ರಮೇಶ್ ಜಾರಕಿಹೊಳಿಯಿಂದ ಬಿಜೆಪಿಗೆ ಡ್ಯಾಮೇಜ್: ಕೇಸರಿ ನಾಯಕರಿಗೆ ತಲೆನೋವಾದ ವಿವಾದಗಳ ಸರದಾರ- ಇನ್‌ಸೈಡ್ ಸ್ಟೋರಿ
ಬೆಳಗಾವಿ, ಮಾರ್ಚ್ 27: ಕರ್ನಾಟಕ ವಿಧಾನಸಭೆ ಚುಣಾವಣೆಗೆ ( Karnataka Assembly Elections 2023 ) ಕೆಲ ದಿನಗಳು ಬಾಕಿ ಇವೆ. ಆಡಳಿತಾರೂಢ ಬಿಜೆಪಿ ( BJP ), ವಿರೋಧ ಪಕ್ಷ ಕಾಂಗ್ರೆಸ್ ( Congress ) ಹಾಗೂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ( JDS ) ಪಕ್ಷಗಳು ಪೈಪೋಟಿ ನಡೆಸುತ್ತಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷವು ( AAP ) ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಾಯಕರಲ್ಲಿ ಗೋಕಾಕ ಶಾಸಕ ಹಾಗೂ ಮಾಜಿ ರಮೇಶ್ ಜಾರಕಿಹೊಳಿ ಪ್ರಮುಖರು. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಕಾರಣರಾದವರು. ಆಗಿನಿಂದಲೂ ರಮೇಶ್ ಜಾರಕಿಹೊಳಿ ರಾಜ್ಯ ರಾಜಕಾರಣದ ವಿವಾದಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಸೆಕ್ಸ್ ಸಿಡಿ ಪ್ರಕರಣದಲ್ಲಿ ಜಾರಕಿಹೊಳಿ
ಕುಮಾರಸ್ವಾಮಿ ಸರ್ಕಾರ ಪತನಗೊಂಡ ನಂತರ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಆ ಸಮಯದಲ್ಲಿ ಯುವತಿಯೊಬ್ಬಳಿಗೆ ನೌಕರಿ ಕೊಡಿಸುವುದಾಗಿ ಅಮಿಷ ಒಡ್ಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಇದಕ್ಕೆ ಸಂಬಂಧಿಸಿದ ವಿಡಿಯೊ, ಆಡಿಯೊಗಳು ಟಿವಿ ಮಾಧ್ಯಮಗಳಲ್ಲಿ ಬಿಡುಗಡೆಗೊಂಡವು. ಈ ಪ್ರಕರಣವು ದೇಶದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಯಿತು. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಲಾಯಿತು.
ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಂಘರ್ಷ
ಸಿಡಿ ಹಗರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕೈವಾಡವಿದೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸುತ್ತಲೇ ಬಂದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಜಾರಕಿಹೊಳಿ ನಿಂದಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹತ್ತು ಕೋಟಿ ಹಣ ಹಂಚಿ ಹೆಬ್ಬಾಳ್ಕರ್ ಅವರನ್ನು ಸೋಲಿಸುವುದಾಗಿಯೂ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ಜಾರಕಿಹೊಳಿ ವಿರುದ್ಧ ಪ್ರಕರಣವೂ ದಾಖಲಾಗಿದೆ.

ಬಿಜೆಪಿ ರಾಜ್ಯಸಭೆ ಸದಸ್ಯರಿಗೆ ಬುದ್ದಿ ಇಲ್ಲವೆಂದ ಜಾರಕಿಹೊಳಿ
ಬಿಜೆಪಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿಗೆ ಬುದ್ದಿ ಇಲ್ಲವೆಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ರಮೇಶ್ ಜಾರಕಿಹೊಳಿ ಅವರಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ ಎಂದು ಕಡಾಡಿ ಅವರು ಕೇಂದ್ರ ನಾಯಕತ್ವ ಮುಂದೆ ಹೇಳಿಕೊಂಡಿದ್ದಾರೆ ಎಂಬ ವಿಚಾರವೂ ಈಗ ಗುಟ್ಟಾಗಿ ಉಳಿದಿಲ್ಲ. ಬೆಳಗಾವಿ ಜಿಲ್ಲೆಯವರೇ ಆದ ಕಡಾಡಿ ಅವರು ಆರ್‌ಎಸ್‌ಎಸ್ ಹಾಗೂ ಮೂಲ ಬಿಜೆಪಿ ನಾಯಕರಿಗೆ ಹತ್ತಿರವಾದವರು.
ಲಕ್ಷ್ಮಣ್ ಸವದಿ ವಿರುದ್ಧ ತೊಡೆತಟ್ಟಿದ ಜಾರಕಿಹೊಳಿ
2019ರಲ್ಲಿ ಅಥಣಿ ಶಾಸಕರಾಗಿದ್ದ ಮಹೇಶ್ ಕುಮಟಳ್ಳಿ ಅವರು ರಮೇಶ್ ಜಾರಕಿಹೊಳಿ ಜೊತೆ ಬಿಜೆಪಿಗೆ ಸೇರ್ಪಡೆಗೊಂಡರು. ಈ ಚುನಾವಣೆಯಲ್ಲಿ ಕುಮಟಳ್ಳಿ ಬಿಜೆಪಿ ಟಿಕೆಟ್ ನೀಡದೇ ಹೋದರೆ, ನಾನು ಗೋಕಾಕದಿಂದ ಸ್ಪರ್ಧಿಸಲ್ಲವೆಂದು ರಮೇಶ್ ಹಠ ಹಿಡಿದಿದ್ದಾರೆ. ಈಗ ಎಂಎಲ್‌ಸಿ ಆಗಿರುವ ಲಕ್ಷ್ಮಣ್ ಸವದಿ ಅವರ ವಿರುದ್ಧ ಸಾರ್ವಜನಿಕವಾಗಿಯೇ ತೊಡೆ ತಟ್ಟಿದ್ದಾರೆ.

ಅಥಣಿಯಿಂದ ಸ್ಪರ್ಧಿಸಲು ಲಕ್ಷ್ಮಣ್ ಸವದಿ ಸಿದ್ದತೆ ಮಾಡಿಕೊಂಡಿದ್ದಾರೆ. ಇದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಲಕ್ಷ್ಮಣ್ ಸವದಿ ಅವರು ಸಹ ಲಿಂಗಾಯತ ಸಮುದಾಯದ ಪ್ರಬಲ ನಾಯಕರು. ಹೀಗಾಗಿ, ಅವರನ್ನು ಬಿಜೆಪಿ ನಿರ್ಲಕ್ಷ್ಯ ಮಾಡುವುದಿಲ್ಲವೆಂಬುದು ಶತಸಿದ್ದ. ಒಟ್ಟಾರೆಯಾಗಿ, ರಮೇಶ್ ಜಾರಕಿಹೊಳಿ ಬಿಜೆಪಿಗೆ ಡ್ಯಾಮೇಜ್ ಮಾಡಲಿದ್ದಾರೆ ಎಂಬುದು ತಜ್ಞರ ಅಭಿಪ್ರಾಯ.












Click it and Unblock the Notifications