ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕಿ, ನೌಕರರಿಗೆ ಗುಡ್ ನ್ಯೂಸ್
ಬೆಂಗಳೂರು, ನವೆಂಬರ್ 16: ಕರ್ನಾಟಕ ಸರ್ಕಾರ ಅನುದಾನಿತ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕಿಯರಿಗೆ/ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ ಆದೇಶವೊಂದನ್ನು ಹೊರಡಿಸಲಾಗಿದೆ. ಆಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರಿಗೆ ಈ ಕುರಿತು ಆದೇಶದಲ್ಲಿ ನಿರ್ದೇಶನವನ್ನು ನೀಡಲಾಗಿದೆ. ಆದೇಶದ ವಿವರಗಳು ಇಲ್ಲಿವೆ.
ಈ ಕುರಿತು ಎಂ. ಎ. ಮಹಾಲಕ್ಷ್ಮಿ, ಸರ್ಕಾರದ ಅಧೀನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ್ರಾಥಮಿಕ) ಆದೇಶವನ್ನು ಹೊರಡಿಸಿದ್ದಾರೆ. ದಿನಾಂಕ 19/82024ರ ಪತ್ರವನ್ನು ಉಲ್ಲೇಖಿಸಿದ್ದಾರೆ. ಈ ಆದೇಶ ಅನುದಾನಿತ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕಿಯರಿಗೆ/ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ ಎಂಬ ಆದೇಶವನ್ನು ಒಳಗೊಂಡಿದೆ.

ಆದೇಶದ ವಿವರ: ಈ ವಿಷಯಕ್ಕೆ ಸಂಬಂಧಿಸಿದಂತೆ ಪಸ್ತಾವನೆಯನ್ನು ಪರಿಶೀಲಿಸಲಾಗಿದೆ. ಅನುದಾನಿತ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕಿಯರು/ ನೌಕರರಿಗೆ ಶಿಶುಪಾಲನಾ ರಜೆಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಗಳಿಗೆ ತೊಂದರೆಯಾಗದಂತೆ ವಿಸ್ತರಿಸಲು ಹಾಗೂ ರಜೆಯ ಸಮಯದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸಂಬಂಧಿಸಿದ ಆಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರೇ ಸ್ವಂತ ಸಂಪನ್ಮೂಲದಿಂದ ಒದಗಿಸಿಕೊಂಡು ವಿಸ್ತರಿಸಲು ಅಗತ್ಯ ಕ್ರಮವಹಿಸುವಂತೆ ತಮ್ಮನ್ನು ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಹೇಳಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯರು, ನೌಕರರಂತೆ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು/ ನೌಕರರು ಸರ್ಕಾರದಿಂದಲೇ ವೇತನ ಪಡೆಯುತ್ತಿದ್ದಾರೆ. ಅನುದಾನಿತ ಮತ್ತು ಸರ್ಕಾರಿ ಶಾಲಾ ಶಿಕ್ಷಕರ/ ನೌಕರರ ಕರ್ತವ್ಯದ ಸ್ವರೂಪ ಒಂದೇ ಮಾದರಿಯದ್ದಾಗಿದೆ.
ಆದರೆ ಶಿಶುಪಾಲನಾ ರಜೆ ವಿಚಾರದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯರಿಗೆ/ ನೌಕರರಿಗೆ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕಿಯರಿಗೆ/ ನೌಕರರಿಗೆ ವ್ಯತ್ಯಾಸವಿತ್ತು. ಅಲ್ಲದೇ ಸರ್ಕಾರಿ ಶಾಲಾ ಶಿಕ್ಷಕಿಯರು/ ನೌಕರರಿಗೆ ಇರುವ ಮಾದರಿಯಲ್ಲಿಯೇ ಶಿಶು ಪಾಲನಾ ರಜೆ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಈಗ ರಜೆಯನ್ನು ನೀಡಿ ಆದೇಶವನ್ನು ಹೊರಡಿಸಲಾಗಿದೆ.
2023ರಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಸರ್ಕಾರ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯ ಜೊತೆಗೆ ಒಟ್ಟು ಸೇವಾವಧಿಯಲ್ಲಿ 6 ತಿಂಗಳ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿತ್ತು. ಸಕ್ಷಮ ಪ್ರಾಧಿಕಾರ ಕೆಲವು ಷರತ್ತುಗಳ ಜೊತೆಗೆ 180 ದಿನಗಳ ಶಿಶುಪಾಲನಾ ರಜೆಯನ್ನು ನೀಡಬಹುದು ಎಂದು ಆದೇಶ ತಿಳಿಸಿತ್ತು.
ವೇತನ ಆಯೋಗ: ಕರ್ನಾಟಕ ಸರ್ಕಾರಕ್ಕೆ ವರದಿ ನೀಡಿರುವ ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹಿಳಾ ನೌಕರರು ಮಾತೃತ್ವ ಪ್ರಯೋಜನ ಕಾಯಿದೆ, 1961ರಡಿ ಗರ್ಭ ಧರಿಸಿದ ಮತ್ತು ಹೆರಿಗೆಯ ಅವಧಿಯಲ್ಲಿ ಒಟ್ಟು 26 ವಾರಗಳ ಮಾತೃತ್ವ ರಜೆಯನ್ನು ತೆಗೆದುಕೊಳ್ಳಲು ಮತ್ತು ಹೆರಿಗೆಗೆ ಮೊದಲು 8 ವಾರಗಳ ರಜೆಯನ್ನು ಪಡೆಯಲು ಹಾಗೂ ಹೆರಿಗೆಯ ನಂತರ ಅದನ್ನು 26 ವಾರಗಳಿಗೆ ವಿಸ್ತರಿಸಿಕೊಳ್ಳುವ ಅವಕಾಶವಿರುತ್ತದೆ.
ಈ ಸೌಲಭ್ಯವು ಸೇವೆಯ ಅವಧಿಯಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ. ಆದಾಗ್ಯೂ, ಸೇವೆಗೆ ಸೇರುವ ಮೊದಲೇ ಹೆರಿಗೆಯಾಗಿದ್ದು ಮತ್ತು ಸೇವೆಗೆ ಸೇರುವ ಸಮಯದಲ್ಲಿ ಹಾಲುಣಿಸುವ ತಾಯಿಯಾಗಿದ್ದರೂ ಸಹ ಮಹಿಳಾ ನೌಕರರು ಈ ಸೌಲಭ್ಯವನ್ನು ಪಡೆಯಲಾಗುವುದಿಲ್ಲ ಎಂದು ಹೇಳಿತ್ತು.
ಸೇವೆಗೆ ಸೇರುವ ಮೊದಲು ಮಗುವಿಗೆ ಜನ್ಮ ನೀಡಿದ ಮತ್ತು ಸೇವೆಗೆ ಸೇರುವ ಸಮಯದಲ್ಲಿ ನವಜಾತ ಶಿಶುವಿನ ಆರೈಕೆಯಲ್ಲಿ ತೊಡಗಿರುವ ಮಹಿಳಾ ಉದ್ಯೋಗಿಗಳಿಗೆ ಪ್ರಯೋಜನವನ್ನು ವಿಸ್ತರಿಸಲು ಇದು ಒಳಗೊಳ್ಳುವಿಕೆಯ ಕ್ರಮ ಆಗುತ್ತದೆ. ಆದ್ದರಿಂದ ಸೇವೆಗೆ ಸೇರುವ 60 ದಿನಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ 18 ವಾರಗಳ ಹೆರಿಗೆ ರಜೆಯನ್ನು ವಿಸ್ತರಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ತಿಳಿಸಿತ್ತು.












Click it and Unblock the Notifications