Cauvery Dispute: ದೆಹಲಿಯಲ್ಲಿ ಧಗಧಗಿಸಲಿದೆ ಕಾವೇರಿ ಹೋರಾಟದ ಕಿಚ್ಚು
ಕಾವೇರಿ ನೀರು ಹಂಚಿಕೆ ವಿಚಾರ ದೊಡ್ಡ ಕಿಚ್ಚು ಹಚ್ಚುವ ಸೂಚನೆ ನೀಡಿದೆ. ಅದರಲ್ಲೂ ತಮಿಳುನಾಡು ಮತ್ತು ಕರ್ನಾಟಕ ನಡುವೆ ಈ ವಿಚಾರಕ್ಕೆ ದೊಡ್ಡ ಸಂಘರ್ಷ ಶುರುವಾಗಿ, ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿವೆ. ಇದೇ ಸಂದರ್ಭದಲ್ಲಿ ರಾಜ್ಯದ ಸಂಸದರು ಪಕ್ಷ ಭೇದ ಮರೆತು ಒಂದಾಗುವ ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ.
ಹೌದು ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್ಯದ ಎಲ್ಲಾ ಪಕ್ಷಗಳ ಸಂಸದರ ಸಭೆ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಈ ವಿಚಾರದ ಮಾಹಿತಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಕಾವೇರಿ ಹೋರಾಟದ ಮುಂದಿನ ನಡೆ ಬಗ್ಗೆ ಮಾಹಿತಿ ನೀಡಿದರು.

ಸರ್ವಪಕ್ಷಗಳ ಸಂಸದರ ಮೀಟಿಂಗ್ ಫಿಕ್ಸ್
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಹಾಗೇ ಕೇಂದ್ರ ಸಚಿವರು ಮತ್ತು ರಾಜ್ಯದ ಸಂಸದರನ್ನ ಭೇಟಿ ಮಾಡಲು ಸಿಎಂ ಸಿದ್ದರಾಮಯ್ಯ, ನಾನು, ಸಚಿವರಾದ ಚೆಲುವರಾಯಸ್ವಾಮಿ, ಮಹದೇವಪ್ಪ, ಹೆಚ್.ಕೆ ಪಾಟೀಲ್ ಹಾಗೂ ರಾಜ್ಯದ ಪ್ರತಿನಿಧಿಗಳು ದೆಹಲಿಗೆ ತೆರಳುತ್ತಿದ್ದೇವೆ. ನಾಳೆ ಎಲ್ಲಾ ಸಂಸದರ ಸಭೆ ನಡೆಯಲಿದ್ದು, ನಮ್ಮ ರಾಜ್ಯದ ರೈತರ ಹಿತ ಕಾಯಲು ಅಗತ್ಯ ಕೆಲಸ ಮಾಡುತ್ತೇವೆ ಎಂದಿದ್ದಾರೆ ಡಿಸಿಎಂ. ಈ ಮೂಲಕ ಕಾವೇರಿ ಕಿಚ್ಚು ರಾಷ್ಟ್ರ ರಾಜಧಾನಿಯಲ್ಲೂ ಧಗಧಗಿಸಲಿದೆ.
ಈಗಲಾದರೂ ರಾಜ್ಯಕ್ಕೆ ಸಿಗುತ್ತಾ ನ್ಯಾಯ?
ತಮಿಳುನಾಡು ಸರ್ಕಾರಕ್ಕೆ ಕರ್ನಾಟಕ ಬರ ಪರಿಸ್ಥಿತಿ ಅರ್ಥವೇ ಆದಂತೆ ಕಾಣುತ್ತಿಲ್ಲ. ಹೀಗಾಗಿ ಕಾವೇರಿ ನೀರು ಹಂಚಿಕೆ ವಿಚಾರವನ್ನು ದೆಹಲಿಗೆ ಕೊಂಡೊಯ್ಯುತ್ತಾ ದೊಡ್ಡದು ಮಾಡುತ್ತಿದೆ. ಮಳೆ ಕೊರತೆ ನಡುವೆ ರಾಜ್ಯದ ರೈತರು ಅದ್ರಲ್ಲೂ ಕಾವೇರಿ ಭಾಗದ ರೈತರು ನರಳುತ್ತಿದ್ದು ಇದೇ ಸಮಯಕ್ಕೆ ನೀರು ಬೇಕು ಅಂತಾ ತಮಿಳುನಾಡು ಹಠ ಮಾಡುತ್ತಿದೆ. ಆದರೆ ಇದನ್ನ ನೋಡಿ ರಾಜ್ಯದ ಜನಪ್ರತಿನಿಧಿಗಳು ಒಂದಾಗಿದ್ದಾರೆ. ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಪಯಣ ಬೆಳೆಸಿದ್ದಾರೆ. ಹೀಗಾಗಿ ಈ ಬಾರಿಯಾದರೂ ನಮ್ಮ ರಾಜ್ಯಕ್ಕೆ ನ್ಯಾಯ ಸಿಗುತ್ತಾ? ಅಂತಿದ್ದಾರೆ ರೈತರು.
ಒಟ್ನಲ್ಲಿ ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟು ಭೀಕರ ಬರ ಎದುರಾಗಿ ಅನ್ನದಾತರು ನರಳುತ್ತಿದ್ದಾರೆ. ಹೀಗಾಗಿ ರಾಜ್ಯದ ಪರಿಸ್ಥಿತಿ ಅರ್ಥ ಮಾಡಿಕೊಂಡು, ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಬುದ್ಧಿ ಹೇಳಲಿ ಎಂಬ ಒತ್ತಾಯ ರಾಜ್ಯದ ಜನರದ್ದು. ಇದೇ ಕಾರಣಕ್ಕೆ ಕೇಂದ್ರದ ಮನವೊಲಿಸಲು ರಾಜ್ಯ ಸರ್ಕಾರ ಕೂಡ ಸಜ್ಜಾಗಿದ್ದು ರಾಜ್ಯದ ಎಲ್ಲಾ ಪಕ್ಷಗಳ ಸಂಸದರ ನಿಯೋಗ ದೆಹಲಿಯಲ್ಲಿ ನಾಳೆ ಮೀಟಿಂಗ್ ಮಾಡಲಿದೆ. ಇದು ಹೇಗೆ ಫಲಿತಾಂಶ ಕೊಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications