ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಿನಿಮಾ ಕಲಾವಿದರು: ಯಾರ ಹೆಸರಿದೆ ತಿಳಿಯಿರಿ
ಬೆಂಗಳೂರು, ಏಪ್ರಿಲ್. 19: ರಾಜಕೀಯ ಮತ್ತು ಸಿನಿಮಾ ರಂಗಕ್ಕೆ ಒಂದನ್ನೋಂದು ಬಿಟ್ಟಿರದ ಸಂಬಂಧವಿದೆ. ಯಾವುದೋ ಒಂದು ರೂಪದಲ್ಲಿಯಾದರೂ ಸಿನಿಮಾ ಕಲಾವಿದರು ರಾಜಕೀಯದತ್ತ ಮುಖ ಮಾಡಿದರೆ, ಸಿನಿಮಾಗಳಿಗೆ ಬಂಡವಾಳ ಹೂಡುವುದು, ಅತಿಥಿ ಪಾತ್ರ ಸೇರಿದಂತೆ ಹಲವು ಕಾರಣಕ್ಕೆ ರಾಜಕಾರಣಿಗಳು ಚಿತ್ರರಂಗದ ಭಾಗವಾಗಿರುತ್ತಾರೆ. ಅದೇ ಚುನಾವಣೆ ವೇಳೆ ಸಿನಿಮಾರಂಗದವರು ರಾಜಕೀಯಕ್ಕೆ ಧುಮುಕುವುದು ವಾಡಿಕೆ.
ಈಗಾಗಲೇ ಬಿಜೆಪಿ ಕನ್ನಡದ ಖ್ಯಾತ ನಟ ಸುದೀಪ್ ಅವರನ್ನು ತನ್ನತ್ತ ಸೆಳೆದುಕೊಂಡಿದೆ. ಮಾಮಾಗಾಗಿ ಪ್ರಚಾರ ನಡೆಸುತ್ತೇನೆ ಎಂದಿರುವ ಅವರು ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆ ವೇಳೆಯೂ ಹಾಜರಿದ್ದು, ತಮ್ಮ ಬೆಂಬಲ ಘೋಷಿಸಿದ್ದಾರೆ. ಈಗ ಕಾಂಗ್ರೆಸ್ ಸರದಿ . ಬುಧವಾರ ಕಾಂಗ್ರೆಸ್ ತನ್ನ 40 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸಿನಿರಂಗದವರು ಇದ್ದಾರೆ.

ನಟಿ ರಮ್ಯಾ, ನಟಿ, ಮಾಜಿ ಸಚಿವೆ ಉಮಾಶ್ರೀ, ನಿರ್ದೇಶಕ ಸಾಧುಕೋಕಿಲಾ ಮತ್ತು ಪಂಜಾಬಿ ನಟ ರಾಜ್ ಬಬ್ಬರ್ ಹೆಸರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿದೆ. ಇವರುಗಳ ಜೊತೆಗೆ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಮತ್ತು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ.
*ನಟಿ, ಮಾಜಿ ಸಚಿವೆ ಉಮಾಶ್ರೀ*
ನಟಿ, ಮಾಜಿ ಸಚಿವೆ ಉಮಾಶ್ರೀ ಅವರು ಬಾಗಲಕೋಟೆಯ ತೇರದಾಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಈ ಕ್ಷೇತ್ರದಿಂದ ಸಿದ್ದಪ್ಪ ಕೊಣ್ಣೂರು ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್ ನೀಡದಿದ್ದರೂ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿದೆ. 2018ರ ಕಳೆದ ಚುನಾವಣೆಯಲ್ಲಿ ತೇರದಾಳದಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಸಿದ್ದು ಸವದಿ ಜಯ ಗಳಿಸಿದ್ದರು. ಕಾಂಗ್ರೆಸ್‌ನ ಉಮಾಶ್ರೀ 20889 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ತೇರದಾಳ ಮತಕ್ಷೇತ್ರದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಎಂಬ ಕೂಗು ಈ ಬಾರಿ ಬಲವಾಗಿ ಕೇಳಿ ಬಂದಿತ್ತು. ಜೊತೆಗೆ ಉಮಾಶ್ರೀ ಅವರು ಬೆಂಗಳೂರಿನಲ್ಲಿ ಇರುತ್ತಾರೆ. ಸ್ಥಳೀಯವಾಗಿ ಕಾರ್ಯಕರ್ತರಿಗೆ ಸುಲಭವಾಗಿ ಸಿಗುವುದಿಲ್ಲ ಎಂಬ ಆರೋಪಗಳು ಇತ್ತು. ಹೀಗಾಗಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದು, ಚುನಾವಣಾ ಪ್ರಚಾರಕ್ಕೆ ಅವರನ್ನು ಬಳಸಿಕೊಳ್ಳಲಿದೆ.

*ನಟಿ, ಮಾಜಿ ಸಂಸದೆ ರಮ್ಯಾ*
ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೋಹಕ ತಾರೆ ರಮ್ಯಾ ಮತ್ತೆ ರಾಜಕೀಯಕ್ಕೆ ಬರುವ ಬಗ್ಗೆ ಮಾಹಿತಿ ನೀಡಿದೆ. ಭಾರತ್ ಜೋಡೋ ಯಾತ್ರೆಯ ವೇಳೆ ರಾಜಕೀಯವಾಗಿ ಕಾಣಿಸಿಕೊಂಡು ಮರೆಯಾಗಿದ್ದ ನಟಿ ರಮ್ಯಾ ಮತ್ತೆ ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಕಣಕ್ಕಿಳಿದರೇ ಅಲ್ಲಿ ರಮ್ಯಾ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆಗಳು ನಡೆಯುತ್ತಿವೆ.
* ನಿರ್ದೇಶಕ ಸಾಧುಕೋಕಿಲ*
ಸ್ಯಾಂಡಲ್ವುಡ್ ಖ್ಯಾತ ಸಂಗೀತ ನಿರ್ದೇಶಕ, ಹಾಸ್ಯ ನಟ ಸಾಧು ಕೋಕಿಲ ಕಳೆದ ತಿಂಗಳು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆಯು ಹಲವು ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಜೊತೆಗೆ ಕಾಣಿಸಿಕೊಂಡಿದ್ದ ಅವರು ಬಳಿಕ ಅಧಿಕೃತವಾಗಿ ಪಕ್ಷ ಸೇರಿ ಈಗ ಸ್ಟಾರ್ ಪ್ರಚಾರಕರು ಆಗಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಾಧು ಕೋಕಿಲ ಅವರನ್ನು ಕೆಪಿಸಿಸಿಯ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
*ಪಂಜಾಬಿ ನಟ ರಾಜ್ ಬಬ್ಬರ್*
ಹಿಂದಿ ಮತ್ತು ಪಂಜಾಬಿ ಚಲನಚಿತ್ರಗಳಲ್ಲಿ ನಟಿಸುವ ನಟ ರಾಜ್ ಬಬ್ಬರ್ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್ ನಾಯಕರಾಗಿತುವ ಇವರು, ಮೂರು ಬಾರಿ ಲೋಕಸಭೆಯ ಸದಸ್ಯರಾಗಿದ್ದಾರೆ. ಎರಡು ಬಾರಿ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿದ್ದಾರೆ . ಜೊತೆಗೆ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು.
ಬುಧವಾರ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಟಾರ್ ಪ್ರಚಾರಕ ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಸೇರಿದಂತೆ ಒಟ್ಟು ನಲವತ್ತು ಮಂದಿ ಪಟ್ಟಿಯಲ್ಲಿದ್ದಾರೆ.












Click it and Unblock the Notifications