KSRTC: ಮೇ 9, 10ರಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ
2023ರ ಕರ್ನಾಟಕ ವಿಧಾನಸಭೆ ಚುನಾವಣಾ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೇ 10ರಂದು ನಡೆಯುವ ಮತದಾನಕ್ಕೆ ನಾಲ್ಕೇ ದಿನಗಳು ಬಾಕಿ ಉಳಿದಿದ್ದು, ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಚುನಾವಣಾ ಆಯೋಗದಿಂದ ಎಲ್ಲ ತಯಾರಿಗಳು ನಡೆಯುತ್ತಿವೆ.
ಮತದಾನ ದಿನಕ್ಕೂ ಮುನ್ನ ಎಲ್ಲ ಬೂತ್‌ಗಳಿಗೆ ಚುನಾವಣಾ ಸಿಬ್ಬಂದಿ, ಪೊಲೀಸರು ಸೇರಿದಂತೆ ಇವಿಎಂ ಮಷಿನ್ ಮತ್ತು ವಿವಿ ಪ್ಯಾಟ್‌ಗಳನ್ನು ತಲುಪಿಸಲು ಎಂದಿನಂತೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. 2023ರ ಕರ್ನಾಟಕ ವಿಧಾನಭೆ ಚುನಾವಣೆ ಹಿನ್ನೆಲೆಯಲ್ಲಿ ಇದೇ ಮೇ 9 ಮತ್ತು ಮೇ 10ರಂದು ಕರ್ನಾಟಕ ಸಾರಿಗೆ ಬಸ್ (ಕೆಎಸ್‌ಆರ್‌ಟಿಸಿ) ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಮೇ 10ರಂದು ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾನ ನಡೆಯುವ ಹಿನ್ನೆಲೆ ಮೇ 9, 10ರಂದು ಕರ್ನಾಟಕ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆ ಆಯಾ ಜಿಲ್ಲಾಡಳಿತಗಳು ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರನ್ನು ಚುನಾವಣಾ ಕರ್ತವ್ಯಕ್ಕೆ ಆಯೋಜಿಸಲ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಲಾಗಿದೆ.
ಹೀಗಾಗಿ ಮೇ 9 ಮತ್ತು 10ರಂದು ರಾಜ್ಯದಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ಪ್ರಕಟಣೆ ಮೂಲಕ ಕೆಎಸ್‌ಆರ್‌ಟಿಸಿ ಮನವಿ ಮಾಡಿಕೊಂಡಿದೆ.

ಚುನಾವಣಾ ಕರ್ತವ್ಯಕ್ಕೆ ಎಷ್ಟು ಬಸ್‌ಗಳ ಬಳಕೆ?
ರಾಜ್ಯದಲ್ಲಿ ಒಟ್ಟು 8,100 ಕೆಎಸ್‌ಆರ್‌ಟಿಸಿ ಬಸ್ಗಳಿದ್ದು, ಈ ಪೈಕಿ 3,700 ಬಸ್ಗಳು ಕರ್ನಾಟಕ ವಿಧಾನಸಭೆ ಚುನಾವಣಾ ಕರ್ತವ್ಯಕ್ಕೆ ಬುಕ್ ಮಾಡಲಾಗಿದೆ.
ಆದ್ದರಿಂದ ಮೇ 9 ಮತ್ತು 10ರಂದು 4,400 ಕೆಎಸ್‌ಆರ್‌ಟಿಸಿ ಬಸ್ಗಳು ಮಾತ್ರ ಸಂಚಾರ ಮಾಡಲಿವೆ. ಈ ಹಿನ್ನೆಲೆಯಲ್ಲಿ ಮತದಾನ ಮಾಡಲು ಒಂದು ಊರಿನಿಂದ ಮತ್ತೊಂದು ಊರಿಗೆ ಅಥವಾ ನಗರ ಪ್ರದೇಶಗಳಿಂದ ಗ್ರಾಮಗಳಿಗೆ ಹೋಗಲು ಈ ಎರಡು ದಿನಗಳ ಕಾಲ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಲಭ್ಯವಿದ್ದಲ್ಲಿ ಸ್ವಂತ ವಾಹನ ಹಾಗೂ ಬಾಡಿಗೆ ಬಳಸಬಹುದು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಭಾಗವಾಗಿ 224 ಕ್ಷೇತ್ರಗಳಿಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಯಾವ ಪಕ್ಷ ನೂತನ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.












Click it and Unblock the Notifications