Karnataka Election on May 10: ಚುನಾವಣೆ ಸಿದ್ಧತಾ ಅಧಿಕಾರಿಗಳಿಗೆ ಮಳೆ ಸವಾಲು
ಬೆಂಗಳೂರು, ಮೇ 06: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಗೆ ಮೂರೇ ದಿನ ಬಾಕಿ ಇದೆ. ಮೇ 10ರಂದು ಬುಧವಾರ ನಡೆಯಲಿರುವ ಮತದಾನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವ ರಾಜ್ಯ ಚುನಾವಣೆ ಆಯೋಗಕ್ಕೆ ಇದೀಗ ಮಳೆ ಸಮಸ್ಯೆ ತಂದೊಡ್ಡುವ ಭೀತಿ ಎದುರಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಬಳಿಕ ಎಚ್ಚೆತ್ತುಕೊಂಡಿರುವ ಚುನಾವಣಾಧಿಕಾರಿಗಳು ವ್ಯಾಪಕ ಮಳೆಯಿಂದ ರಕ್ಷಿಸಿಕೊಳ್ಳಲು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯದ ಎಲ್ಲ ಭಾಗದ ವಿವಿಧ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಧಾರಕಾರ ಮಳೆ ಆಗುತ್ತಿದೆ. ಇದು ಮುಂದಿನ ಐದಾರು ದಿನ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಖಚಿತ ಪಡಿಸಿದೆ. ಈ ಮಳೆ ನಡುವೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳವ ಸವಾಲು ಚುನಾವಣಾಧಿಕಾರಿಗಳ ಹೆಗಲೇರಿದೆ. ಈ ಕುರಿತು ವಿಜಯ ಕರ್ನಾಟಕ ವರದಿ ಮಾಡಿದೆ.

ಮತದಾನ ದಿನ ಮತಗಟ್ಟೆಗಳಿಗೆ ಚುನಾವಣೆ ಅಧಿಕಾರಿಗಳು-ಸಿಬ್ಬಂದಿ ಕಳುಹಿಸಬೇಕು. ಅಲ್ಲದೇ ವಿವಿ ಪ್ಯಾಟ್, ಇವಿಎಂ ಯಂತ್ರಗಳು ಸೇರಿದಂತೆ ಅಗತ್ಯ ಸಲಕರಣೆಗಳನ್ನು ಮಳೆಗೆ ಒದ್ದೆಯಾಗದಂತೆ ಸುರಕ್ಷಿತವಾಗಿ ಆಯಾಯ ಮತಗಟ್ಟೆಗಳಿಗೆ ತಲುಪಿಸಬೇಕು. ಮತಗಟ್ಟೆ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆಗಳಿಗೆ ಚುನಾವಣಾ ಆಯೋಗ ತಯಾರಿಸಿ, ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ. ಈ ಮೊದಲು ನಮಗೆ ಮಳೆ ಕುರಿತು ಗಮನ ಹರಿಸಿರಲಿಲ್ಲ ಎಂದು ಆಯೋಗ ಅಧಿಕಾರಿಗಳು ತಿಳಿಸಿದರು.
ಮಳೆ ಭೀತ ಮಧ್ಯೆ ಅಗತ್ಯ ಸಿದ್ಧತೆಗೆ ಸಿದ್ಧವಾದ ಆಯೋಗ
ಇನ್ನೂ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, 'ಮೋಚಾ' ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದಲ್ಲಿ ಮುಂದಿನ ಐದು (ಮೇ 12) ದಿನಗಳವರೆಗೆ ಒಳಡನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳಲಿದೆ ಎಂದು ತಿಳಿಸಿದೆ. ಅಲ್ಲದೇ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಣೆ ಮಾಡಿದೆ. ಚುನಾವಣಾ ಸಲಕರಣೆಗಳಾದ ಇವಿಎಂಗಳ ಹಂಚಿಕೆ, ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ಸಾಗಿಸುವಾಗ ಮಳೆಯಿಂದ ಸಮಸ್ಯೆ ಎದುರಾಗುವ ಸಂಭವವಿದೆ ಎಂದು ಅವರು ಹೇಳಿದರು.

ಚುನಾವಣೆ ಸಿದ್ಧತೆಯಲ್ಲಿ ನಮಗೆ ಮಳೆ ಮುನ್ಸೂಚನೆ ಬಗ್ಗೆ, ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚನೆ ಮಾಡಿರಲಿಲ್ಲ. ಸಾಮಾನ್ಯವಾಗಿ ಬೇಸಿಗೆ ಅವಧಿ ಇದಾಗಿದ್ದರಿಂದ ಮಳೆಗಾಲದಲ್ಲಿ ಮಾಡಿಕೊಳ್ಳುವಂತಹ ಅಗತ್ಯ ಸಿದ್ಧತೆ ಮಾಡಿಕೊಂಡಿರಲಿಲ್ಲ. ಇವಿಎಂ ಸೇರಿದಂತೆ ಹಲವು ಉಪಕರಣಗಳ ಸಾಗಾಟಕ್ಕೆ ಸಮಸ್ಯೆ ಎದುರಾಗಹುದು. ಅದಕ್ಕೂ ಸಹ ಈಗ ಚಿಂತನೆ ಆರಂಭಿಸಿದ್ದು, ಮಳೆ, ಶೀತಗಾಳಿಗೆ ತಾಗದಂತೆ ಮತ್ತು ಮಳೆಯಿಂದ ಯಂತ್ರೋಪಕರಣಗಳಿಗೆ ಯಾವ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಿದ್ದೇವೆ. ಪ್ಲಾಸ್ಟಿಕ್ ಕವರ್‌ಗಳಿಂದ ಮುಚ್ಚಿ ಯಂತ್ರಗಳನ್ನು ಮತಗಟ್ಟೆಗಳಿಗೆ ಸಾಗಿಸಲಿದ್ದೇವೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ವಿವರಿಸಿದರು.
ರಾಜ್ಯ ಹವಾಮಾನ ಇಲಾಖೆ ಭಾನವಾರ ಬಿಡುಗಡೆ ಮಾಡಿದ ಮಳೆ ಮುನ್ಸೂಚನಾ ವರದಿಯಲ್ಲಿ ಮುಂದಿನ ಐದು ಎಲ್ಲ ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಮೇ 11 ಮತ್ತು 12ರಂದು ಅಧಿಕ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ವಿಜ್ಞಾನಿ ಮತ್ತು ಹವಾಮಾನ ತಜ್ಞ ಡಾ.ಪ್ರಸಾದ್ ತಿಳಿಸಿದ್ದಾರೆ.












Click it and Unblock the Notifications