Karnataka Election 2023: ಫಲಕೊಟ್ಟ ಬಿಜೆಪಿ ರಣತಂತ್ರ; ವರುಣಾದಲ್ಲಿ ಸಿದ್ದು, ಕಲಬುರಗಿಯಲ್ಲಿ ಖರ್ಗೆ ಠಿಕಾಣಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮುಂದಿನ ಐದು ವರ್ಷಗಳ ಕಾಲ ಯಾರು ಅಧಿಕಾರ ನಡೆಸಲಿದ್ದಾರೆ ಎಂಬುದಕ್ಕೆ ಮೇ 10ರಂದು ಮತದಾರರು ಭವಿಷ್ಯ ಬರೆಯಲಿದ್ದಾರೆ. ಇದಕ್ಕೂ ಮುನ್ನ ಮತಪ್ರಚಾರ ಅಬ್ಬರದಿಂದ ನಡೆಯುತ್ತಿದೆ.
ಆಡಳಿತರೂಢ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಹೋಲಿಸಿದರೆ ಬಿಜೆಪಿಯ ಪ್ರಚಾರದ ಭರಾಟೆ ಆಕ್ರಮಣದಿಂದ ಕೂಡಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಕರುನಾಡ ಕುರುಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.

ಇದೇ ವೇಳೆ ಬಿಜೆಪಿಯ ಪ್ರಚಾರದ ವೈಖರಿ ಕಂಡು ವಿಪಕ್ಷ ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ತಬ್ಬಿಬ್ಬರಾಗಿದ್ದಾರೆ. ಬಿಜೆಪಿ ಪರ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ರಾಜ್ಯದ ಎಲ್ಲ ಕಡೆ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಆದರೆ, ಆರಂಭದಲ್ಲಿ ಅಬ್ಬರಿಸಿದ್ದ ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿ ಅಖಾಡಕ್ಕಿಳಿದ ನಂತರ ಸಪ್ಪೆಯಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಏಕೆಂದರೆ, ಕಾಂಗ್ರೆಸ್‌ನ ದಿಗ್ಗಜ ನಾಯಕರನ್ನು ಬಿಜೆಪಿ ತನ್ನ ಚುನಾವಣಾ ತಂತ್ರದಿಂದ ಕಟ್ಟಿಹಾಕಿದೆ.
ಪುತ್ರ ಪ್ರಿಯಾಂಕ್ ಗೆಲ್ಲಿಸಿಕೊಂಡು ಬರುವುದು ಖರ್ಗೆಗೆ ದೊಡ್ಡ ಸವಾಲಾಗಿದೆ
ಕಾಂಗ್ರೆಸ್‌ನ ಮಾಸ್ ಲೀಡರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಕ್ಷೇತ್ರ ವರುಣಾದಲ್ಲಿ ಕಟ್ಟಿಹಾಕಿದ್ದರೆ, ಎಐಸಿಸಿ ಅಧ್ಯಕ್ಷ ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ತವರು ಜಿಲ್ಲೆ ಕಲಬುರಗಿಯಲ್ಲಿ ಲಾಕ್ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಈ ಕ್ಷೇತ್ರ ಬಿಟ್ಟು ಬೇರೆ ಕಡೆ ಪ್ರಚಾರ ನಡೆಸುತ್ತಿಲ್ಲ.

ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯಬೇಕೆಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಕಟ್ಟಿಹಾಕಬೇಕು ಎನ್ನುವುದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ಲಾನ್ ಆಗಿದ್ದು, ಇದೀಗ ಬಿಜೆಪಿ ಹೈಕಮಾಂಡ್‌ನ ರಣತಂತ್ರ ಫಲ ಕೊಟ್ಟಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಇದೇ ವೇಳೆ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ತಂತ್ರಗಾರಿಕೆಯನ್ನು ಬಹಿರಂಗಪಡಿಸಿದ್ದಾರೆ.
ಪಕ್ಷದ ಚುನಾವಣಾ ಪ್ರಚಾರ ಸರಿಯಾದ ಸಮಯದಲ್ಲಿ ಸಮರ್ಪಕವಾಗಿ ನಡೆಯುತ್ತಿದೆ ಎಂದಿರುವ ಬಿ.ಎಲ್. ಸಂತೋಷ್, ವಿಪಕ್ಷ ಕಾಂಗ್ರೆಸ್ ಬೇಗನೆ ಪ್ರಚಾರ ಆರಂಭಿಸಿ ಅಭಿಯಾನದ ಉತ್ತುಂಗ ಸ್ಥಿತಿಗೆ ತಲುಪಿತ್ತು. ಆದರೆ, ಬಿಜೆಪಿ ಪಕ್ಷ ಹಾಗಲ್ಲ. ಸರಿಯಾದ ಸಮಯದಲ್ಲಿ ಪ್ರಚಾರ ತೀವ್ರಗೊಳಿಸಿದೆ. ಇದರ ಪರಿಣಾಮವಾಗಿ ಸರಳ ಬಹುಮತ ಪಡೆಯಲಿದೆ ಎಂದಿದ್ದಾರೆ.

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಾನು ಗೆದ್ದರೆ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆನನ್ನು ಗೆಲ್ಲಿಸಿಕೊಂಡು ಬರುವುದು ದೊಡ್ಡ ಸವಾಲಾಗಿದೆ. ಹೀಗಾಗಿ ಕಳೆದ 2-3 ದಿನದಿಂದ ಕಲಬುರಗಿ ಸುತ್ತಮುತ್ತ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ.
ವರುಣಾದಲ್ಲಿ ಸಿದ್ದರಾಮಯ್ಯ ಲಾಕ್
ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯರನ್ನು ಕಟ್ಟಿಹಾಕಲೆಂದೇ ಬಿಜೆಪಿ ಹೈಕಮಾಂಡ್ ವಿ. ಸೋಮಣ್ಣರನ್ನು ವರುಣಾದಲ್ಲಿ ಕಣಕ್ಕಿಳಿಸಿದೆ. ಇನ್ನು ಮಲ್ಲಿಕಾರ್ಜುನ ಖರ್ಗೆನನ್ನು ಕಟ್ಟಿಹಾಕಲು ಅಂತಾನೇ ಕಲಬುರಗಿಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್ ಪರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಮಾವೇಶ ಮತ್ತು ರೋಡ್ ಶೋಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ರಾಜ್ಯದ ಎಲ್ಲ ಭಾಗಗಳಲ್ಲಿ ಸಂಚರಿಸಿದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ.
ಬಿಜೆಪಿ, ಕಾಂಗ್ರೆಸ್‌ಗೆ ಸಿನಿ ತಾರೆಯರ ಬಲ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿನಿ ತಾರೆಯರೂ ಕೂಡ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಕಿಚ್ಚ ಸುದೀಪ್, ತಾರಾ ಅನುರಾಧ, ಶೃತಿ, ಶಶಿಕುಮಾರ್, ದರ್ಶನ್ ಸೇರಿದಂತೆ ಹಲವರು ಪ್ರಚಾರ ಕಣದಲ್ಲಿ ಧೂಳೆಬ್ಬಿಸಿದರೆ, ಕಾಂಗ್ರೆಸ್ ಪರ ಶಿವರಾಜಕುಮಾರ್, ದುನಿಯಾ ವಿಜಯ್, ರಮ್ಯಾ, ಸಾಧುಕೋಕಿಲ ಸೇರಿದಂತೆ ಹಲವು ನಟ-ನಟಿಯರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications