ಗ್ರಾಹಕರೇ ಹುಷಾರ್...! ಈ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ತಿನ್ನುವಂತಿಲ್ಲ!
ಬೆಂಗಳೂರು ಮಾರ್ಚ್ 11: ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಯಲ್ಲಿ ಅಪಾಯಕಾರಿ ಕೃತಕ ಬಣ್ಣ ಬಳಕೆ ಹೆಚ್ಚಾಗಿದ್ದು ಆಹಾರ ತಪಾಸಣೆಯಲ್ಲಿ ಕಂಡು ಬಂದಿದೆ. ಹೀಗಾಗಿ ಇಂತಹ ಗೋಬಿ ಮಂಚೂರಿ,ಕಾಟನ್ ಕ್ಯಾಂಡಿಯನ್ನು ರಾಜ್ಯದಲ್ಲಿ ಸರ್ಕಾರ ನಿಷೇಧಿಸಿದೆ.
ಅಪಾಯಕಾರಿ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್ನು ಮಾರುವಂತಿಲ್ಲ. ಒಂದು ವೇಳೆ ಮಾರಾಟ ಅಥವಾ ಕೃತಕ ಬಣ್ಣ ಬಳಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.

ಇಂದು ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ದಿನೇಶ್ ಗುಂಡೂರಾವ್ ಅವರು ಮಾತನಾಡಿ, 'ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಇದನ್ನು ಆಹಾರ ಸಂರಕ್ಷಣೆ ಕಾಯಿದೆ ಅಡಿ ಪರೀಕ್ಷೆ ಮಾಡಲಾಗಿದೆ. ಸರ್ವೆಯಲ್ಲಿ ಸ್ಯಾಂಪಲ್ ಪರೀಕ್ಷೆ ಮಾಡಲಾಗಿತ್ತು. ಈ ಸರ್ವೆಯಲ್ಲಿ ಹತ್ತಾರು ಮಾದರಿ ಕಾಟನ್ ಕ್ಯಾಂಡಿ ಅಸುರಕ್ಷಿತವಾಗಿರುವುದು ಕಂಡು ಬಂದಿದೆ. ನೂರಕ್ಕೂ ಹೆಚ್ಚು ಮಾದರಿಯ ಗೋಬಿ ಹಾನಿಕಾರಕವಾಗಿದೆ. ಇದನ್ನು ಬಳಕೆ ಮಾಡುವಂತಿಲ್ಲ. ಇದಕ್ಕೆ ಅನುಮತಿಯೂ ಇಲ್ಲ' ಎಂದು ಅವರು ಹೇಳಿದರು.
ಗುಲಾಬಿ ಬಣ್ಣ ನೋಡಲು ಆಕರ್ಷಣಿಯವಾಗಿರುತ್ತದೆ. ಆದರೆ ಅದನ್ನು ಆಹಾರದಲ್ಲಿ ಯಾವುದೇ ಕಾರಣಕ್ಕೂ ಬಳಕೆ ಮಾಡುವಂತಿಲ್ಲ. ಇದರಲ್ಲಿ ಕೆಮಿಕಲ್ ಇರುವುದು ಪತ್ತೆಯಾಗಿದೆ. ಇದರಲ್ಲಿ ರೋಡೋ ಮೈನ್ ಬಿಯನ್ ಹಾಗೂ ಟಾಟರ್ಜಿನ್ ಎಂಬ ಎರಡು ಕೆಮಿಕಲ್ ಇರುತ್ತದೆ. ಇದು ದೇಹಕ್ಕೆ ಹಾನಿಕರವಾಗಿದೆ. ಹೀಗಾಗಿ ಮಕ್ಕಳು ಇದನ್ನು ತಿನ್ನಬಾರದು. ಇದು ಕಾನ್ಸರ್ ಸೇರಿದಂತೆ ನಾನಾ ಕಾಯಿಲೆಗಳನ್ನು ಹುಟ್ಟುಹಾಕುತ್ತದೆ ಎಂದು ದಿನೇಶ್ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಮಾರಾಟಗಾರರು ಇನ್ನು ಮುಂದೆ ಎಚ್ಚರಿಕೆಯಿಂದ ಇರಬೇಕು. ಹಾನಿಕಾರಕ ಬಣ್ಣಗಳನ್ನು ಬಳಸಿ ಗೋಬಿ ಅಥವಾ ಕಾಟನ್ ಕ್ಯಾಂಡಿ ಇನ್ನಿತರ ಆಹಾರ ಪದಾರ್ಥಗಳನ್ನು ತಯಾರಿಸುವುದು ಕಂಡು ಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಅಂಥಹ ಮಾರಾಟ ಮಳಿಗೆಯ ಪರವಾನಿಗೆಯನ್ನು ರದ್ದು ಪಡಿಸಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
10 ಲಕ್ಷ ದಂಡ:
ಹಲವೆಡೆ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯಲ್ಲಿ ಕೆಮಿಕಲ್ಸ್ ಬಳಕೆ ಮಾಡಲಾಗುತ್ತಿದೆ. ಇದನ್ನು ಬಳಕೆ ಮಾಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಯಾರಾದರು ಬಳಕೆ ಮಾಡಿದರೆ ಶಿಕ್ಷೆ ಕೂಡ ನೀಡಬಹುದು. ಈ ಕಲರ್ ನೀಡುವ ಕೆಮಿಕಲ್ ಅನ್ನು ಬಳಕೆ ಮಾಡುವಂತಿಲ್ಲ. ಮುಂದೆ ಬೇರೆ ಬೇರೆ ಪದಾರ್ಥಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ. ಕಾನೂನಿನಡಿ ಇರುವ ನಿಯಮಗಳನ್ನು ಕಾರ್ಯಗತ ಮಾಡುತ್ತಿದ್ದೇವೆ. ನಿಯಮ ಮೀರಿದಲ್ಲಿ ಏಳು ವರ್ಷ ಜೈಲು, ಜೀವಾವಧಿ ಶಿಕ್ಷೆಯವರೆಗೆ ಶಿಕ್ಷೆ ವಿಧಿಸಬಹುದು. 10 ಲಕ್ಷದವರೆಗೂ ದಂಡ ಹಾಕಲಾಗುತ್ತದೆ ಎಂದರು.












Click it and Unblock the Notifications