ಪರಿಸ್ಥಿತಿ ಹೀಗೇ ಮುಂದುವರಿದರೆ ರಾಜ್ಯದಲ್ಲಿ 'ಪೊಲೀಸ್ ದಂಗೆ'ಯಾದೀತು!

Written By:
Subscribe to Oneindia Kannada

ಪೊಲೀಸರೂ ನಮ್ಮಂತೆ ಮನುಷ್ಯರು, ಅವರಿಗೂ ಸಂಸಾರ ಎನ್ನುವುದು ಇರುತ್ತೆ, ಅವರದೇ ಆದ ಜೀವನ ಎನ್ನುವುದು ಇರುತ್ತೆ ಎನ್ನುವುದು ಸರಕಾರಕ್ಕೆ ಅರ್ಥವಾಗುವುದು ಯಾವಾಗ? ಅದು ಯಾವುದೇ ಪಕ್ಷದ ಸರಕಾರ ಅಧಿಕಾರದಲ್ಲಿರಲಿ..

ಕಡೇ ಪಕ್ಷ ತಮ್ಮ ಮಕ್ಕಳು ಒಂದು ವರ್ಷದ ಶೈಕ್ಷಣಿಕ ಅವಧಿ ಪೂರೈಸುವವರೆಗೆ ಒಂದೇ ಜಾಗದಲ್ಲಿ ಪೋಸ್ಟಿಂಗ್ ಖಾಯಂ ಎನ್ನುವ ಯಾವ ಗ್ಯಾರಂಟಿ ಇಲ್ಲದೇ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳ ಕೆಲಸದ, ರಾಜಕೀಯ ಮತ್ತು ಇತರ ಒತ್ತಡಗಳು ಬೇಸರ ತರಿಸುತ್ತಿದೆ. (ಪೊಲೀಸ್ ಇಲಾಖೆಯ ವಿವಾದಗಳು ಒಂದಾ ಎರಡಾ)

ಇತ್ತೀಚಿನ ದಿನಗಳಲ್ಲಿ ಪೊಲೀಸ್ ವರ್ಗಾವಣೆ ಎನ್ನುವುದು ಗೊತ್ತುಗುರಿಯಿಲ್ಲದಂತೆ ಸಾಗುತ್ತಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯ ಬಿಸಿಯ ನಡುವೆ ಮತ್ತೆ ಶುಕ್ರವಾರ (ಜುಲೈ 8) 11 ಡಿವೈಎಎಸ್ಪಿ ಮತ್ತು 76 ಇನ್ಸ್ ಪೆಕ್ಟರ್ ವರ್ಗಾವಣೆ ನಡೆಸಿ ಸರಕಾರ ಆದೇಶ ಹೊರಡಿಸಿದೆ.

ದೇಶದ ಇತಿಹಾಸದಲ್ಲೇ ಅಪರೂಪ ಎನ್ನುವಂತೆ ಕರ್ನಾಟಕ ಪೊಲೀಸರು ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಶತಾಯುಗತಾಯು ಗುದ್ದಾಡಿ ತಡೆದಿದ್ದ ಸರಕಾರ, ಅಂದು ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ್ದ ಭರವಸೆ ಎನ್ನುವ ಕಣ್ಣೊರೆಸುವ ತಂತ್ರ ಏನಾಯಿತು?

ಎರಡು ದಿನಗಳ ಹಿಂದೆ ಮನೆಯ ಕಾರ್ಯಕ್ರಮಕ್ಕೆ ರಜೆ ಕೊಡುತ್ತಿಲ್ಲ, ಹಿರಿಯ ಅಧಿಕಾರಿಗಳ ಕಿರುಕುಳವೆಂದು ಬೆಂಗಳೂರು ಜಯನಗರ ಠಾಣೆಯ ಪೊಲೀಸ್ ಸಿಬ್ಬಂದಿ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಬ್ಬಿಬ್ಬು ಮಾಡಿದ ಘಟನೆ ವರದಿಯಾದ ಬೆನ್ನಲ್ಲೇ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪೊಲೀಸ್ ಇಲಾಖೆಯ ನಿಜರೂಪ ಬಯಲು ಮಾಡಿದೆ. (ಕೆಂಪಯ್ಯರನ್ನು ವಿವಾದಗಳು ಸದಾ ಕಾಡುವುದೇಕೆ)

ರಾಜ್ಯ ಗೃಹ ಸಚಿವ ಪರಮೇಶ್ವರ್ ಶುಕ್ರವಾರ ತಮ್ಮದೇ ಸಚಿವಾಲಯದ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಸಚಿವಾಲಯದ ಮೇಲೆ ಇನ್ನೊಬ್ಬರ ಕಂಟ್ರೋಲ್ ಬಗ್ಗೆ ಪರೋಕ್ಷವಾಗಿ ನೋವಿನ ಮಾತನ್ನಾಡಿದ್ದಾರೆ.

ವರ್ಗಾವಣೆಯೆನ್ನುವ ಪಿಡುಗು

ವರ್ಗಾವಣೆಯೆನ್ನುವ ಪಿಡುಗು

ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳೀಯ ಶಾಸಕರು ನೇಮಿಸಿಕೊಳ್ಳುವ ಪದ್ಧತಿ ಇದೆ, ಶಾಸಕರ ಜೊತೆ ಅವರ ಹಿಂದೆ ಮುಂದೆ ಇರುವವರೂ ತಮ್ಮ ಖದರ್ ತೋರಿಸುವುದೂ ಎಲ್ಲರಿಗೂ ಗೊತ್ತಿರುವ ವಿಚಾರ. ತಮ್ಮ ಮಾತು ಕೇಳದ ಎಸ್ಪಿ, ಡಿಸಿ ಸ್ಥಾನದಲ್ಲಿ ಇರುವವರನ್ನೇ ಎತ್ತಂಗಡಿ ಮಾಡಲು ಹುನ್ನಾರ ನಡೆಸುವ ಜನಪ್ರತಿನಿಧಿಗಳು ನಮ್ಮ ನಡುವೆ ಇರುವಾಗ, ಇನ್ಸ್ ಪೆಕ್ಟರ್, ಪೇದೆಗಳು ಇವರಿಗೆ ಯಾವ ಲೆಕ್ಕ? ವಾರಕ್ಕೊಮ್ಮೆಯಂತೆ ನಡೆಯುತ್ತಿರುವ ವರ್ಗಾವಣೆಯೆನ್ನುವ 'ಪಿಡುಗು' ಪೊಲೀಸರ ತಾಳ್ಮೆಯನ್ನೇ ಪರೀಕ್ಷಿಸುವಂತಿದೆ.

ಗೃಹ ಸಚಿವರ ಬೇಸರ

ಗೃಹ ಸಚಿವರ ಬೇಸರ

ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆಯ ನಿರಂತರ ಪರ್ವಕ್ಕೆ ಖುದ್ದು ಗೃಹ ಸಚಿವರೇ ಬೇಸರ ವ್ಯಕ್ತ ಪಡಿಸಿರುವುದು, ಆಯಕಟ್ಟಿನ ಇಲಾಖೆಯ ಮೇಲೆ ಪರಮೇಶ್ವರ್ ಅವರಿಗೆ ನಿಯಂತ್ರಣ ತಪ್ಪುತ್ತಿದೆ ಎನ್ನುವುದನ್ನು ಸಾಬೀತು ಪಡಿಸುವತ್ತ ಸಾಗುತ್ತಿದೆ.

ದೇವೇಗೌಡ್ರ ಹೇಳಿಕೆ

ದೇವೇಗೌಡ್ರ ಹೇಳಿಕೆ

ದೇವೇಗೌಡ್ರು ಶುಕ್ರವಾರ ಒಂದು ಗಂಭೀರ ಹೇಳಿಕೆಯನ್ನು ನೀಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ, ದಿಗ್ವಿಜಯ್ ಸಿಂಗ್ ಸೂಪರ್ ಮುಖ್ಯಮಂತ್ರಿ, ಪರಮೇಶ್ವರ್ ಗೃಹ ಸಚಿವ ಮತ್ತು ಕೆಂಪಯ್ಯ ಸೂಪರ್ ಗೃಹ ಸಚಿವರು ಎಂದು.

ಗೃಹ ಸಚಿವರ ಸಲಹೆಗಾರ ಕೆಂಪಯ್ಯ

ಗೃಹ ಸಚಿವರ ಸಲಹೆಗಾರ ಕೆಂಪಯ್ಯ

ಗೃಹ ಸಚಿವರ ಸಲಹೆಗಾರ ಕೆಂಪಯ್ಯನವರು ಇಲಾಖೆಯ ಎಲ್ಲಾ ಕೆಲಸದ ಮೇಲೂ ಮೂಗು ತೂರಿಸುತ್ತಿದ್ದಾರೆ. ಇವರ ಮತ್ತು ಪರಮೇಶ್ವರ್ ನಡುವೆ ಹೊಂದಾಣಿಕೆಯಿಲ್ಲ ಎನ್ನುವ ಮಾತು ಚಾಲ್ತಿಯಲ್ಲಿದೆ. ಸಲಹೆಗಾರ ಎನ್ನುವ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿಯೂ, ಸಿಎಂಗೆ ಮುಜುಗರ ತಪ್ಪುತ್ತಿಲ್ಲ.

ಪೊಲೀಸ್ ಅಧಿಕಾರಿ ಜಿ ಎನ್ ಮೋಹನ್

ಪೊಲೀಸ್ ಅಧಿಕಾರಿ ಜಿ ಎನ್ ಮೋಹನ್

ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾದ ಆಘಾತ ಕಣ್ಣೆದುರಿಗಿರುವಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಇಬ್ಬರು ಸಚಿವರ ನಿರಂತರ ಕಿರುಕುಳದಿಂದ ಖಿನ್ನತೆಗೊಳಗಾಗಿ ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಜಿ ಎನ್ ಮೋಹನ್ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಕಿರುಕುಳದ ಆರೋಪ ಮಾಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದಾರೆಂದು ವಿಜಯವಾಣಿ ಪತ್ರಿಕೆ ವರದಿ ಮಾಡಿದೆ.

ಸಿಬ್ಬಂದಿಗಳ ಸಮಸ್ಯೆಗೆ ಸರಕಾರ ಸ್ಪಂದಿಸಲಿ

ಸಿಬ್ಬಂದಿಗಳ ಸಮಸ್ಯೆಗೆ ಸರಕಾರ ಸ್ಪಂದಿಸಲಿ

ಅಧಿಕಾರಿಗಳ ಕಿರುಕುಳ, ವರ್ಗಾವಣೆ, ವೀಕ್ಲಿ ಆಫ್ ಸಮಸ್ಯೆ, ವಸತಿ ಸಮಸ್ಯೆ ಮುಂತಾದ ವಿಚಾರಗಳಿಂದ ಪೊಲೀಸ್ ಸಿಬ್ಬಂದಿಯ ತಾಳ್ಮೆಯ ಕಟ್ಟೆ ಇನ್ನೊಮ್ಮೆ ಯಾವಾಗ ಒಡೆದು ದಂಗೆಯಾಗುತ್ತೋ? ಇನ್ನಾದರೂ ಪೊಲೀಸ್ ಸಿಬ್ಬಂದಿಗಳ ಸಮಸ್ಯೆಗೆ ಸರಕಾರ ಸ್ಪಂದಿಸಿದರೆ ಮುಂದಾಗಬಹುದಾದ ಗಂಭೀರ ಸಮಸ್ಯೆಯಿಂದ ಪಾರಾಗಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Government of Karnataka need to address Police department issues on top priority such as transfer, weekly off, harassment by senior officers etc.,
Please Wait while comments are loading...