BJP Manifesto 2023: ಮೇ 1ರಂದು ಜೆಪಿ ನಡ್ಡಾರಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಏನೆಲ್ಲಾ ಭರವಸೆಗಳಿರಲಿವೆ?
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಆಡಳಿತರೂಢ ಬಿಜೆಪಿ ಪಕ್ಷ, ಮರಳಿ ಅಧಿಕಾರಕ್ಕೇರಲು ಭಾರೀ ಕಸರತ್ತು ನಡೆಸಿದೆ. ಇದರ ಭಾಗವಾಗಿ ಮತದಾರರನ್ನು ಸೆಳೆಯಲು ಸೋಮವಾರ, ಮೇ 1ರಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಲಿದೆ.
ಬೆಂಗಳೂರಿನ ವಸಂತ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಲಿದೆ.

ಕರುನಾಡ ಕುರುಕ್ಷೇತ್ರ ಗೆಲ್ಲಲು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ಜೆ.ಪಿ. ನಡ್ಡಾ ಸೇರಿದಂತೆ ರಾಜ್ಯ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.
ಆರೋಗ್ಯ ಸಚಿವ ಕೆ. ಸುಧಾಕರ್ ಅವರು ರಾಜ್ಯ ಬಿಜೆಪಿ ಪ್ರಣಾಳಿಕೆ ಅಧ್ಯಕ್ಷನಾಗಿದ್ದು, ಅವಚರ ನೇತೃತ್ವದಲ್ಲಿ ಪ್ರಣಾಳಿಕೆ ತಯಾರಿಸಲಾಗಿದೆ. ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಟ್ಟುಕೊಂಡಿರುವ ಬಿಜೆಪಿ, ಈ ಬಾರಿಯ ಪ್ರಣಾಳಿಕೆಯಲ್ಲಿ ಮಹತ್ವದ ಅಂಶಗಳನ್ನು ಸೇರಿಸಲಿದೆ.
ಈ ಬಾರಿಯ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಆಧುನೀಕರಣ ಜೊತೆಗೆ ಮಹಿಳಾ ಸಬಲೀಕರಣ, ಯುವ ಸಮೂಹಕ್ಕೆ ಉದ್ಯೋಗ ಸೇರಿದಂತೆ ಭರವಸೆಗಳ ಮಹಾಪೂರವೇ ನೀಡುವ ಸಾಧ್ಯತೆ ಇದೆ.

ಇನ್ನು ಇದೇ ಮೊದಲ ಬಾರಿಗೆ ಮತ ಚಲಾಯಿಸುವ ಯುವ ಸಮೂಹಕ್ಕೆ ವಿಶೇಷ ಉಡುಗೊರೆ ನೀಡಲು ಬಿಜೆಪಿ ಸಜ್ಜಾಗಿದ್ದು, ಕಾಲೇಜು ವಿದ್ಯಾರ್ಥಿ ಸಮೂಹಕ್ಕೆ ಮತ್ತು ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ವಿಶೇಷ ಕೊಡುಗೆ ಘೋಷಿಸುವ ಸಾಧ್ಯತೆ ಇದೆ.
ರಾಜ್ಯ ಚುನಾವಣಾ ಪ್ರಚಾರದ ಅಂಗವಾಗಿ ಕರ್ನಾಟಕದಲ್ಲಿ ಪ್ರಚಾರ ಮಾಡುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಜೆಡಿಎಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಇದೀಗ ಬಿಜೆಪಿ ತನ್ನ ಭರವಸೆಗಳ ಪುಸ್ತಕವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.
ಅತ್ತ ಕಾಂಗ್ರೆಸ್ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು, ಇದಕ್ಕೆ ಠಕ್ಕರ್ ನೀಡಲು ಅಳೆದು ತೂಗಿ ಭರವಸೆಗಳನ್ನು ರೂಪಿಸಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗಿಂತ ಭಿನ್ನವಾಗಿ ಪ್ರಣಾಳಿಕೆ ರೂಪಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಈ ಬಾರಿ ರೈತ ಸಮೂಹಕ್ಕೆ ದೊಡ್ಡ ಕೊಡುಗೆ ನೀಡುವ ಭರವಸೆ ಇದೆ. ಮಧ್ಯಮ ವರ್ಗದವರಿಗೆ ಹಲವು ಆಶ್ವಾಸನೆ ನೀಡಲು ಮುಂದಾಗಿದೆ. ಅದೇ ರೀತಿ ರಾಜ್ಯದ ವಿಭಾಗವಾರು ಯೋಜನೆ ರೂಪಿಸಲಿದ್ದು, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒತ್ತು ನೀಡುವ ಸಾಧ್ಯತೆ ಇದೆ.
ಯುವಕರಿಗೆ ಉದ್ಯೋಗದ ಭರವಸೆ, ನೀರಾವರಿ ಯೋಜನೆಗಳು, ನೆನೆಗುದಿ ಬಿದ್ದಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು, ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು, ರಾಜಧಾನಿ ಬೆಂಗಳೂರು ಮತ್ತು ಬೆಳಗಾವಿಗೆ ವಿಶೇಷ ಭರವಸೆಗಳನ್ನು ನೀಡಲಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications