ಅಮಿತ್ ಶಾ ಮುಂದೆ 2ನೇ ಬಾರಿ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್!
ಬೆಂಗಳೂರು, ಮೇ 19 : ಕರ್ನಾಟಕದಲ್ಲಿ ಬಹುಮತವಿಲ್ಲದೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರ 3ನೇ ದಿನದಲ್ಲಿ ಪತನಗೊಂಡಿದೆ. 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆ ಮಾಡದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 78 ಸ್ಥಾನಗಳಿಸಿದ್ದ ಕಾಂಗ್ರೆಸ್, 38 ಸ್ಥಾನಗಳಿಸಿದ್ದ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. 104 ಸ್ಥಾನದಲ್ಲಿ ಜಯಗಳಿಸಿದ್ದ ಬಿಜೆಪಿ ಬಹುಮತ ಸಾಬೀತು ಪಡಿಸಲು ವಿಫಲವಾಗಿದೆ. ರಾಜ್ಯದಲ್ಲಿ ಸರ್ಕಾರ ಉರುಳಿಬಿದ್ದಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಡಿ.ಕೆ.ಶಿವಕುಮಾರ್. ರಾಜ್ಯದ ಪ್ರಭಾವಿ ಒಕ್ಕಲಿಗ ಸಮುದಾಯದ ನಾಯಕರಾದ ಅವರು, ಬಿಜೆಪಿಯ ಕಾರ್ಯತಂತ್ರಗಳನ್ನು ಬುಡಮೇಲು ಮಾಡಿ, ಬಿಜೆಪಿ ಚಾಣಾಕ್ಯ ಎಂದೇ ಕರೆಸಿಕೊಳ್ಳುವ ಅಮಿತ್ ಶಾ ವಿರುದ್ಧ ಜಯಗಳಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎದುರು ಡಿ.ಕೆ.ಶಿವಕುಮಾರ್ ಅವರು ಗೆದ್ದಿರುವುದು ಇದೇ ಮೊದಲಲ್ಲ. ಗುಜರಾತ್ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿಯೂ ಅವರು ಗೆಲುವು ಸಾಧಿಸಿದ್ದರು. ಡಿ.ಕೆ.ಶಿವಕುಮಾರ್ ಮೈತ್ರಿಯಲ್ಲಿ ಮಾಡಿದ ಮೋಡಿಗಳೇನು? ತಿಳಿಯೋಣ ಬನ್ನಿ.....

ನಿಜವಾದ ಚಾಣಾಕ್ಷ ಯಾರು?
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರು ಪ್ರಧಾನಿಯಾದರು. ಆಗ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಚಾಣಾಕ್ಯ ಎಂದು ಕರೆಯಲು ಆರಂಭಿಸಲಾಯಿತು. ಕರ್ನಾಟಕದ ಚುನಾವಣೆಯಲ್ಲಿಯೂ ಬಿಜೆಪಿಗೆ 150 ಸ್ಥಾನವನ್ನು ತಂದುಕೊಡಲು ಅಮಿತ್ ಶಾ ತಂತ್ರ ರೂಪಿಸಿದ್ದಾರೆ ಎಂಬ ವಿಶ್ಲೇಷಣೆಗಳನ್ನು ಮಾಡಲಾಗಿತ್ತು.
ಆದರೆ, ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿಲ್ಲ. 104 ಸ್ಥಾನಗಳಿಗೆ ಮಾತ್ರ ಬಿಜೆಪಿ ತೃಪ್ತಿ ಪಟ್ಟುಕೊಂಡಿತು. ಆಗ ಶುರುವಾಗಿದ್ದು ಮೈತ್ರಿ ಮಾತುಕತೆ. ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ತಂತ್ರದ ಮುಂದೆ ಬಿಜೆಪಿಗೆ ಸೋಲಾಯಿತು. ಬಿಜೆಪಿಯವರು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯದಂತೆ ಮಾಡಿದ್ದು, ಡಿ.ಕೆ.ಶಿವಕುಮಾರ್.

ಡಿ.ಕೆ.ಶಿವಕುಮಾರ್ ಪಾತ್ರ
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿ ಮಾತುಕತೆ ಆರಂಭವಾಯಿತು. ಆಗ ಡಿ.ಕೆ.ಶಿವಕುಮಾರ್ ಅವರು ಮಹತ್ವದ ಪಾತ್ರ ವಹಿಸಿದರು. ಒಂದು ಕಾಲದಲ್ಲಿ ಕುಮಾರಸ್ವಾಮಿ ಅವರ ರಾಜಕೀಯ ಕಡು ವೈರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರು ಈಗ ಕುಮಾರಸ್ವಾಮಿ ಅವರ ಆಪ್ತರು.
ರೆಸಾರ್ಟ್ ರಾಜಕಾರಣ ಆರಂಭವಾದಾಗ ಕಾಂಗ್ರೆಸ್ ಶಾಸಕರನ್ನು ಈಗಲ್ಟ್‌ನ್ ರೆಸಾರ್ಟ್‌ಗೆ ಕರೆದುಕೊಂಡು ಹೋಗುವುದು ಸೇರಿದಂತೆ ಪ್ರಮುಖ ಕಾರ್ಯಗಳಲ್ಲಿ ಡಿ.ಕೆ.ಶಿವಕುಮಾರ್ ಮುಂಚೂಣಿಯಲ್ಲಿದ್ದರು.
ಮೇ 16ರ ಬಳಿಕ ನಾಪತ್ತೆಯಾಗಿ ಬಿಜೆಪಿ ವಲಯಕ್ಕೆ ಜಿಗಿದರು ಎಂದು ಅನ್ನಿಸಿದ್ದ ಆನಂದ್ ಸಿಂಗ್ ಮತ್ತು ಪ್ರತಾಪಗೌಡ ಪಾಟೀಲ್ ಅವರನ್ನು ಕಾಂಗ್ರೆಸ್‌ನಲ್ಲಿಯೇ ಉಳಿಯುವಂತೆ ಮಾಡಿ, ಬಿಜೆಪಿ ತಂತ್ರವನ್ನು ಬುಡಮೇಲು ಮಾಡಿದ್ದು, ಡಿ.ಕೆ.ಶಿವಕುಮಾರ್.

ಗುಜರಾತ್ ರಾಜ್ಯಸಭೆ ಚುನಾವಣೆ
ಗುಜರಾತ್ ರಾಜ್ಯಸಭೆ ಚುನಾವಣೆ ದೇಶದ ಗಮನ ಸೆಳೆದಿತ್ತು. ಕುದರೆ ವ್ಯಾಪಾರದ ಭೀತಿಯಲ್ಲಿದ್ದ ಗುಜರಾತ್‌ನ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಬಂದಿದ್ದರು. ಆಗ ಅವರಿಗೆಲ್ಲಾ ಈಗಲ್ಟನ್ ರೆಸಾರ್ಟ್‌ನಲ್ಲಿ ವಸತಿ ವ್ಯವಸ್ಥೆ ಮಾಡಿದ್ದು ಡಿ.ಕೆ.ಶಿವಕುಮಾರ್.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತವರು ರಾಜ್ಯ ಗುಜರಾತ್‌ನಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಸೋಲುವಂತೆ ಮಾಡಲು ತಂತ್ರ ರೂಪಿಸಿದ್ದರು. ಆದರೆ, ಅದನ್ನು ತಲೆಕೆಳಗು ಮಾಡಿ, ಶಾಸಕರನ್ನು ಬಿಜೆಪಿ ವಶವಾಗದಂತೆ ಮಾಡಿದ್ದು ಡಿ.ಕೆ.ಶಿವಕುಮಾರ್. ಅಮಿತ್ ಶಾ ಸಮ್ಮುಖದಲ್ಲಿ ಇದು ಡಿ.ಕೆ.ಶಿವಕುಮಾರ್ ಮೊದಲ ಗೆಲುವು. ರಾಜ್ಯಸಭೆ ಚುನಾವಣೆಯಲ್ಲಿಯೂ ಅಹಮದ್ ಪಟೇಲ್ ಜಯಗಳಿಸಿದ್ದರು.

ಡಿ.ಕೆ.ಶಿವಕುಮಾರ್ ತಂತ್ರ
ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಂದರ್ಭದಲ್ಲಿ ಶಾಸಕರನ್ನು ಈಗಲ್ಟನ್ ರೆಸಾರ್ಟ್‌ಗೆ ಕರೆದುಕೊಂಡು ಹೋಗಲಾಯಿತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ರೆಸಾರ್ಟ್‌ಗೆ ಇದ್ದ ಪೊಲೀಸ್ ಭದ್ರತೆ ವಾಪಸ್ ಪಡೆಯಲಾಯಿತು. ಆಗ ಬಿಜೆಪಿಯವರು ಶಾಸಕರನ್ನು ಸೆಳೆಯುವುದು ಸುಲಭವಾಯಿತು.
ಈ ಸಮಯದಲ್ಲಿ ತಂತ್ರ ರೂಪಿಸಿದ ಡಿ.ಕೆ.ಶಿವಕುಮಾರ್ ಶಾಸಕರನ್ನು ಹೊರರಾಜ್ಯಕ್ಕೆ ಕರೆದುಕೊಂಡು ಹೋಗಲು ತಂತ್ರ ರೂಪಿಸಿದರು. ಶಾಸಕರ ಭದ್ರತೆಗಾಗಿ ಬೌನ್ಸರ್ ನೇಮಕ ಮಾಡಿದರು. ಹಿರಿಯ ನಾಯಕರ ತಂಡ ರಚನೆ ಮಾಡಿ ಶಾಸಕರನ್ನು ನೋಡಿಕೊಳ್ಳಲು ನೇಮಿಸಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಯಾವ ತಂತ್ರವನ್ನು ರೂಪಿಸಿ ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲದಂತೆ ಶಾಸಕರ ಸುತ್ತ ಭದ್ರಕೋಟೆ ನಿರ್ಮಿಸಿದರು. ಕೊನೆಗೂ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಮಾಡಿದರು.

ಶಾಸಕರನ್ನು ಕಾಂಗ್ರೆಸ್‌ಗೆ ಮರಳಿ ತಂದರು
ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್, ವಿಜಯನಗರದ ಶಾಸಕ ಆನಂದ್ ಸಿಂಗ್ ಬಿಜೆಪಿ ವಶವಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಿಜೆಪಿಗೆ ಅವರು ಬೆಂಬಲ ನೀಡಲಿದ್ದಾರೆ ಎಂದೇ ವಿಶ್ಲೇಷಿಸಲಾಗಿತ್ತು.
ಆದರೆ, ಈ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು ಡಿ.ಕೆ.ಶಿವಕುಮಾರ್. ವಿಧಾನಸೌಧಕ್ಕೆ ಆಗಮಿಸಿದ ಪ್ರತಾಪ್ ಗೌಡ ಪಾಟೀಲ್ ಅವರನ್ನು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಾಳಯಕ್ಕೆ ಸೆಳೆದರು. ಆನಂದ್ ಸಿಂಗ್ ಅವರ ಹೆಗೆಲ ಮೇಲೆ ಕೈ ಹಾಕಿಕೊಂಡು ಸದನಕ್ಕೆ ಕರೆದುಕೊಂಡು ಬಂದರು.












Click it and Unblock the Notifications