ಮ್ಯಾಜಿಕ್ ನಂಬರ್ ದಾಟಿದ ಕಾಂಗ್ರೆಸ್: ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮ
ಕರ್ನಾಟಕ ವಿಧಾನಸಭಾ ಚುನಾವಣೆ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದ್ದು, ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಪಡೆದುಕೊಂಡಿದೆ. ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಳ್ಳುವ ಮೂಲಕ ಮ್ಯಾಜಿಕ್ ನಂಬರ್ ದಾಟಿದ್ದು, ಸರ್ಕಾರ ರಚನೆಯ ಕಸರತ್ತು ಆರಂಭವಾಗಿದೆ.
ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಕೇವಲ 73 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ, ಜೆಡಿಎಸ್ 30 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ. ಕರ್ನಾಟಕ 224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು 113 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ.

ಹಲವು ಕ್ಷೇತ್ರಗಳಲ್ಲಿ ರೋಚಕ ಹಣಾಹಣಿ ನಡೆಯುತ್ತಿದ್ದು ಕೆಲವು ಸ್ಥಾನಗಳು ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದೆ, ಆದರೆ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಸ್ಪಷ್ಟವಾಗಿದೆ. ಫಲಿತಾಂಶ ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಈಗಾಗಲೇ ಬೆಂಗಳೂರಿನ ಶಾಂಘ್ರಿಲಾ ಹೋಟೆಲ್‌ನತ್ತ ಮುಖ ಮಾಡಿದ್ದು ಸರ್ಕಾರ ರಚನೆಯ ಕಸರತ್ತು ಆರಂಭಿಸಲಿದ್ದಾರೆ.
ಇನ್ನು ಆಪರೇಷನ್ ಕಮಲದ ಭೀತಿ ಕೂಡ ಎದುರಾಗಿದ್ದು, ಎಲ್ಲಾ ಶಾಸಕರನ್ನು ಹೊರ ರಾಜ್ಯಕ್ಕೆ ಶಿಫ್ಟ್ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಹೈದರಾಬಾದ್, ರಾಜಸ್ಥಾನದಲ್ಲಿ ಈಗಾಗಲೇ ಐಷಾರಾಮಿ ಹೋಟೆಲ್‌ಗಳನ್ನು ಕಾಯ್ದಿರಸಲಾಗಿದ್ದು, ಇಂದು ರಾತ್ರಿಯೇ ಎಲ್ಲಾ ಶಾಸಕರಿಗೆ ಬೆಂಗಳೂರಿಗೆ ಬರಲು ಸೂಚನೆ ನೀಡಲಾಗಿದೆ.












Click it and Unblock the Notifications