BJP Manifesto 2023: ಚುನಾವಣೆಗೂ ಮುನ್ನ ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಕೃಷಿ ಕ್ಷೇತ್ರಕ್ಕೆ ಏನೆಲ್ಲಾ ಭರವಸೆಗಳು?
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಆಡಳಿತರೂಢ ಬಿಜೆಪಿ ಪಕ್ಷ ಸೋಮವಾರ (ಮೇ 1)ರಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ಮರಳಿ ಅಧಿಕಾರಕ್ಕೇರಲು ರಾಜ್ಯದ ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದೆ.
ಬೆಂಗಳೂರಿನ ವಸಂತ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಕೆ. ಸುಧಾಕರ್ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ಬಿಜೆಪಿ ತನ್ನ ಪ್ರಣಾಳಿಕೆ ಪತ್ರದಲ್ಲಿ ಪ್ರಮುಖ 16 ಅಂಶಗಳ ಮೇಲೆ ಭರವಸೆಗಳನ್ನು ರಾಜ್ಯದ ಜನರಿಗೆ ನೀಡಿದ್ದು, ರೈತರಿಗೆ ಅನುಕೂಲವಾಗಲು ಕೃಷಿ ಕ್ಷೇತ್ರಕ್ಕೆ ಏನೆಲ್ಲಾ ಭರವಸೆಗಳನ್ನು ನೀಡಲಾಗಿದೆ ಎಂಬುದನ್ನು ಈ ಕೆಳಗೆ ತಿಳಿಯಿರಿ.
ಬಿಜೆಪಿ ಪ್ರಣಾಳಿಕೆಯುಲ್ಲಿ ಕೃಷಿ ಕ್ಷೇತ್ರದ ಭರವಸೆಗಳು
1) ಮುಂದಿನ 5 ವರ್ಷಗಳಲ್ಲಿ '200 ಮೀನು ಕೃಷಿ ಉತ್ಪಾದನಾ ಕೇಂದ್ರ'ಗಳು ಸೇರಿದಂತೆ '1000 ಕೃಷಿ ಉತ್ಪಾದನಾ ಕೇಂದ್ರಗಳ' (ಎಫ್‌ಪಿಒ) ಸ್ಥಾಪನೆ ಮಾಡುತ್ತೇವೆ. ಹೆಚ್ಚುವರಿಯಾಗಿ, ಎಫ್‌ಪಿಒಗಳನ್ನು ಐಐಎಂನಿಂದ ಸಂಸ್ಕರಣೆ ಮತ್ತು ಮಾರ್ಕೆಟಿಂಗ್ ಬಗ್ಗೆ ಮಾರ್ಗದರ್ಶನ ನೀಡಲಾಗುವುದು.
2) 'ಭಗೀರಥ ಶಪಥ ಯೋಜನೆ'ಯಡಿ ಈ ಕೆಳಕಂಡ ಕ್ರಮಗಳ ಮೂಲಕ ಸಮಗ್ರ ನೀರಾವರಿ ವ್ಯವಸ್ಥೆ ರಚನೆ:
* ಭದ್ರಾ ಮೇಲ್ದಂಡೆ, ಕಳಸಾ-ಬಂಡೂರಿ ಮತ್ತು ಕೃಷ್ಣಾ ಮೇಲ್ದಂಡೆಯಂತಹ ಬಾಕಿ ಉಳಿದಿರುವ ಹಾಗೂ ಎಲ್ಲಾ ಪ್ರಮುಖ ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತೇವೆ.
* ಅಸ್ತಿತ್ವದಲ್ಲಿರುವ ಎಲ್ಲಾ ಏತ ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತೇವೆ.
* ಅಸ್ತಿತ್ವದಲ್ಲಿರುವ ಎಲ್ಲಾ ಏತ ನೀರಾವರಿ ಯೋಜನೆಗಳನ್ನು ನೀರಾವರಿ ಕಾಲುವೆ (ಎಫ್‌ಐಸಿ)ಗಳೊಂದಿಗೆ ಶೇ.100ರಷ್ಟು ಸಂಯೋಜಿಸುತ್ತೇವೆ.
* ಇಸ್ರೇಲ್ ಮಾದರಿಯ ಹನಿ ನೀರಾವರಿಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯೀ ಯೋಜನೆಯಡಿ ಅನುಷ್ಠಾನಗೊಳಿಸಿ ಜಮೀನುಗಳಿಗೆ ನೀರನ್ನು ತಲುಪಿಸುತ್ತೇವೆ.
3) 30,000 ಕೋಟಿ ರೂ. ಮೊತ್ತದ 'ಕೆ-ಅಗ್ರಿ ಫಂಡ್' ಈ ಕೆಳಗಿನ ಉದ್ದೇಶಗಳಿಗೆ ಸ್ಥಾಪಿಸುತ್ತೇವೆ.
* 'ಕೃಷಿಕ ಬಂಧು ಯೋಜನೆ'ಯಡಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು (ನಂದಿನಿ ಮಾದರಿಯಲ್ಲಿ) ಮತ್ತು ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆ.
* ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ.
* ದೊಡ್ಡ ಪ್ರಮಾಣ ಮತ್ತು ಕೈಗೆಟುಕುವ ದರದ ಕೃಷಿ ಯಂತ್ರೋಪಕರಣ ನೀಡುವುದು ಮತ್ತು ಮೂಲಸೌಕರ್ಯ ಅಳವಡಿಕೆ.
* 5 ಹೊಸ ಕೃಷಿ ಉದ್ಯಮ ಕ್ಲಸ್ಟರ್ ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್‌ಗಳ ಸ್ಥಾಪನೆ.
4) ರಫ್ತು ಉದ್ದೇಶದ ಸಂಗ್ರಹಣೆ ಮತ್ತು ವಿತರಣೆಗೆ ಅನುಕೂಲವಾಗುವಂತೆ ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ಬಂದರು ಸಮೀಪ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಸ್ಥಾಪಿಸುತ್ತೇವೆ.
5) ರಾಜ್ಯದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುತ್ತೇವೆ.
* ಹೈನುಗಾರರಿಗೆ ನೀಡುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ ಹಾಲಿಗೆ 5 ರೂ.ನಿಂದ 7 ರೂ.ಗೆ ಏರಿಕೆ ಮಾಡುತ್ತೇವೆ.
* ಅನಾರೋಗ್ಯ ಪೀಡಿತ ಅಥವಾ ಗಾಯಗೊಂಡ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಕೊಡಿಸಲು ಪ್ರತಿ ತಾಲ್ಲೂಕಿನಲ್ಲಿ ಮೊಬೈಲ್ ಪಶು ಆರೋಗ್ಯ ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು.
6) ಸಿರಿಧಾನ್ಯ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸಿರಿ ಅನ್ನದ ಮೂಲಕ ಶ್ರೀ ಸಂಪದ ಮಿಷನ್ ಪ್ರಾರಂಭಿಸುತ್ತೇವೆ. ಈ ಕೆಳಗಿನ ಕ್ರಮಗಳ ಮೂಲಕ ಸಿರಿಧಾನ್ಯಗಳ ಬೇಸಾಯ ಮತ್ತು ರಫ್ತಿಗೆ ಉತ್ತೇಜನ ನೀಡಲಾಗುವುದು.
* ರೈತ ಸಿರಿ ಯೋಜನೆಯಡಿ ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ನೀಡುವ ಸಹಾಯಧನವನ್ನು 10000 ರೂ.ನಿಂದ 15000 ರೂ.ಗೆ ಹೆಚ್ಚಳ ಮಾಡಲಾಗುವುದು.
* ರಾಜ್ಯದಲ್ಲಿ ಸಿರಿಧಾನ್ಯ ಉತ್ಪಾದನೆಗೆ ಉತ್ತೇಜನ ನೀಡಲು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ 5 ಆಧುನಿಕ ಸಿರಿಧಾನ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತೇವೆ.
* ರಾಜ್ಯದಲ್ಲಿ ಬೆಳೆಯುವ ರಾಗಿ ಮತ್ತು ಜೋಳಕ್ಕೆ ರಾಜ್ಯ ಬ್ರ್ಯಾಂಡಿಂಗ್ ನೀಡುವ ಮೂಲಕ ಜಾಗತಿಕ ಮಾನ್ಯತೆ ತಂದು ಕೊಡಲಾಗುವುದು.
7) ಕೃಷಿ ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ಸಾಗಿಸುವ ರೈತರಿಗೆ ಉಚಿತ ಬಸ್ ಟಿಕೆಟ್ ಸೌಲಭ್ಯ ಕಲ್ಪಿಸುತ್ತೇವೆ.
8) ಮೀನುಗಾರರ ಹಿತಾಸಕ್ತಿಗಾಗಿ ಕಡಲಮಕ್ಕಳು ಮಿಷನ್ ಪ್ರಾರಂಭಿಸಿ, ಅದರಡಿ ಮೀನುಗಾರಿಕೆ ಉತ್ಪನ್ನಗಳ ವರ್ಧಿತ ಉತ್ಪಾದನೆ, ಸಂಸ್ಕರಣೆ ಮತ್ತು ರಫ್ತಿಗೆ ಉತ್ತೇಜನ ನೀಡಲು ಸಮಗ್ರ ಬೆಂಬಲ.
9) ಕುಸುಮ್ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ಗಳನ್ನು ಬಳಸುವ ರೈತರಿಗೆ ಶೇ.80ರಷ್ಟು ಸಬ್ಸಿಡಿ ನೀಡಲಾಗುವುದು.
10) 500 ಕೋಟಿ ರೂ. ಮೊತ್ತದ ಸಾವಯವ ಕೃಷಿ ಮಿಷನ್ ಜಾರಿಗೊಳಿಸಲಾಗುವುದು. ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಕರ್ನಾಟಕ ಆರ್ಗ್ಯಾನಿಕ್ಸ್ ಬ್ರ್ಯಾಂಡ್ ಪ್ರಾರಂಭಿಸಲಾಗುವುದು.
11) ಆಹಾರ ಉತ್ಪನ್ನಗಳು ಮತ್ತು ಕೃಷಿ ಉತ್ಪನ್ನಗಳ ಪ್ರಮಾಣೀಕರಣ ಮತ್ತು ಶ್ರೇಣೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಪ್ರತಿ ಜಿಲ್ಲೆಯಲ್ಲಿ ಆಹಾರ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು.
12) ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆ ಬೆಲೆ ಏರಿಳಿತದಿಂದ ರೈತರಿಗೆ ತೊಂದರೆಯಾಗದಂತೆ 1000 ಕೋಟಿ ರೂ. ಮೊತ್ತದ ಬೆಲೆ ಸ್ಥರೀಕರಣ ನಿಧಿ ಸ್ಥಾಪಿಸಲಾಗುವುದು.












Click it and Unblock the Notifications