Karnataka Elections: ಪಕ್ಷ ಸೇರ್ಪಡೆ ಬೆನ್ನಲ್ಲೇ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡಿದ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 17: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ( BJP ) ಹಿರಿಯ ನಾಯಕ ಜಗದೀಶ್ ಶೆಟ್ಟರ್ ( Jagadish Shettar ) ಅವರು ಸೋಮವಾರ ಕಾಂಗ್ರೆಸ್ ಸೇರಿದರು. ಈ ಬೆಳವಣಿಗೆಯಿಂದ ಲಿಂಗಾಯತ ಪ್ರಾಬಲ್ಯದ ಪ್ರದೇಶಗಳಲ್ಲಿ ಕಾಂಗ್ರೆಸ್ ( Congress ) ಪಕ್ಷಕ್ಕೆ ಗಮನಾರ್ಹವಾದ ಬೆಂಬಲ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ಮಾಡಿದೆ. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಯಿಂದ ಟಿಕೆಟ್ ಸಿಗದ ಕಾರಣ ಶೆಟ್ಟರ್ ಅವರು ಕಾಂಗ್ರೆಸ್‌ಗೆ ಸೇರಿದ್ದಾರೆ.

ಪಕ್ಷಕ್ಕೆ ಸೇರ್ಪಡೆಗೊಂಡ ದಿನದಂದೇ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‌ನಿಂದ ಟಿಕೆಟ್ ಪಡೆದಿದ್ದು, ಹುಬ್ಬಳ್ಳಿ-ಧಾರವಾಡ (ಕೇಂದ್ರ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
67 ವರ್ಷ ವಯಸ್ಸಿನ ಮಾಜಿ ಸಿಎಂ, ಸ್ಪೀಕರ್ ಮತ್ತು ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿರುವ ಶೆಟ್ಟರ್ ಕರ್ನಾಟಕದ ವಾಯುವ್ಯ ಜಿಲ್ಲೆಗಳಲ್ಲಿ ಅಥವಾ ಕಿತ್ತೂರು ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅವರು ನಿರ್ಣಾಯಕ ಲಿಂಗಾಯತ ಸಮುದಾಯದ ದೊಡ್ಡ ನಾಯಕರಲ್ಲಿ ಒಬ್ಬರು. ಲಿಂಗಾಯತರ ಪ್ರಾಬಲ್ಯವಿರುವ ಆರು ಜಿಲ್ಲೆಗಳು 56 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿವೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, 'ಅವರು (ಬಿಜೆಪಿ) ಯಡಿಯೂರಪ್ಪ ಅವರನ್ನು ನಿರ್ದಯವಾಗಿ ಸಿಎಂ ಸ್ಥಾನದಿಂದ ಹೊರಹಾಕುವ ಮೂಲಕ ಅವಮಾನಿಸಿದ್ದಾರೆ. ಶೆಟ್ಟರ್ ರಾಜೀನಾಮೆ ನೀಡುವಾಗ ತಮ್ಮ ಅಳಲು ತೋಡಿಕೊಂಡರು. ತುಂಬಾ ನೋವಿನಿಂದ ಮಾತನಾಡಿದ್ದಾರೆ. ಬಿಜೆಪಿ ಅವರನ್ನು ನಡೆಸಿಕೊಂಡ ರೀತಿ ಯಾವುದೇ ಪಕ್ಷದ ನಾಯಕರಿಗೂ ಆಗಬಾರದು' ಎಂದು ಹೇಳಿದರು.

ಕರ್ನಾಟಕದ ಜಾತಿ ಅವಲಂಬಿತ ರಾಜಕಾರಣದಲ್ಲಿ, ಪಕ್ಷಗಳು ನಿರ್ದಿಷ್ಟ ಸಮುದಾಯಗಳ ಬೆಂಬಲವನ್ನು ಬಯಸುತ್ತವೆ. ಬಿಜೆಪಿ ಲಿಂಗಾಯತರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಒಂಬತ್ತು ವರ್ಷಗಳ ಬಿಜೆಪಿ ಅಧಿಕಾರದಲ್ಲಿ ಲಿಂಗಾಯತ ಸಮುದಾಯದಿಂದ ಮೂವರು ಮುಖ್ಯಮಂತ್ರಿಗಳಾಗಿದ್ದಾರೆ. ಡಿವಿ ಸದಾನಂದಗೌಡ ಬಿಜೆಪಿಯ ಏಕೈಕ ಒಕ್ಕಲಿಗ ಸಿಎಂ ಆಗಿದ್ದರು.
ಲಿಂಗಾಯತರು ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು 17 ಪ್ರತಿ ಶತದಷ್ಟಿದ್ದಾರೆ. ನಂತರದ ಸ್ಥಾನದಲ್ಲಿ ಬರುವ ಒಕ್ಕಲಿಗರು ಸುಮಾರು 14 ಪ್ರತಿ ಶತದಷ್ಟಿದ್ದಾರೆ.
'ಲಿಂಗಾಯತರನ್ನು ಬಿಜೆಪಿಯ ಕೇವಲ ವೋಟ್ ಬ್ಯಾಂಕ್ ಎಂದು ಪರಿಗಣಿಸುತ್ತದೆ. ಬಿಜೆಪಿ ಲಿಂಗಾಯತರನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ಈ ಕಾರಣಕ್ಕಾಗಿ ಕರ್ನಾಟಕವು ಹೊಸ ಬೃಹತ್ ರಾಜಕೀಯ ಮಂಥನಕ್ಕೆ ಸಾಕ್ಷಿಯಾಗಲಿದೆ. 2023 ರಲ್ಲಿ ಲಿಂಗಾಯತರು ಕಾಂಗ್ರೆಸ್‌ಗೆ ಮರಳಲು ಸಜ್ಜಾಗಿದ್ದಾರೆ' ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ ಬಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್‌ನ ಪ್ರಬಲ ಲಿಂಗಾಯತ ನಾಯಕರಲ್ಲಿ ಎಂ ಬಿ ಪಾಟೀಲ್ ಸಹ ಒಬ್ಬರು. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್‌ಗೆ ಕರೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಮೊದಲ ಬಾರಿಗೆ 1967 ರಲ್ಲಿ ಜನಸಂಘಕ್ಕೆ ಸೇರಿದರು. ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ( ABVP ), ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ( RSS ) ಕೆಲಸ ಮಾಡಿದರು. ಅವರು ಅಂತಿಮವಾಗಿ ಬಿಜೆಪಿಗೆ ಸೇರಿದರು. 1994ರಲ್ಲಿ ಮೊದಲ ಬಾರಿಗೆ ಕರ್ನಾಟಕದ ವಿಧಾನಸಭೆ ಪ್ರವೇಶಿಸಿದ ಅವರು ಹುಬ್ಬಳ್ಳಿ ಗ್ರಾಮೀಣ ಮತ್ತು ಧಾರವಾಡ ಕೇಂದ್ರದಿಂದ ಒಟ್ಟು ಆರು ಬಾರಿ ಸತತ ಗೆಲುವು ಸಾಧಿಸಿದರು.












Click it and Unblock the Notifications