Government Employee: ಏರಿಕೆಯಾಗಿರುವ ತುಟ್ಟಿಭತ್ಯೆ ಸರ್ಕಾರಿ ನೌಕರರ ಕೈ ಸೇರುವುದು ಯಾವಾಗ?
ಬೆಂಗಳೂರು, ಡಿಸೆಂಬರ್ 24; ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಏರಿಕೆ ಮಾಡಿದೆ. ನವೆಂಬರ್‌ನಲ್ಲಿ ಈ ಕುರಿತು ಆದೇಶ ಪ್ರಕಟವಾಗಿದ್ದು, ಏರಿಕೆಯಾಗಿರುವ ಡಿಎ ನೌಕರರ ಕೈ ಸೇರುವುದು ಯಾವಾಗ? ಎಂಬುದು ಪ್ರಶ್ನೆಯಾಗಿದೆ. ಸರ್ಕಾರ ತನ್ನ ಆದೇಶದಲ್ಲಿ ಡಿಎಯನ್ನು ಪ್ರಸ್ತುತ ಮೂಲ ವೇತನದ ಶೇ 8.50 ರಿಂದ ಶೇ 10.75ಕ್ಕೆ ಪರಿಷ್ಕರಿಸಿದೆ. ಪರಿಷ್ಕೃತ ದರಗಳ ಆರ್ಥಿಕ ಲಾಭ ದಿನಾಂಕ 1/8/2024ರಿಂದ ಲಭ್ಯವಾಗುತ್ತದೆ ಎಂದು ತಿಳಿಸಿದೆ.
ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಉಮಾ. ಕೆ ಸರ್ಕಾರದ ಜಂಟಿ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2) ಆದೇಶ ಹೊರಡಿಸಿದ್ದರು. ಆದೇಶದ ಅನ್ವಯ ಪಾವತಿ ಮಾಡಬೇಕಾಗಿರುವ ತುಟ್ಟಿಭತ್ಯೆ ಬಾಕಿ ಮೊತ್ತವನ್ನು, 2024ರ ಡಿಸೆಂಬರ್ ಮಾಹೆಯ ವೇತನ ಬಟವಾಡೆಗೂ ಮೊದಲು ಪಾವತಿ ಮಾಡತಕ್ಕದ್ದಲ್ಲ ಎಂದು ಹೇಳಿದ್ದರು.

ಡಿಸೆಂಬರ್ ವೇತನದಲ್ಲಿ ಸೇರ್ಪಡೆ: ರಾಜ್ಯ ಸರ್ಕಾರಿ ನೌಕರರ ಡಿಸೆಂಬರ್ ತಿಂಗಳ ವೇತನದಲ್ಲಿ ಏರಿಕೆಯಾಗಿರುವ ತುಟ್ಟಿಭತ್ಯೆ ಸೇರ್ಪಡೆಯಾಗಿದೆ. ಈಗಾಗಲೇ ವೇತನದಲ್ಲಿ ಡಿಎ ಸೇರಿಸುವ ಕೆಲಕ್ಕೆ HRMS ನಲ್ಲಿ ಚಾಲನೆ ಕೊಡಲಾಗಿದೆ. ಈ ತಿಂಗಳ ವೇತನ ಬಿಲ್‌ನಲ್ಲಿಯೇ ಏರಿಕೆಯಾಗಿರುವ ತುಟ್ಟಿಭತ್ಯೆ ಸೇರಿರುತ್ತದೆ ಎಂದು ಸರ್ಕಾರಿ ನೌಕರರ ಟೆಲಿಗ್ರಾಮ್ ಚಾಲನ್‌ನಲ್ಲಿ ಮಾಹಿತಿ ನೀಡಲಾಗಿದೆ.
ಸರ್ಕಾರವು ತನ್ನ ಆದೇಶದಲ್ಲಿ 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ರಾಜ್ಯ ಸರ್ಕಾರಿ ನೌಕರರುಗಳಿಗೆ ನೀಡಲಾಗುತ್ತಿರುವ ತುಟ್ಟಿ ಭತ್ಯೆಯ ದರಗಳನ್ನು 1ನೇ ಜುಲೈ 2024 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ 8.50% ರಿಂದ 10.75% ಕ್ಕೆ ಪರಿಷ್ಕರಿಸಿ ಹೆಚ್ಚಳ ಮಾಡಲು ಹರ್ಷಿಸುತ್ತದೆ. ಪರಿಷ್ಕೃತ ತುಟ್ಟಿ ಭತ್ಯೆಯ ದರಗಳ ಆರ್ಥಿಕ ಲಾಭ ದಿನಾಂಕ 01.08.2024 ರಿಂದ ಲಭ್ಯವಾಗುತ್ತದೆ ಎಂದು ಹೇಳಿತ್ತು.
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ ಕುಟುಂಬ ನಿವೃತ್ತಿ ವೇತನದಾರರಿಗೂ ಸಹ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರಗಳನ್ನು ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನದ ಪ್ರಸಕ್ತ 8.50% ರಿಂದ 10.75% ಕ್ಕೆ ಹೆಚ್ಚಿಸಲಾಗಿದೆ.
ಕೇಂದ್ರದ ಎನ್‌ಡಿಎ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನ ನೌಕರರಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಏರಿಕೆ ಮಾಡಿತ್ತು. ಸಂಪ್ರದಾಯದಂತೆ ಕೇಂದ್ರ ಸರ್ಕಾರ ಡಿಎ ಏರಿಕೆ ಮಾಡಿದ ಬಳಿಕ ರಾಜ್ಯ ಸರ್ಕಾರವು ಡಿಎ ಹೆಚ್ಚಳ ಮಾಡಬೇಕು. ಆದರೆ ಸರ್ಕಾರ ಆದೇಶ ಹೊರಡಿಸಲು ವಿಳಂಬ ಮಾಡಿತ್ತು. ಆದ್ದರಿಂದ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿ, ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿತ್ತು.
ಅಂತಿಮವಾಗಿ ರಾಜ್ಯ ಸರ್ಕಾರ ನವೆಂಬರ್ ಅಂತ್ಯದಲ್ಲಿ ಡಿಎ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಕೇಂದ್ರ ಸರ್ಕಾರ ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ದಿನಾಂಕ 01-07-2024ರಿಂದ ಅನ್ವಯವಾಗುವಂತೆ ನೌಕರರಿಗೆ ಶೇ. 3ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಿದೆ. ಕರ್ನಾಟಕ ಸರ್ಕಾರ ಡಿಎ ಅನ್ನು ಮೂಲ ವೇತನದ ಶೇ 8.50 ರಿಂದ ಶೇ 10.75ಕ್ಕೆ ಪರಿಷ್ಕರಿಸಿದೆ.












Click it and Unblock the Notifications