PM Modi: ಬೆಂಗಳೂರು ರೋಡ್ ಶೋ ನಂತರ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ದಂಡಯಾತ್ರೆ
2023ರ ಕರ್ನಾಟಕ ವಿಧಾನಸಭೆ ಚುನಾವಣಾ ರಣಕಣ ರಂಗೇರಿದ್ದು, ಮತದಾನಕ್ಕೆ ನಾಲ್ಕೇ ದಿನಗಳು ಬಾಕಿ ಉಳಿದಿವೆ. ಇನ್ನು ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರಕ್ಕೆ ಎರಡು ದಿನಗಳಲ್ಲಿ ಕೊನೆಯಾಗಲಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಇಂದು(ಶನಿವಾರ, ಮೇ 6) ಬೆಂಗಳೂರು ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಧಾನಿಯಲ್ಲಿ 26 ಕಿಮೀ ಬೃಹತ್ ರೋಡ್ ಶೋನಲ್ಲಿ ಬಿಜೆಪಿ ಪರ ಮತಯಾಚನೆ ಮಾಡಿದರು. ಜೆಪಿ ನಗರದಿಂದ ಆರಂಭವಾದ ರೋಡ್ ಶೋ ಮಲ್ಲೇಶ್ವಂನ ಸ್ಯಾಂಕಿ ಟ್ಯಾಂಕಿ ಬಳಿ ಕೊನೆಗೊಳ್ಳಲಿದೆ.

ಇನ್ನು ಬೆಂಗಳೂರು ರೋಡ್ ಶೋ ನಂತರ ನರೇಂದ್ರ ಮೋದಿಯವರು ಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ಬಾದಾಮಿ ಹೊರವಲಯದಲ್ಲಿ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಒಟ್ಟು 7 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
2018ರ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಗೆದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇದೀಗ ಬಾದಾಮಿ ತೊರೆದು ತವರು ವರುಣಾದಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನು ಪ್ರಧಾನಿ ಮೋದಿ ಪ್ರಚಾರದಿಂದ ಬಿಜೆಪಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲಿ ಇನ್ನಷ್ಟು ಉತ್ಸಾಹ ತುಂಬಲಿದ್ದಾರೆ.
ಬೆಂಗಳೂರಿನಿಂದ ನೇರವಾಗಿ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ತಲುಪುವ ನರೇಂದ್ರ ಮೋದಿ, ಹುಬ್ಬಳ್ಳಿಯಿಂದ ಮಧ್ಯಾಹ್ನ 2.50ಕ್ಕೆ ಎಂಐ-17 ಮೂರು ಸೇನಾ ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ಆಗಮಿಸಲಿರುವ ಪ್ರಧಾನಿ ಮೋದಿಯವರನ್ನು 25 ಜನ ಬಿಜೆಪಿ ಪ್ರಮುಖರು ಸ್ವಾಗತಿಸಲಿದ್ದಾರೆ. 3 ಗಂಟೆಗೆ ಕಾರ್ಯಕ್ರಮದ ವೇದಿಕೆಯಲ್ಲಿ ಸುಮಾರು 2 ಲಕ್ಷ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

ಇನ್ನು ಈ ಸಮಾವೇಶಕ್ಕೆ ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಿಂದ 2 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು, 80 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಬಂದವರಿಗೆ ಕುಡಿಯುವ ನೀರು, ಸಕ್ಕರೆ ಕಾಯಿಲೆ ಇರುವವರಿಗೆ ಪೆಪ್ಪರ್‌ಮೆಂಟ್ ನೀಡಲಾಗುತ್ತದೆ. ಒಂದು ಸಾವಿರ ಕಾರ್ಯಕರ್ತರು ಸೇವಾಕಾರ್ಯ ಮಾಡಲಿದ್ದಾರೆ.
ಇನ್ನು ಶಾಖಂಬರಿ ಶಕ್ತಿಪೀಠ ಎಂದೇ ಹೆಸರಾದ ಬನಶಂಕರಿ ದೇವಿ ದೇವಸ್ಥಾನದ ಸಮೀಪದಲ್ಲೇ ಕಾರ್ಯಕ್ರಮವಿದ್ದು, ದೇವಸ್ಥಾನ ಟ್ರಸ್ಟ್ ಮಂಡಳಿ ಎರಡೂವರೆ ಇಂಚು ಎತ್ತರದ ಐದೂವರೆ ಇಂಚು ಅಗಲದ ಬನಶಂಕರಿ ಬೆಳ್ಳಿಮೂರ್ತಿಯನ್ನು ಬಿಜೆಪಿ ಮುಖಂಡರ ಮೂಲಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆ ನೀಡಲಿದ್ದಾರೆ. ಇದೇ ವೇಳೆ ಶಿವಯೋಗ ಮಂದಿರದ ರುದ್ರಾಕ್ಷಿಮಾಲೆಯನ್ನು ಮೋದಿಗೆ ಹಾಕಲಿದ್ದಾರೆ.
ಬಾದಾಮಿ ನಂತರ ಹಾವೇರಿ ಸಮಾವೇಶ
ಬಾದಾಮಿ ಸಮಾವೇಶದ ನಂತರ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ, ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಹಾವೇರಿಯಲ್ಲಿ ಸಂಜೆ 5 ಗಂಟೆಗೆ ಬೃಹತ್ ಸಮಾವೇಶ ನಿಗದಿಯಾಗಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications