ʼಗೃಹಲಕ್ಷ್ಮಿʼಗೆ ಒಂದು ವರ್ಷ; ಫಲಾನುಭವಿಗಳಿಗೆ ಖರ್ಚಾದ ಹಣವೆಷ್ಟು?
ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʼಗೃಹಲಕ್ಷಿʼಯು ಒಂದು ವರ್ಷ ಪೂರೈಸಿದೆ. ಕಳೆದ ವರ್ಷ ನಡೆದ ವಿಧಾನಸಭೆಗೂ ಮುನ್ನ ಕಾಂಗ್ರೆಸ್ ಪಕ್ಷವು ಕರ್ನಾಟಕದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಮಾಡುವುದಾಗಿ ವಾಗ್ದಾನ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಕೂಡ ಮಾಡಿತ್ತು.
ಇಂದಿಗೆ ಈ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಸಿದೆ. ಈವರೆಗೆ ಗೃಹಲಕ್ಷ್ಮಿಯರಿಗೆ 25,000 ಕೋಟಿ ರೂಪಾಯಿ ಹಣ ಸೇರಿದೆ. ಫಲಾನುಭವಿಗಳ ಪೈಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೂ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲೇ ಹೆಚ್ಚಿನ ಮಂದಿ ಇದ್ದಾರೆ. ಕೊಡಗು ಜಿಲ್ಲೆಯಲ್ಲಿ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ ಎಂದು ವರದಿಯಾಗಿದೆ.

ಈ ವಿಶೇಷ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ʼನಾಡಿನ ಕೋಟ್ಯಂತರ ಮನೆಯೊಡತಿಯರ ಕುಟುಂಬ ನಿರ್ವಹಣೆಯ ಭಾರವನ್ನು ಗೃಹಲಕ್ಷ್ಮಿಯ ಮೂಲಕ ನಮ್ಮ ಹೆಗಲಿಗೇರಿಕೊಂಡು ವರ್ಷ ಪೂರೈಸಿದೆ. ಇದರಿಂದ 1.25 ಕೋಟಿ ಗೃಹಲಕ್ಷ್ಮಿಯರು ಆರ್ಥಿಕ ಸ್ವಾವಲಂಬಿಗಳಾಗಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ʼಯೋಜನೆ ಜಾರಿಗೊಂಡ ನಂತರದಿಂದ ಈವರೆಗೆ ರೂ.25,000 ಕೋಟಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಿದ್ದೇವೆ. ಜಾಗತಿಕ ಮೂಲ ಆದಾಯ ಪರಿಕಲ್ಪನೆಯಡಿ ಜಾರಿಗೆ ಕೊಟ್ಟಿರುವ ಈ ಯೋಜನೆ ಇಂದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಶ್ಲಾಘಿಸಿದ್ದಾರೆ.

ಬಡವರ ಪಾಲಿನ ನಂದಾದೀಪವಾದ ʼಗೃಹಲಕ್ಷ್ಮಿʼ ಯೋಜನೆಗೆ ವರ್ಷ ತುಂಬಿದೆ. ಈ ಒಂದು ವರ್ಷದಲ್ಲಿ ಮನೆಯ ಯಜಮಾನಿಯರಿಗೆ ₹25,248 ಕೋಟಿ ಜಮೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಆರ್ಥಿಕ ಸಬಲರಾಗಿದ್ದು ಮಾತ್ರವಲ್ಲದೇ, ಕುಟುಂಬ ನಿರ್ವಹಣೆಗೂ ಸಹಕಾರಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವವರಿಗೆ ಕೆಲವು ನಿಯಮಗಳನ್ನು ರೂಪಿಸಲಾಗಿತ್ತು. ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರು ಗೃಹಲಕ್ಷ್ಮಿ ಯೋಜನೆಯ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಹೇಳಿದ್ದವು. ಆದರೂ ಜಿಎಸ್‌ಟಿ ಇದ್ದವರೂ ಸರ್ಕಾರದ ಪೋರ್ಟಲ್‌ನಲ್ಲಿ ಈ ಯೋಜನೆಗೆ ಅರ್ಜಿ ಹಾಕಿದ್ದರು. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇತ್ತೀಚೆಗೆ ವಿವರಣೆ ನೀಡಿದ್ದರು.
ಜೂನ್ ತಿಂಗಳ ಗೃಹಲಕ್ಷ್ಮಿ ಹಣವು ಫಲಾನುಭವಿಗಳ ಖಾತೆಗೆ ಸೇರಿದ್ದು, ಇನ್ನೂ ಅನೇಕರಿಗೆ ಹಣ ತಲುಪಿಲ್ಲ ಎಂಬ ಮಾಹಿತಿ ಇದೆ. ಇದಕ್ಕೆ ತೊಡಕಾಗಿದ್ದ ತಾಂತ್ರಿಕ ದೋಷವನ್ನ ಈಗಾಗಲೇ ಸರಿ ಮಾಡಿದ್ದೇವೆ. ಈ ಜುಲೈ ಮತ್ತು ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಬೆಳಗಾವಿಗೆ ಬಂದಿದ್ದಾಗ ಚರ್ಚೆ ಮಾಡಿದ್ದೇವೆ. ಮುಂದಿನ ವಾರದೊಳಗೆ ಈ ಎರಡೂ ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆಗೆ ಬರಲಿದೆ ಎಂದು ಹೇಳಿದ್ದರು.












Click it and Unblock the Notifications