Sonia Gandhi: ರಾಹುಲ್ ಗಾಂಧಿ ಯಾತ್ರೆಯಿಂದ ಬಿಜೆಪಿಗೆ ಭಯವಾಗಿದೆ; ಹೀಗಾಗಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ: ಸೋನಿಯಾ ಗಾಂಧಿ
ಹುಬ್ಬಳ್ಳಿ,ಮೇ7: ರಾಹುಲ್ ಗಾಂಧಿ ಯಾತ್ರೆಯಿಂದ ಬಿಜೆಪಿಗೆ ಎಷ್ಟು ಭಯವಾಗಿದೆ ಎಂದರೆ, ಅವರು ಎಲ್ಲ ರೀತಿಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇಂದು ಅಧಿಕಾರದಲ್ಲಿರುವವರು ಜನರ ರಕ್ಷಣೆ ಮಾಡುವ ಬದಲು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದರು.
ಕೊನೆಯ ಹಂತದಲ್ಲಿ ಮತಭೇಟೆಗೆ ಇಳಿದಿರುವ ಸೋನಿಯಾ ಗಾಂಧಿ ಅವರು ಹುಬ್ಭಳ್ಳಿಯಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಮಾತನಾಡಿ, ಸಮಾಜದಲ್ಲಿ ದ್ವೇಷ ಪಸರಿಸುತ್ತಿರುವವರ ವಿರುದ್ಧ ಹೋರಾಡಲು ಭಾರತ ಜೋಡೋ ಯಾತ್ರೆ ಮಾಡಲಾಯಿತು. ಬಿಜೆಪಿಯ ಈ ದ್ವೋಷ ರಾಜಕೀಯದಿಂದ ದೇಶವನ್ನು ಮುಕ್ತಿಗೊಳಿಸುವ ಹೊರತಾಗಿ ಕರ್ನಾಟಕ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಲಕ್ಷಾಂತರ ಜನ ರಾಹುಲ್ ಗಾಂಧಿ ಅವರ ಜತೆ 4 ಸಾವಿರ ಕಿ.ಮೀ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ ಎಂದರು.

2018ರಲ್ಲಿ ನೀವು ಬಿಜೆಪಿಗೆ ಅಧಿಕಾರ ನೀಡಲಿಲ್ಲ. ಆದರೂ ಇವರು ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದಿದ್ದರು. ನಂತರ ಅವರ 40% ಸರ್ಕಾರ ನಿಮ್ಮನ್ನು ಲೂಟಿ ಮಾಡಿದೆ. ಬಿಜೆಪಿ ನಾಯಕರು ಎಷ್ಟು ಅಹಂಕಾರದಲ್ಲಿದ್ದಾರೆ ಎಂದರೆ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ಯಾವುದೇ ಪತ್ರಕ್ಕೂ ಉತ್ತರ ನೀಡುತ್ತಿಲ್ಲ. ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನಿಯಂತ್ರಿಸುತ್ತಿದ್ದಾರೆ.
ಯಾವುದೇ ಸರ್ಕಾರದಲ್ಲಿ ಇಂತಹ ದುರಾಡಳಿತವನ್ನು ನೀವು ಎಂದಾದರೂ ನೋಡಿದ್ದೀರಾ? ಪ್ರಜಾತಂತ್ರ ವ್ಯವಸ್ಥೆ ನಡೆಯುವುದು ಹೀಗೆಯೇ? ಅವರು ಚುನಾವಣೆಯಲ್ಲಿ ಗೆಲ್ಲದಿದ್ದರೆ ಕರ್ನಾಟಕ ರಾಜ್ಯಕ್ಕೆ ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ ಎಂದು ಬಹಿರಂಗವಾಗಿ ಧಮಕಿ ಹಾಕುತ್ತಿದ್ದಾರೆ. ಬಿಜೆಪಿ ಸೋತರೆ ರಾಜ್ಯದಲ್ಲಿ ಗಲಭೆಯಾಗುತ್ತದೆ ಎಂದು ಹೇಳುತ್ತಾರೆ ಎಂದರು.
ನಿಮ್ಮ ಪರವಾಗಿ ನಾನು ಅವರಿಗೆ ಒಂದು ಮಾತು ಹೇಳಬಯಸುತ್ತೇನೆ. ನೀವು ಕರ್ನಾಟಕ ರಾಜ್ಯದ ಜನರನ್ನು ಇಷ್ಟು ದಡ್ಡರೆಂದು ಭಾವಿಸಬೇಡಿ. ಕರ್ನಾಟಕದ ಜನ ತಮ್ಮ ಪರಿಶ್ರಮ ಹಾಗೂ ಸಂಕಲ್ಪದ ಮೇಲೆ ಭರವಸೆ ಇಟ್ಟಿದ್ದಾರೆ ಹೊರತು ಬೇರೆ ಯಾರ ಆಶೀರ್ವಾದದಿಂದಲೂ ಅಲ್ಲ. ಕರ್ನಾಟಕದ ಜನ ದುರಾಸೆ ಇರುವವರಲ್ಲ, ನಿಮ್ಮ ಬೆದರಿಕೆಗಳಿಗೆ ಹೆದರುವವರೂ ಅಲ್ಲ. ಕರ್ನಾಟಕದ ಜನ ಮೇ 10 ರಂದು ನಿಮಗೆ ಈ ಮಣ್ಣಿನ ಶಕ್ತಿ ಏನು ಎಂದು ತಿಳಿಸಲಿದ್ದಾರೆ.

ಇಂದು ಲಕ್ಷಾಂತರ ರೈತರು ಹಾಗೂ ಹಾಲು ಉತ್ಪಾದಕರನ್ನು ಕತ್ತಲೆಗೆ ದೂಡಲು ನಂದಿನಿಯಂತಹ ಅತ್ಯುತ್ತಮ ಸಂಸ್ಥೆಯನ್ನು ನಾಶ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ. ಇದು ರಾಜ್ಯದಲ್ಲಿ ಯಶಸ್ವಿಯಾಗುವುದಿಲ್ಲ. ಜನರ ಆಶೀರ್ವಾದದಿಂದ ನಾಯಕರಾಗುತ್ತಾರೆಯೇ ಹೊರತು, ಯಾವುದೇ ನಾಯಕರ ಆಶೀರ್ವಾದದಿಂದ ಈ ರಾಜ್ಯದ ಜನರ ಭವಿಷ್ಯ ನಿರ್ಧಾರವಾಗುವುದಿಲ್ಲ ಎಂದು ಈ ಸಮಯದಲ್ಲಿ ಬಿಜೆಪಿಯವರಿಗೆ ಹೇಳಬಯಸುತ್ತೇನೆ. ಜನರು ತಮ್ಮ ಭವಿಷ್ಯವನ್ನು ತಾವೇ ಬರೆದುಕೊಳ್ಳುತ್ತಾರೆ.
ಐದು ವರ್ಷಗಳ ಹಿಂದೆ ಇದ್ದ ಸರ್ಕಾರ ತನ್ನ ಮಾತಿಗೆ ಬದ್ಧವಾಗಿ ಕೊಟ್ಟ ಬಹುತೇಕ ಎಲ್ಲಾ ಭರವಸೆ ಈಡೇರಿಸಿದೆ. ಇಂದು ರಾಜಸ್ಥಾನ, ಛತ್ತೀಸಿ ಗಡ, ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ ಭರವಸೆಗಳನ್ನು ಈಡೇರಿಸಿಕೊಂಡು ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳಲಿದೆ. ಗೃಹಲಕ್ಷ್ಮಿ, ಯುವವನಿಧಿ, ಅನ್ನಭಾಗ್ಯ, ಗೃಹಜ್ಯೋತಿ, ಉಚಿತ ಪಯಣ ಯೋಜನೆಗಳನ್ನು ಜಾರಿ ಮಾಡಲಿದೆ.
ರಾಜ್ಯದ ಜನ ಕರ್ನಾಟಕ ರಾಜ್ಯವನ್ನು ಬಿಜೆಪಿಯ ಲೂಟಿಯಿಂದ ರಕ್ಷಿಸಲು ಮೇ 10ರಂದು ನಿಮ್ಮ ಅಮೂಲ್ಯವಾದ ಮತಗಳನ್ನು ಕಾಂಗ್ರೆಸ್ ನ ಪ್ರತಿ ಅಭ್ಯರ್ಥಿಗಳಿಗೆ ನೀಡಿ ಜಯಶೀಲರನ್ನಾಗಿ ಮಾಡಬೇಕು. ಆಮೂಲಕ ನಿಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು.
ಕಾಂಗ್ರೆಸ್ ಇಸಿಹಾಸದಲ್ಲಿ ಕರ್ನಾಟಕ ರಾಜ್ಯಕ್ಕೆ ವಿಶೇಷ ಸ್ಥಾನವಿದೆ. ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರ. ಇಂದಿರಾ ಗಾಂಧಿ ಅವರು ಕೇಂದ್ರದ ಜನ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡಿದ್ದರು. ಆಗ ಚಿಕ್ಕಮಗಳೂರಿನ ಜನ ಅವರ ಬೆಂಬಲಕ್ಕೆ ನಿಂತಿದ್ದರು. 25 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಬಳ್ಳಾರಿಯ ಜನ ನನ್ನನ್ನು ಬೆಂಬಲಿಸಿದ್ದರು. ಈ ಕತ್ತಲ ಸಮಯದಲ್ಲಿ ನಾವು ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಹೇಳಿದರು.












Click it and Unblock the Notifications