ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಆಯ್ಕೆ ಸಿಂಧುತ್ವದ ಅರ್ಜಿ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು ನ.10. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಚುನಾವಣೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಯೋಗ್ಯವೋ, ಇಲ್ಲವೇ? ಈ ಕುರಿತು ಹೈಕೋರ್ಟ್ ಬುಧವಾರ ವಾದ ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.
ನಿರ್ಮಾಪಕರಾದ ಸಾ.ರಾ.ಗೋವಿಂದು, ಜಯಸಿಂಹ ಮುಸುರಿ, ಕೆ.ಎಂ.ವೀರೇಶ್ ಮತ್ತಿತರರು ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.
ಮೊದಲಿಗೆ ಅರ್ಜಿ ವಿಚಾರಣೆಗೆ ಸ್ವೀಕಾರಾರ್ಹವೇ, ಇಲ್ಲವೇ ಎಂಬ ಬಗ್ಗೆ ಮೊದಲು ನಿರ್ಧರಿಸಲಾಗುವುದು, ಆನಂತರ ಅರ್ಜಿ ಸ್ವೀಕಾರಾರ್ಹವಾದರೆ ಬಳಿಕ ಮೂಲ ಕೇಸ್ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ಅಕ್ರಮಗಳ ಆರೋಪ: ಕಳೆದ ಮೇ 28ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಗೆ ನಡೆದಿದೆ. ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಾ.ಮಾ.ಹರೀಶ್ 781 ಮತಗಳನ್ನು ಪಡೆದ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದರು, ಅಭ್ಯರ್ಥಿ ಸಾ.ರಾ.ಗೋವಿಂದು 371 ಮತಗಳನ್ನು ಗಳಿಸಿದ್ದರು. ಇಡೀ ಚುನಾವಣೆಯನ್ನು ಕಾನೂನುಬಾಹಿರವಾಗಿ ನಡೆಸಲಾಗಿದೆ. ಜೊತೆಗೆ ಅಕ್ರಮಗಳನ್ನು ಎಸಗಲಾಗಿದೆ, ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ದೂರಿದರು.
ಅಲ್ಲದೆ, ಮತದಾರರ ಪಟ್ಟಿಯನ್ನು ಸರಿಯಾಗಿ ಪ್ರಕಟಿಸಿಲ್ಲ, ಮತದಾನಕ್ಕೆ ಬಂದವರ ಬಳಿ ನಿಯಮದಂತೆ ಸಹಿ ಹಾಕಿಸಿಕೊಳ್ಳಬೇಕು, ಅದರಲ್ಲೂಅಕ್ರಮ ಎಸೆಗಲಾಗಿದೆ. ಮತದಾನಕ್ಕೆ ಬಂದವರ ಗುರುತಿನ ಚೀಟಿಗಳನ್ನೇ ಪರಿಶೀಲಿಸಿಲ್ಲ. ಇಡೀ ಚುನಾವಣಾ ಪ್ರಕ್ರಿಯೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೈಲಾಗೆ ವಿರುದ್ಧವಾಗಿ ನಡೆಸಲಾಗಿದೆ ಎಂದು ಹೇಳಿದರು.
ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಆಗಸ್ಟ್ ನಲ್ಲಿ, ಅರ್ಜಿ ಇತ್ಯರ್ಥವಾಗುವವರೆಗೆ ಕೆಎಫ್ ಸಿಸಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.












Click it and Unblock the Notifications