Priyanka Gandhi Visit to Bidar: ರಂಗೇರಿದ ಚುನಾವಣಾ ಅಖಾಡ; ಮೇ 3 ರಂದು ಬೀದರ್ ಗೆ ಪ್ರಿಯಾಂಕಾ ಗಾಂಧಿ
ಬೀದರ್, ಏಪ್ರಿಲ್27: ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಎಲ್ಲೆಲ್ಲೂ ಪ್ರಚಾರದ ಭರಾಟೆ ಜೋರಿದೆ. ಈ ನಡುವೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಹೆಚ್ಚಾಗಿದ್ದು, ಬಿಜೆಪಿಯ ಹೈಕಮಾಂಡ್ ನಾಯಕರಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಮುಂದಾಗಿದ್ದು, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮೂಲಕ ಪ್ರಚಾರವನ್ನ ನಡೆಸುತ್ತಿದೆ.
ಈಗಾಗಲೇ ಮೈಸೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರವನ್ನ ನಡೆಸಿರುವ ಪ್ರಿಯಾಂಕಾ ಗಾಂಧಿ. ಇದೀಗ ಮೇ 3 ರಂದು ಬೀದರ್ ಜಿಲ್ಲೆಯಲ್ಲಿ ಪ್ರಚಾರವನ್ನ ನಡೆಸಲು ಈಗಾಗಲೇ ಸಿದ್ದತೆ ನಡೆದಿದೆ ಎಂದು ಹೇಳಲಾಗಿದೆ.

ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಯುವ ನಾಯಕಿ ಪ್ರಿಯಾಂಕಾ ಗಾಂಧಿ ಮೇ 3ರಂದು ಬೀದರ್‌ಗೆ ಆಗಮಿಸಲಿದ್ದಾರೆ ಎಂದು ಹೇಳಿದ್ದು, ಪ್ರಿಯಾಂಕಾ ಗಾಂಧಿ ಅವರ ಕಾರ್ಯಕ್ರಮ ಬೀದರ್ ನಗರದಲ್ಲಿ ಮಾಡಬೇಕು ಅಥವಾ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮಾಡಬೇಕು ಎಂಬುದನ್ನು ಇನ್ನು ನಿರ್ಧರಿಸಿಲ್ಲ. ಇದರ ಬಗ್ಗೆ ಕೆಪಿಸಿಸಿ ನಿರ್ಣಯ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಚುನಾವಣಾ ಅಖಾಡ ಈಗಾಗಲೇ ಸಜ್ಜಾಗಿದ್ದು, ಬೀದರ್ ಗೆ ಪ್ರಿಯಾಂಕಾ ಗಾಂಧಿ ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರನ್ನು ಸೇರಿಸಲಾಗುವುದು ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.

ಇನ್ನೂ ಬೀದರ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯುವ ನಾಯಕಿ ಪ್ರಿಯಾಂಕಾ ಗಾಂಧಿಅವರೊಂದಿಗೆ ಕೆ.ಸಿ ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ ಎಂದು ಹೇಳಿದ ಅವರು, ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಡ ಆಹ್ವಾನಿಸಿದ್ದೇವೆ. ಅವರ ವೇಳಾಪಟ್ಟಿಇನ್ನು ಬಂದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಪ್ರೇಕ್ಷಕರಿಲ್ಲದ ನಾಟಕ ಕಂಪನಿಯಾಗಿದೆ ಎಂಬ ಹೇಳಿಕೆಗೆ ಉತ್ತರಿಸಿದ ಅವರು, ನಮ್ಮ ನೀರಿಕ್ಷೆಗೂ ಮೀರಿದ ಜನರು ನಮ್ಮ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಬಿಜೆಪಿಯವರು ಹಣ ಕೊಟ್ಟು ಜನರನ್ನು ಕರೆದುಕೊಂಡು ಬರುತಿದ್ದಾರೆ. ಈ ಮಾತು ಕಾಂಗ್ರೆಸ್ ಗೆ ಅನ್ವಯವಾಗಲ್ಲ, ಇದು ಬಿಜೆಪಿಗೆ ಅನ್ವಯವಾಗುತ್ತದೆ ಎಂದರು.
ಇನ್ನೂ ಭಾಲ್ಕಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯೋಗಿ ಬರಲಿ, ಜೋಗಿ ಬರಲಿ ನಮಗೆ ಏನೂ ಆಗಲ್ಲ ಎಂದ ಅವರು, 2008, 2018ರಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಬಂದಿದ್ದರು. ಹೀಗಾಗಿ ಈ ಸಲ ಕೂಡ ಭಾಲ್ಕಿ ಮತ್ತು ಹುಮನಾಬಾದ್ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಹೀಗಾಗಿ ಈ ಸಲವು ನಮ್ಮದೇ ಗೆಲವು. ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತಿದ್ದು, ಈ ಬಾರೀ ಬೀದರ್ ಜಿಲ್ಲೆಯ 6ಕ್ಕೆ 6 ಸ್ಥಾನಗಳು ಕಾಂಗ್ರೆಸ್ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಬಿಜೆಪಿ ಪಕ್ಷಕ್ಕೆ ಈಗಾಗಲೇ ಸೋಲಿನ ಭಯ ಶುರುವಾಗಿದೆ. ಈ ಭಯದಿಂದ ಕಂಗೆಟ್ಟು ಭಾಲ್ಕಿ ಮತ್ತು ಹುಮನಾಬಾದ ಕ್ಷೇತ್ರದಲ್ಲಿ ಗುಂಡಾವರ್ತನೆಗೆ ಇಳಿದಿದೆ. ಅಧಿಕಾರದ ಮದದಲ್ಲಿ ನಮ್ಮ ಪರವಾಗಿ ಇರುವ ಕಾಂಗ್ರೆಸ್ ಕಾರ್ಯಕರ್ತರನ್ನು ಹೆದರಿಸುತಿದ್ದಾರೆ ಎಂದು ಈಶ್ವರ್ ಖಂಡ್ರೆ ರೋಪಿಸಿದರು.
ಗೂಂಡಾ ಪಟ್ಟಿಯಲ್ಲಿರುವ ಅನೇಕ ಜನರನ್ನು ಪಟ್ಟಿಯಿಂದ ತೆಗೆದು ಹಾಕಿ ಅವರನ್ನು ಬಿಡುಗಡೆ ಮಾಡಿದೆ. ಇಂತಹವರಲ್ಲಿ ಸುಮಾರು 527 ಜನ ಸೇರಿದ್ದಾರೆ. ಹೀಗಾಗಿ ಚುನಾವಣೆ ಸಮಯದಲ್ಲಿ ಗೂಂಡಾ ರಾಜ್ಯದಲ್ಲಿ ಪರಿವರ್ತನೆ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು.












Click it and Unblock the Notifications