• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಯಡಿಯೂರಪ್ಪನವರದೇ ಆಟ, ಬಿಜೆಪಿ ಹೈಕಮಾಂಡ್ ನಿಮಿತ್ತ!

By ಒನ್ಇಂಡಿಯಾ ಡೆಸ್ಕ್
|
   Karnataka Elections 2018 : ಬಿಜೆಪಿ ಹೈ ಕಮಾಂಡ್ ಡಮ್ಮಿ | ಯಡಿಯೂರಪ್ಪ ಪಾಳೇಗಾರ | Oneindia Kannada

   ಈ ಸಲ ವಿಧಾನಸಭೆ ಚುನಾವಣೆ ಟಿಕೆಟ್ ನ ತೀರ್ಮಾನ ಮಾಡುವುದು ಹೈಕಮಾಂಡ್. ಅಮಿತ್ ಶಾ- ಮೋದಿ ಸೇರಿ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂಬ ಸಂದೇಶ ತಲುಪಿಸಿ, ಆ ನಂತರ ತಮ್ಮ ವಿಶ್ವಾಸಿಗಳನ್ನು, ನಿಷ್ಠರನ್ನು ಕಣಕ್ಕೆ ಇಳಿಸಿ ಮೀಸೆಯಡಿ ನಗುತ್ತಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

   ಈ ಬಾರಿ ಕಳಂಕಿತರಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲವಂತೆ, ಯಡಿಯೂರಪ್ಪ ಬೆಂಬಲಿಗರ ಕೈ ಕಟ್ಟಿ ಹಾಕಲು ಚಾಣಾಕ್ಷ ತಂತ್ರ ಮಾಡಿದೆ ಬಿಜೆಪಿ ಎಂದೆಲ್ಲ ಪುಕಾರು ಮಾಡಲಾಯಿತು. ಆದರೆ ಅಂಥದ್ದೇನೂ ಆದಂತೆ ಕಾಣುವುದಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ತಮ್ಮ ಪಾಲಿನ ಆಟವನ್ನು ಶ್ರದ್ಧೆಯಿಂದ ಆಡಿದ್ದಾರೆ. ಪಿಗ್ಗಿ ಬಿದ್ದವರು ಮಾತ್ರ ಬಿಜೆಪಿಗೇ ನಿಷ್ಠರಾಗಿದ್ದವರು.

   ಶಿವಮೊಗ್ಗದಲ್ಲಿ ಯಡಿಯೂರಪ್ಪ ಗಪ್ ಚುಪ್ ಆಗಿಬಿಟ್ಟರೆ ಈಶು ವಿಲವಿಲ!

   ಇನ್ನೂ ತಮಾಷೆ ಏನೆಂದರೆ, ಸಂಸದರಾಗಿರುವ ಯಡಿಯೂರಪ್ಪ ಅವರೊಬ್ಬರಿಗೆ ಮಾತ್ರ ಈ ಸಲದ ವಿಧಾನಸಭೆ ಟಿಕೆಟ್ ಅಂತ ಘೋಷಿಸಲಾಗಿತ್ತು. ಅದಕ್ಕೆ ಶ್ರೀರಾಮುಲು ಹೆಸರು ಸೇರ್ಪಡೆಯಾಯಿತು. ಮೈಸೂರಿನ ವರುಣಾ ಕ್ಷೇತ್ರದಲ್ಲಿ ಬಿಎಸ್ ವೈ ಮಗ ವಿಜಯೇಂದ್ರ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಇನ್ನೇನು ಶೋಭಾ ಕರಂದ್ಲಾಜೆ ಅವರಿಗೆ ಯಶವಂತಪುರ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿಬಿಟ್ಟರೆ ಅಲ್ಲಿಗೆ ಯಡಿಯೂರಪ್ಪ ಅವರ 'ಮಿಷನ್ ಬಿಜೆಪಿ' ಸಂಪೂರ್ಣ ಆಗಿಬಿಡುತ್ತದೆ.

   ಇನ್ನು ಅನಂತಕುಮಾರ್ ಹೆಗಡೆಯೇನೋ ಕುಮಟಾ ಟಿಕೆಟ್ ಕೇಳಿದ್ದಾರಂತೆ. ವರಿಷ್ಠರು ಏನು ಹೇಳಿದ್ದಾರೆ ಹಾಗೆ ಮಾಡುತ್ತೀನಿ ಎನ್ನುತ್ತಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ಘೋಷಿಸಿದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಕರ್ನಾಟಕ ರಣಾಂಗಣದಲ್ಲಿ ಯಾವ ರೀತಿಯಲ್ಲೂ ಬಿಜೆಪಿಯ ದೆಹಲಿ ಹುಕುಂಗಳು ಪಾಲನೆಯಾಗಿಲ್ಲ. ಹಾಗೂ ಪಾಲನೆಯಾಗಲ್ಲ.

   ಜ್ಯೋತಿಗಣೇಶ್, ಮಾಧುಸ್ವಾಮಿ, ಮಸಾಲೆ ಜಯರಾಂಗೆ ಟಿಕೆಟ್

   ಜ್ಯೋತಿಗಣೇಶ್, ಮಾಧುಸ್ವಾಮಿ, ಮಸಾಲೆ ಜಯರಾಂಗೆ ಟಿಕೆಟ್

   ಯಡಿಯೂರಪ್ಪ ಅವರ ನಿಷ್ಠರಾದ ತುಮಕೂರು ನಗರ ಕ್ಷೇತ್ರದ ಜಿ.ಬಿ.ಜ್ಯೋತಿಗಣೇಶ್, ತುರುವೇಕೆರೆಯ ಮಸಾಲೆ ಜಯರಾಂ, ಚಿಕ್ಕನಾಯಕನಹಳ್ಳಿ ಜೆ.ಸಿ.ಮಾಧುಸ್ವಾಮಿ ಹೀಗೆ ಕೆಜೆಪಿಯಲ್ಲಿದ್ದು, ಇದೀಗ ಬಿಜೆಪಿಗೆ ಬಂದವರಿಗೆ ಟಿಕೆಟ್ ನೀಡಿದ್ದು, ತುಮಕೂರು ಜಿಲ್ಲೆಯಲ್ಲಿ ಭಾರೀ ಬಂಡಾಯಕ್ಕೆ ಕಾರಣವಾಗಿದೆ. ಮಾಜಿ ಸಚಿವ, ಬಿಜೆಪಿಯ ನಿಷ್ಠ ಕಾರ್ಯಕರ್ತರಾದ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ತಪ್ಪಿದ್ದು, ಅವರೀಗ ಮೌನಕ್ಕೆ ಶರಣಾಗಿದ್ದಾರೆ. ಆದರೆ ಕಾರ್ಯಕರ್ತರ ಸಿಟ್ಟು ಕುದಿಯುತ್ತಿದೆ. ಚಿಕ್ಕನಾಯಕನಹಳ್ಳಿ, ತುರುವೇಕೆರೆ ಎರಡೂ ಕಡೆಯೂ ಇದೇ ಪರಿಸ್ಥಿತಿ ಆಗಿದೆ. ತಿಪಟೂರಿನಲ್ಲಿ ಲೋಕೇಶ್ವರ್ ಜೆಡಿಎಸ್ ಗೆ ಹೋಗದಿದ್ದರೆ ಬಿ.ಸಿ.ನಾಗೇಶ್ ಗತಿ ಏನಾಗುತ್ತಿತ್ತೋ?

   ಕಟ್ಟಾ, ಕೃಷ್ಣಯ್ಯ ಶೆಟ್ಟಿಗೂ ಟಿಕೆಟ್

   ಕಟ್ಟಾ, ಕೃಷ್ಣಯ್ಯ ಶೆಟ್ಟಿಗೂ ಟಿಕೆಟ್

   ಇನ್ನು ಕಳಂಕಿತರಿಗೆ ಟಿಕೆಟ್ ನೀಡುವುದಿಲ್ಲ ಎಂದು ಆರಂಭದಿಂದಲೂ ಗುಲ್ಲೆದ್ದಿತ್ತು. ಹೊನ್ನಾಳಿಯ ರೇಣುಕಾಚಾರ್ಯ, ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವದಂತಿ ತೇಲಿಬಿಡಲಾಯಿತು. ಆದರೆ ಇಬ್ಬರಿಗೂ ಬಿಜೆಪಿ ಟಿಕೆಟ್ ಸಿಕ್ಕು, ಮೂಲ ಬಿಜೆಪಿಗರು ಕಣ್ಣೀರು ಹಾಕಿದ್ದಾರೆ. ಮಾಲೂರಿನಲ್ಲಿ ಕೃಷ್ಣಯ್ಯ ಶೆಟ್ಟಿ, ಶಿವಾಜಿನಗರದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಣದಲ್ಲಿ ಇದ್ದು, ರಣೋತ್ಸಾಹದಲ್ಲಿ ಇದ್ದಾರೆ. ಅಲ್ಲಿಗೆ ಬಿಜೆಪಿಗೆ ಗೆಲುವು ಮಾತ್ರ ಮುಖ್ಯ, ಪಕ್ಷದ ಬಗ್ಗೆ- ನಿಷ್ಠರ ಬಗ್ಗೆ ಯಾವುದೇ ಕಾಳಜಿ ಇಲ್ಲವೇನೋ ಎಂಬ ಅನುಮಾನ ಮೂಡುವುದು ಸಹಜ.

   ಈಶ್ವರಪ್ಪ ಅಲ್ಲದೇ ಬೇರೆ ಯಾರಿದ್ದರೂ ಕಷ್ಟವಿತ್ತು

   ಈಶ್ವರಪ್ಪ ಅಲ್ಲದೇ ಬೇರೆ ಯಾರಿದ್ದರೂ ಕಷ್ಟವಿತ್ತು

   ಯಡಿಯೂರಪ್ಪ ಪಟ್ಟು ಹಿಡಿದು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದಂಥ ಸೀಟು ಸಹ ಇದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ರುದ್ರೇಗೌಡರಿಗೆ ಪಕ್ಷದ ಟಿಕೆಟ್ ಕೊಡಿಸಲು ಅವರಿಗೆ ಸಾಧ್ಯವಾಗಿಲ್ಲ. ಒಂದು ವೇಳೆ ಅಲ್ಲಿ ಈಶ್ವರಪ್ಪ ಅಲ್ಲದೇ ಮತ್ತ್ಯಾರೇ ಇದ್ದಿದ್ದರೂ ರುದ್ರೇಗೌಡರೇ ಸ್ಪರ್ಧೆಯಲ್ಲಿ ಇರುತ್ತಿದ್ದರು. ಇದೀಗ ಈಶ್ವರಪ್ಪ ಅವರ ಪರ ಯಡಿಯೂರಪ್ಪ ಪ್ರಚಾರ ನಡೆಸದಿದ್ದರೆ, ತಮ್ಮ ಆಪ್ತ ವಲಯದಲ್ಲಿ ಈಶ್ವರಪ್ಪ ಗೆಲುವು ತಮಗೆ ಇಷ್ಟವಿಲ್ಲ ಎಂಬ ಇಶಾರೆ ರವಾನಿಸಿದರೆ ಅಲ್ಲಿಗೆ ಮುಗಿಯಿತು. ಇನ್ನು ಮೈಸೂರಿನ ನಂಜನಗೂಡು ಕ್ಷೇತ್ರದಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಗೆ ಬಿಜೆಪಿ ಟಿಕೆಟ್ ಕೊಡಲಾಗಿದ್ದು, ಮೈಸೂರಿನಲ್ಲಿ ಬಂಡಾಯ ತಾಂಡವ ಆಡುತ್ತಿದೆ. ಈ ಕ್ಷೇತ್ರದಲ್ಲೂ ಯಥಾಪ್ರಕಾರ ಯಡಿಯೂರಪ್ಪನವರ ಮಾತೇ ನಡೆದಿದೆ.

   ಬಿಜೆಪಿ ಹೈಕಮಾಂಡ್ ಎಂಬ ಬೆದರುಬೊಂಬೆ

   ಬಿಜೆಪಿ ಹೈಕಮಾಂಡ್ ಎಂಬ ಬೆದರುಬೊಂಬೆ

   ಕರ್ನಾಟಕ ಬಿಜೆಪಿಯೊಳಗೆ ಯಾವುದೇ ಬಂಡಾಯ ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಎಂಬ ಬೆದರುಬೊಂಬೆಯನ್ನು ಮುಂದಿಟ್ಟು, ಕಾರ್ಯಕರ್ತರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿರುವುದು ಬಿಜೆಪಿಯ ಎರಡು ಪಟ್ಟಿಯಲ್ಲೇ ಬಯಲಾಗಿದೆ. ಗೆಲ್ಲುವ ಸಲುವಾಗಿ ಯಾರಾದರೂ, ಯಾವ ಪಕ್ಷದವರಾದರೂ ಸರಿ ಎಂಬ ಬಿಜೆಪಿ ನೀತಿಯು ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಲಿದೆ. ಚಾಣಕ್ಯ, ಚಂದ್ರಗುಪ್ತ ಎಂದೆಲ್ಲ ಬಿಜೆಪಿ ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಮೆರೆಸುವವರಿಗೆ ತಾವು ಕುಳಿತ ಹೆಗಲು ಹಾಗೂ ನಿಷ್ಠಾವಂತ ಕಾರ್ಯಕರ್ತರ ಮುಖ ನೆನಪಾಗಬೇಕಿತ್ತು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Karnataka Assembly Elections 2018: BJP state president BS Yeddyurappa again proved that, how powerful he is? He succeeded in distribute ticket to loyalists. Except KS Eshwarappa like candidates many party loyalists could not get ticket.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more