಾರೆ. ಅದರ ಭಾಗವಾಗೇ 100 ಟಿಬಿ ರೋಗಿಗಳನ್ನು ದತ್ತು ಪಡೆದ ರಾಜಭವನ ದತ್ತು ಪಡೆದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಹೆಲ್ತ್ ಮಿಷನ್, ಕರ್ನಾಟಕ ಟಿಬಿ ಘಟಕ ಮತ್ತು ರಾಜಭವನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕ್ಷಯ ರೋಗಿಗಳ ದತ್ತು ಪಡೆಯುವ ಮತ್ತು ನಿಕ್ಷಯ ಮಿತ್ರ(ದಾನಿಗಳ) ಸನ್ಮಾನ ಸಮಾರಂಭ ನಡೆಯಿತು.

ಈ ವೇಳೆ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಪ್ರಧಾನಿ ನರೇಂದ್ರ ಮೋದಿಯವರ ಟಿಬಿ ಮುಕ್ತ ಭಾರತ ಅಭಿಯಾನವನ್ನು ಜನಾಂದೋಲನವಾಗಿ ಮಾಡುವುದು ನಮ್ಮ ಕರ್ತವ್ಯ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಕಾರ, ಪ್ರಪಂಚದ ಅನೇಕ ದೇಶಗಳು 2030ರ ವೇಳೆಗೆ ಟಿಬಿ ಖಾಯಿಲೆ ನಿರ್ಮೂಲನೆಯ ಗುರಿ ಹೊಂದಿವೆ. ಅದೇ ರೀತಿ ಪ್ರಧಾನಿಗಳು 2025ರ ಹೊತ್ತಿಗೇ ಭಾರತದಲ್ಲಿ ಟಿಬಿ ಮುಕ್ತಗೊಳಿಸುವ ಗುರಿ ಹಾಕಿಕೊಂಡಿದ್ದಾರೆ. 2025ರ ವೇಳೆಗೆ ಟಿಬಿಯನ್ನು ತೊಡೆದು ಹಾಕಲು ರಾಷ್ಟ್ರೀಯ ಕರೆಗೆ ಅನುಗುಣವಾಗಿ, ರಾಜ್ಯವು 'ಕ್ಷಯ ಮುಕ್ತ ಕರ್ನಾಟಕ- 2025' ಗಾಗಿ ಈ ಪ್ರಮುಖ ಯೋಜನೆ ಅಳವಡಿಸಿಕೊಂಡಿದೆ ಎಂದು ಹೇಳಿದರು.
'ನಿ-ಕ್ಷಯ 2.0' ಪೋರ್ಟಲ್ ಮೂಲಕ ಟಿ.ಬಿ ರೋಗಿಗಳಿಗೆ ಸಮುದಾಯದ ಸಹಭಾಗಿತ್ವ ಒದಗಿಸಲಾಗುತ್ತಿದೆ. ಪೋರ್ಟಲ್‌ನಲ್ಲಿ ಸುಮಾರು 13.5 ಲಕ್ಷ ಕ್ಷಯ ರೋಗಿಗಳು ನೋಂದಾವಣೆ ಆಗಿದೆ. ಅದರಲ್ಲಿ ಹಲವು ರೋಗಿಗಳ ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದರು.
ಎಲ್ಲಾ ನಾಗರಿಕರು, ಎನ್‌ಜಿಒಗಳು, ಕಾರ್ಪೊರೇಟ್ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ಮುಂತಾದವರು ನಿ-ಕ್ಷಯ ಮಿತ್ರರಾಗುವ ಮೂಲಕ ಟಿ.ಬಿ ಮುಕ್ತ ಭಾರತ ಅಭಿಯಾನವನ್ನು ಬೆಂಬಲಿಸಬೇಕು. ಒಬ್ಬರ ಜೀವವನ್ನು ಉಳಿಸುವ ಕಾರ್ಯವು ಮಾನವೀಯ ಸೇವೆಯ ಅತ್ಯುತ್ತಮ ಕಾರ್ಯವಾಗಿದೆ.

ಒಂದು ಅಭಿಯಾನದೊಂದಿಗೆ ಸಾರ್ವಜನಿಕರ ವೈಯಕ್ತಿಕ ಮತ್ತು ಸಾಮೂಹಿಕ ಒಡನಾಟ ಇದ್ದಾಗ, ಆ ಅಭಿಯಾನದ ಯಶಸ್ಸಿನ ಸಾಧ್ಯತೆಗಳು ಸಹ ಹೆಚ್ಚಾಗುತ್ತವೆ. ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆಯಾದ 'ಆಯುಷ್ಮಾನ್ ಭಾರತ್' ಅಡಿಯಲ್ಲಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಟಿಬಿಗೆ ಸಂಬಂಧಿಸಿದ ಸೇವೆಗಳಲ್ಲಿ ನಿರಂತರ ಹೆಚ್ಚಳ ಕಂಡುಬಂದಿದೆ. ರಾಜ್ಯ ಸರ್ಕಾರದ ಪ್ರಯತ್ನದ ಫಲವಾಗಿ ಟಿಬಿ ಬಾಧೆ ಕಡಿಮೆಯಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ 39,745 ಟಿಬಿ ರೋಗಿಗಳು
ಕರ್ನಾಟಕದಲ್ಲಿ ಗುರುತಿಸಲಾದ 39,745 ಟಿಬಿ ರೋಗಿಗಳಲ್ಲಿ 25,895 ರೋಗಿಗಳು ಪೋಶನ್ ಆಧಾರ್‌ಗೆ ಒಪ್ಪಿಗೆ ನೀಡಿದ್ದಾರೆ. ಅವರಲ್ಲಿ 25,110 ರೋಗಿಗಳನ್ನು ಅನೇಕ ಸಾಮಾಜಿಕ ಸಂಸ್ಥೆಗಳು, ಸಾರ್ವಜನಿಕ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಮತ್ತು ಇತರ ವ್ಯಕ್ತಿಗಳಿಂದ ದತ್ತು ಪಡೆದಿದ್ದಾರೆ. ಈ ಅನುಕ್ರಮದಲ್ಲಿ, 100 ಟಿಬಿ ರೋಗಿಗಳನ್ನು ರಾಜಭವನದಿಂದ ದತ್ತು ತೆಗೆದುಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟಿಬಿ ರೋಗಿಗಳನ್ನು ದತ್ತು ಪಡೆದ ಸಂಸದರಾದ ಲೆಹರ್ ಸಿಂಗ್ ಸಿರೋಯಾ, ಸಚಿವರಾದ ಗೋಪಾಲಯ್ಯ ಅವರ ಪತ್ನಿ ಎಸ್.ಪಿ. ಹೆಮಲತಾ ಗೋಪಾಲಯ್ಯ, ಮಂಡ್ಯ ಮಿಲ್ಕ್ ಯೂನಿಯನ್ ಲಿಮಿಟೆಡ್ ನ ಎಂಡಿ ಡಾ.ಪಿ ಆರ್ ಮಂಜೇಶ್ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.
ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್ ಸಿರೋಯಾ ಅವರು 500 ಟಿಬಿ ರೋಗಿಗಳನ್ನು ದತ್ತು ಪಡೆದು ಮಾತನಾಡಿದರು. ಸರ್ಕಾರದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರಾದ ಡಾ. ನವೀನ್ ಭಟ್.ವೈ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications