ಎಸ್‌ಸಿ, ಎಸ್‌ಟಿ ಮಕ್ಕಳಿಗೆ ವೇದ ಗಣಿತ ಕಲಿಸಲು ಮುಂದಾದ ಕರ್ನಾಟಕ ಸರ್ಕಾರ
ಬೆಂಗಳೂರು, ಸೆಪ್ಟೆಂಬರ್ 16: ಬಿಜೆಪಿ ಸರ್ಕಾರವು ರಾಜ್ಯದಲ್ಲಿ 5 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ ಎಸ್‌ಸಿ ಹಾಗೂ ಎಸ್‌ಟಿ ಮಕ್ಕಳಿಗೆ ವೇದ ಗಣಿತವನ್ನು ಕಲಿಸಲು ಮುಂದಾಗುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದು ಸಹಜವಾಗಿ ಶಿಕ್ಷಣ ತಜ್ಞರು ಮತ್ತು ದಲಿತ ಗುಂಪುಗಳನ್ನು ಕೆರಳಿಸಿದೆ.
ಎಸ್‌ಸಿ ಹಾಗೂ ಎಸ್‌ಟಿ ಕಲ್ಯಾಣಕ್ಕೆ ಮೀಸಲಾದ ಗ್ರಾಮ ಪಂಚಾಯಿತಿಯ ಶೇ. 25ರಷ್ಟು ಹಣವನ್ನು ಸರ್ಕಾರವು ಮೊದಲಿಗೆ ಒಂದು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಸರ್ಕಾರಿ ಟಿಪ್ಪಣಿಯ ಪ್ರಕಾರ, ಚಿತ್ರದುರ್ಗದ ಹಿರಿಯೂರಿನ ಖಾಸಗಿ ಸಂಸ್ಥೆ ಎವಿಎಂ ಅಕಾಡೆಮಿಗೆ ವೇದ ಗಣಿತದ ಬೋಧನೆಯನ್ನು ವಹಿಸಲಾಗಿದೆ. ಇದು ಅಕಾಡೆಮಿ ಸಲ್ಲಿಸಿದ ಮನವಿಯನ್ನು ಆಧರಿಸಿದೆ.
ಎವಿಎಂ ಅಕಾಡೆಮಿಯು ಪ್ರತಿ ಗ್ರಾಮ ಪಂಚಾಯತ್‌ನಿಂದ 5 ರಿಂದ 8 ನೇ ತರಗತಿಯ 25 ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಸೂಕ್ತವಾದ ಸಮವಸ್ತ್ರದೊಂದಿಗೆ ವೇದ ಗಣಿತವನ್ನು ಕಲಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಟಿಪ್ಪಣಿ ಹೇಳಿದೆ. ಖಾಸಗಿ ಸಂಸ್ಥೆ ಎವಿಎಂ ಅಕಾಡೆಮಿ 2022ರ ಜನವರಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಪ್ರಾರಂಭಿಸಿದೆ. ಈ ಅಕಾಡೆಮಿಯಿಂದ ತರಬೇತಿ ಪಡೆದ ಶಿಕ್ಷಕರು 16 ವಾರಗಳ ಕಾಲ ಪ್ರತಿ ಶನಿವಾರ ಮತ್ತು ಭಾನುವಾರದಂದು ಎರಡು ಗಂಟೆಗಳ ಕಾಲ ವೇದ ಗಣಿತವನ್ನು ಕಲಿಸುತ್ತಾರೆ.

ಶಿಕ್ಷಣ ವ್ಯವಸ್ಥೆಯ ನಿಜವಾದ ಕೇಸರಿಕರಣ
ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೆ ಹಿರಿಯ ಶಿಕ್ಷಣ ತಜ್ಞ ವಿಪಿ ನಿರಂಜನಾರಾಧ್ಯ ಕಿಡಿಕಾರಿದ್ದಾರೆ. "ಶಾಲಾ ವಿದ್ಯಾರ್ಥಿಗಳಿಗೆ ವೇದ ಗಣಿತವನ್ನು ಕಲಿಸುವುದು ಗೊಂದಲವನ್ನು ಉಂಟು ಮಾಡುತ್ತದೆ. ಏಕೆಂದರೆ ಅವರು ಈಗಾಗಲೇ ಗಣಿತವನ್ನು ವೈಜ್ಞಾನಿಕ ರೀತಿಯಲ್ಲಿ ಕಲಿಯುತ್ತಿದ್ದಾರೆ. ಗಣಿತ ಮಾಯೆಯಲ್ಲ, ಇದು ಶುದ್ಧ ವಿಜ್ಞಾನವಾಗಿದೆ. ಇದನ್ನು ತರ್ಕಬದ್ಧವಾಗಿ ತಾರ್ಕಿಕವಾಗಿ ಕಲಿಯಬೇಕು. ವೇದ ಗಣಿತಕ್ಕೆ ತರ್ಕವಿಲ್ಲ ಸರ್ಕಾರಿ ಶಾಲಾ ಮಕ್ಕಳ ಮೇಲೆ ಮಾತ್ರ ಸರ್ಕಾರ ಅನಗತ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ನಿಜವಾದ ಕೇಸರಿಕರಣ ಎಂದರು.

ವೇದ ಗಣಿತವೆಂಬುವುದು ಪುರಾತನ ಗಣಿತದ ವಿಧಾನ
ಇತ್ತೀಚೆಗಷ್ಟೇ ಶಾಲಾ ಪಠ್ಯಪುಸ್ತಕಗಳಲ್ಲಿನ ವಿಷಯವನ್ನು ಪರಿಷ್ಕರಿಸುವ ಬಗ್ಗೆ ಚಿಂತನಶೀಲ ಚರ್ಚೆಯಿಂದ ಹೊರಬಂದ ಬಿಜೆಪಿ ಸರ್ಕಾರಕ್ಕೆ ಇದು ದೊಡ್ಡ ವಿವಾದಕ್ಕೆ ಕಾರಣವಾಗುವ ಎಲ್ಲಾ ಸೂಚನೆಗಳನ್ನು ಹೊಂದಿದೆ. ವೇದ ಗಣಿತವೆಂಬುವುದು ಒಂದು ಪುರಾತನ ಗಣಿತದ ವಿಧಾನ. ಈ ಗಣಿತದ ಪ್ರಕಾರ ಗಣಿತದ ಯಾವುದೇ ಕ್ಲಿಷ್ಟಕರ ಸಮಸ್ಯೆಯನ್ನು ಮನಸ್ಸಿನಲ್ಲೇ ಯೋಚಿಸಿ, ಬರವಣಿಗೆಯಿಲ್ಲದೇ ವೇಗವಾಗಿ ಬಗೆಹರಿಸಬಹುದು ಎಂದು ಹೇಳಲಾಗುತ್ತದೆ. ವೇದ ಗಣಿತದ ಪ್ರಕಾರ ಸಮಸ್ಯೆಗಳಿಗೆ 16 ಸಂಸ್ಕೃತದ ಗಣಿತ ಸೂತ್ರಗಳಿಂದ ಪರಿಹಾರ ಕಂಡು ಹಿಡಿಯಬಹುದು ಎನ್ನಲಾಗಿದೆ.

ವೇದಾಧ್ಯಯನ ಮಾಡುವಾಗ ಸೂತ್ರ ಕಂಡುಹಿಡಿದರು
ಈ ಸೂತ್ರಗಳು ಕಳೆದು ಹೋಗಿದ್ದವೆಂದೂ ಹಾಗೂ ಇವುಗಳನ್ನು ಜಗದ್ಗುರು ಸ್ವಾಮಿ ಶ್ರೀ ಭಾರತೀ ಕೃಷ್ಣ ತೀರ್ಥಜಿ ಮಹಾರಾಜ ಎಂಬುವವರು 1911- 1918 ರಲ್ಲಿ ಪುನಃ ಪರಿಶೋಧನೆ ಮಾಡಿದರೆಂದೂ ಹೇಳಲಾಗುತ್ತದೆ. ಇವರ ಪ್ರಕಾರ ಇವರಿಗೆ ವೇದಾಧ್ಯಯನ ಮಾಡುವಾಗ ಸೂತ್ರಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತಂತೆ.

1965ರಲ್ಲಿ ವೇದಿಕ್ ಮ್ಯಾಥಮೆಟಿಕ್ಸ್ ಪ್ರಕಟ
ತಮ್ಮ ಪರಿಶೋಧನೆಯ ತಳಹದಿಯ ಮೇಲೆ ಶ್ರೀ ಭಾರತೀ ಕೃಷ್ಣ ತೀರ್ಥಜಿಯವರು 1957ರಲ್ಲಿ ವೇದಿಕ್ ಮ್ಯಾಥಮೆಟಿಕ್ಸ್ ಎಂಬ ಪುಸ್ತಕವನ್ನು ಬರೆದರು. 1960 ರಲ್ಲಿ ಶ್ರೀ ಭಾರತೀ ಕೃಷ್ಣ ತೀರ್ಥಜಿಯವರು ನಿಧನ ಹೊಂದಿದರು. ಈ ಪುಸ್ತಕವನ್ನು 1965ರಲ್ಲಿ ಪ್ರಕಟಿಸಲಾಯಿತು. ಆದರೆ, ವೇದ ಗಣಿತವೆಂಬ ಪ್ರಕಾರವೇ ಇಲ್ಲವೆಂದೂ, ಇದರ ಬಗ್ಗೆ ಯಾವ ವೇದದಲ್ಲೂ ಉಲ್ಲೇಖವೇ ಇಲ್ಲವೆಂದೂ ಹೇಳಲಾಗುತ್ತದೆ.












Click it and Unblock the Notifications