ರಾಜ್ಯದಲ್ಲಿ ಕುರುಡು ಕಾಂಚಾಣದ ಕುಣಿತ: ಕಾಗವಾಡ ಚೆಕ್ ಪೋಸ್ಟ್‌ನಲ್ಲಿ 70 ಲಕ್ಷ ರೂ. ವಶ
ಬೆಳಗಾವಿ ಮಾರ್ಚ್ 30: ಕಾಗವಾಡ ಚೆಕ್ ಪೋಸ್ಟ್ ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 70 ಲಕ್ಷ ರೂ. ಹಣವನ್ನು ಬೆಳಗಾವಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ವೇಳೆ ಇಬ್ಬರನ್ನು ಬಂಧಿಸಲಾಗಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದ್ದು ಹಣ, ಹೆಂಡ, ಬೆಳ್ಳಿ, ಬಂಗಾರ ಎಲ್ಲೆಡೆ ತೆರೆ ಮರೆಯಲ್ಲಿ ಹರಿದಾಡುತ್ತಿವೆ. ರಾಜ್ಯದಲ್ಲಿ ಈಗಾಗಲೇ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಹಣ ತಪಾಸಣೆ ವೇಳೆ ವಶಪಡಿಸಲಾಗುತ್ತಿದೆ.

ಕಳೆದ ಕೆಲ ದಿನಗಳ ಹಿಂದೆ ಪಟ್ಟಣದ ಕಾಗವಾಡ-ಗಣೇಶವಾಡಿ ವೆಕ್‌ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9.390 ಕೆ.ಜಿ ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದರು. ಮಹಾರಾಷ್ಟ್ರದ ರೆಂದಾಳದಿಂದ ಅಥಣಿ ಕಡೆಗೆ ಹೊರಟಿದ್ದ ಕಾರನ್ನು ಈ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದಾಗ, ಬೆಳ್ಲೀಯ ಕಾಲ್ಗೆಜ್ಜೆ ಮತ್ತಿತರ ಆಭರಣ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ 15 ಲಕ್ಷ ನಗದು ವಶ
ಚುನಾವಣೆ ಸಮಯದಲ್ಲಿ ಹಲವು ಆಮಿಷಗಳನ್ನು ಒಡ್ಡಿ ಮತಯಾಚನೆ ಮಾಡುವುದು ರೂಢಿಯಾಗಿಬಿಟ್ಟಿದೆ. ಕಾನೂನು ಪ್ರಕಾರ ಇದು ತಪ್ಪಾಗಿದ್ದರೂ ತೆರೆಮರೆಯಲ್ಲಿ ಇದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗೆ ಇಂತಹ ಘಟನೆಗಳು ಎಲ್ಲೆಡೆ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಹುಬ್ಬಳ್ಳಿಯಲ್ಲಿ 15 ಲಕ್ಷ ನಗದು ವಶ ಪಡಿಸಿಕೊಳ್ಳಲಾಗಿದೆ. ಟಿಂಬರ್ ವ್ಯಾಪಾರಿಯೊಬ್ಬರು ತಮ್ಮ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಸುತ್ತಿದ್ದ 15 ಲಕ್ಷ ನಗದನ್ನು ನಗರದ ಕಾರವಾರ ರಸ್ತೆಯ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿ ಭಾನುವಾರ ವಶಪಡಿಸಿಕೊಂಡಿದ್ದಾರೆ.

ಅಂಕೋಲಾ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರನ್ನು ತಡೆದ ಸಿಬ್ಬಂದಿ, ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. 'ಮರದ ವ್ಯವಹಾರಕ್ಕೆ ಸಂಬಂಧಿಸಿದ ಹಣ' ಎಂದು ವ್ಯಾಪರಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ಬಂದು ವಿಚಾರಣೆ ನಡೆಸಲಿದ್ದಾರೆ' ಎಂದು ತಹಶೀಲ್ದಾರ್ ಆರ್. ಕೆ. ಪಾಟೀಲ್ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಇಸ್ತ್ರಿಪೆಟ್ಟಿಗೆ ವಶ
ಬಾಗಲಕೋಟೆಯಲ್ಲಿ ಇತ್ತೀಚೆಗೆ ಇಸ್ತ್ರಿಪೆಟ್ಟಿಗೆ ಹಾಗೂ 16 ಲಕ್ಷ ನಗದು ವಶ ಪಡಿಸಿಕೊಳ್ಳಾಗಿದೆ. ದಾಖಲೆಗಳಿಲ್ಲದೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6,798 ಇಸ್ತ್ರಿ ಪೆಟ್ಟಿಗೆ ಹಾಗೂ 16 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ನಗರದ ಹೊರವಲಯ ಮಹಾರುದ್ರಪ್ಪನನ ಹಳ್ಳದ ಬಳಿ ಭಾನುವಾರ ಲಾರಿ ತಡೆದು ಪರಿಶೀಲಿಸಿದಾಗ ಇಸ್ತ್ರಿ ಪೆಟ್ಟಿಗೆಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. 35 ಲಕ್ಷ ಮೌಲ್ಯ ಎಂದು ಅಂದಾಜಿಸಲಾಗಿದೆ. ಸೂಕ್ತ ದಾಖಲೆ ಹೊಂದಿರದ ಕಾರಣ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಹುನಗುಂದ ತಾಲ್ಲೂಕಿನ ಗುಡೂರು ಚೆಕ್ ಪೋಸ್ಟ್ನಲ್ಲಿ ದಾಖಲೆಯಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 16 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಯಲಬುರ್ಗಾದ ಸುನೀಲ್ ಉಪ್ಪಾರ, ಬನಗೌಡ ಎಂಬುವವರನ್ನು ಬಂಧಿಸಲಾಗಿದೆ.
ಚುನಾವಣೆ ದಿನಾಂಕ ಘೋಷಣೆ
ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13ರಂದು ಅಧಿಸೂಚನೆ, ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
ಈಗಾಗಲೇ 58 ಕೋಟಿ ವಶ
ಬೆಳಗಾವಿಯಲ್ಲಿ 70 ಲಕ್ಷ ಹಣ, ಕುಕ್ಕರ್, ಹಾಗೂ ಹೊಲಿಗೆ ಮಷೀನ್ ವಶಕ್ಕೆ ಪಡೆಯಲಾಗಿದೆ. ಇದೇ ರೀತಿ ರಾಜ್ಯದೆಲ್ಲೆಡೆ ಈಗಾಗಲೇ 58 ಕೋಟಿ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಈ ಬಾರಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಒಂದೇ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಿದವರ ಮೇಲೆ ಹೆಚ್ಚು ನಿಗಾ ಇಡಲಾಗುತ್ತಿದೆ.












Click it and Unblock the Notifications