ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ಸಜ್ಜು; ಈ 15 ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು
ಬೆಂಗಳೂರು,ಏಪ್ರಿಲ್ 8: ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ತಂತ್ರಗಾರಿಯನ್ನ ನಡೆಸುತ್ತಿದ್ದಾರೆ.
ಈಗಾಗಲೇ ಹಲವು ತಂತ್ರಗಾರಿಕೆಯ ಮೂಲಕ ಮತ್ತೆ ಅಧಿಕಾರಕ್ಕೆ ಬರಲು ಆಡಳಿತರೂಢ ಬಿಜೆಪಿ ಮಿಷನ್ 150 ಟಾರ್ಗೆಟ್ ಹಾಕಿಕೊಂಡಿದ್ದು, ಇತ್ತ ಹಲವು ಸಮೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿರುವ ಕಾಂಗ್ರೆಸ್ ಸರ್ವೆ ಆಧಾರಿಸಿ ಗೆಲ್ಲುಲ ಲೆಕ್ಕಾಚಾರದಲ್ಲಿದೆ. ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ 123 ಸ್ಥಾನಗಳನ್ನ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದೆ. ಇನ್ನೂ ಈ ಬಾರೀಯ ಚುನಾವಣೆಯಲ್ಲಿ 15 ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ನೇರಾನೇರ ಪೈಪೋಟಿ ಏರ್ಪಡಲಿದೆ.

ಹೈವೋಲ್ಟೇಜ್ ಕ್ಷೇತ್ರವಾದ ಸಿದ್ದರಾಮಯ್ಯ ಸ್ಪರ್ಧೆಯ ವರುಣಾ ಕ್ಷೇತ್ರ!
ಕರುನಾಡ ಕುರುಕ್ಷೇತ್ರಕ್ಕೆ ಮುಹೂರ್ತ ಫಿಕ್ಸ್ ಆಗೋಯ್ತು. ಈಗ ಚುನಾವಣಾ ಕಣದಲ್ಲಿ ಅಸಲಿ ಯುದ್ಧ ಶುರುವಾಗಿದೆ. ಸೋಲು-ಗೆಲುವಿನ ಲೆಕ್ಕಾಚಾರಗಳು ಜೋರಾಗಿವೆ. ಈ ಮಧ್ಯೆ ವರುಣಾ ಕ್ಷೇತ್ರ ಹೈವೋಲ್ವೇಜ್ ಕ್ಷೇತ್ರವಾಗಿ ಮಾರ್ಪಾಟ್ಟಿದ್ದು, ಈ ಚುನಾವಣಾ ರಣಕಣದಲ್ಲಿ ಸಿದ್ದರಾಮಯ್ಯ ಅವರನ್ನ ತವರು ಕ್ಷೇತ್ರದಲ್ಲಿಯೇ ಸೋಲಿಸಲು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ.
ಚುನಾವಣಾ ಚದುರಂಗದಲ್ಲಿ ಸಿದ್ದು ವಿರುದ್ಧ ಕಮಲ ಕಲಿಗಳು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಸಜ್ಜಾಗಿದ್ದಾರೆ. ಬಿಎಸ್‌ವೈ ಪುತ್ರನನ್ನೇ ವಿಪಕ್ಷ ನಾಯಕರ ವಿರುದ್ಧ ಅಖಾಡಕ್ಕೆ ಇಳಿಸೋ ಲಕ್ಷಣಗಳು ಗೋಚರಿಸತೊಡಗಿವೆ. ಇತ್ತ ವಿಜಯೇಂದ್ರ ಅವರು ವರುಣಾದಿಂದ ಸ್ಪರ್ಧೆ ಮಾಡಲ್ಲ ಎಂದು ಬಿಎಸ್ವೈ ಸ್ಪಷ್ಟ ಪಡಿಸಿದ್ದು, ಯಾರು ಕಮಲದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಸೋಲಿಸಲು ಕಾಂಗ್ರೆಸ್ ಪ್ಲಾನ್!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಶಿಗ್ಗಾವಿಯ ಹಾಲಿ ಶಾಸಕರು. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 9,265 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ತವರು ಕ್ಷೇತ್ರದಲ್ಲಿಯೇ ಸೋಲಿಸಲು ಕಾಂಗ್ರೆಸ್ ಪ್ಲಾನ್ ನಡೆಸಿದ್ದು, ಸೂಕ್ತ ಅಭ್ಯರ್ಥಿಯನ್ನ ಮೂರನ್ನೇ ಪಟ್ಟಿಯಲ್ಲಿ ಘೋಷಿಸಿಲು ಹೈಕಮಾಂಡ್ ತಯಾರಿ ನಡೆಸಿದೆ.

ಡಿ ಕೆ ಶಿವಕುಮಾರ್ ಗೆ ಠಕ್ಕರ್ ನೀಡಲು ಪ್ರತಿಸ್ಪರ್ಧಿಗಳ ಕೊರತೆ.
ರಾಜ್ಯದ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ತವರು ಕ್ಷೇತ್ರದಲ್ಲಿ ಕಟ್ಟಿಹಾಕಬಲ್ಲ ಸಮರ್ಥ ಎದುರಾಳಿ ಪ್ರತಿಪಕ್ಷಗಳಿಗೆ ಇನ್ನೂ ಸಿಕ್ಕಿಲ್ಲ. ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಾಂಗ್ರೆಸ್ ಭದ್ರಕೋಟೆ ಆಗಿರುವ ಈ ಊರಿನಲ್ಲಿ ಡಿಕೆಶಿ ಪಾಳಯಕ್ಕೆ ಠಕ್ಕರ್ ನೀಡಬಲ್ಲ ಪ್ರತಿಸ್ಪರ್ಧಿಗಳ ಕೊರತೆ ಇದೆ. ಹಾಗೆ ನೋಡಿದರೆ ಡಿ.ಕೆ. ಶಿವಕುಮಾರ್ ಸೋಲಿಲ್ಲದ ಸರದಾರ.
ಚನ್ನಪಟ್ಟಣ ಕ್ಷೇತ್ರಕ್ಕಾಗಿ ಕುಮಾರಸ್ವಾಮಿ, ಸಿ ಪಿ ಯೋಗೀಶ್ವರ್ ನಡುವೆ ಸಮರ
ಚನ್ನಪಟ್ಟದ ಕ್ಷೇತ್ರ ಹೇಳಿ ಕೇಳಿ ಜೆಡಿಎಸ್ ನಾಯಕರ ಭದ್ರ ಕೋಟೆಯಾಗಿದೆ. ಈ ಬಾರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಸೋಲಿಸಲು ಸಿ ಪಿ ಯೋಗೇಶ್ವರ್ ಹಲವು ಕಾರ್ಯತಂತ್ರ ರೂಪಿಸಿದ್ದು, ಈ ಬಾರೀ ಈ ಕ್ಷೇತ್ರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಹಲವು ಲೆಕ್ಕಾಚಾರಗಳನ್ನ ಹಾಕಿಕೊಂಡಿರುವ ಸಿ.ಪಿ ಯೋಗೇಶ್ವರ್ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ಚುನಾವಣೆಯಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪುತ್ರ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರ ಬಿಟ್ಟುಕೊಟ್ಟ ಬಿ.ಎಸ್ ಯಡಿಯೂರಪ್ಪ
ಮಾಜಿ ಸಿಎಂ, ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾದ ನಂತರ ಈಗ ಅವರ ಸ್ಥಾನ ತೆರವಾಗಿದೆ. ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ಸಿಗಲಿದೆ. ವಿಜಯೇಂದ್ರ ಅವರು ಶಿಕಾರಿಪುರದಲ್ಲೇ ಸ್ಪರ್ಧೆ ನಡೆಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ
2018ರ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಪಕ್ಷ ಕಣಕ್ಕಿಳಿಯಲಿದ್ದು, ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ಬಿಟ್ಟುಕೊಟ್ಟಿದ್ದು, ನಿಖಿಲ್ ವಿರುದ್ದ ಸಮರ್ಥ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಹುಡುಕಾಟದಲ್ಲಿದೆ.
ಶಿವಮೊಗ್ಗ ನಗರ ಕ್ಷೇತ್ರಕ್ಕಾಗಿ ಇಬ್ಬರು ಬಿಜೆಪಿ ನಾಯಕರ ನಡುವೆ ಫೈಟ್!
ಶಿವಮೊಗ್ಗ ನಗರ ಕ್ಷೇತ್ರಕ್ಕಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ನಡುವೆ ಜಟಾಪಟಿ ಏರ್ಪಟ್ಟಿದ್ದು, ಇಬ್ಬರ ನಡುವೆ ವೈಯಕ್ತಿಕ ಟೀಕೆ ಟಿಪ್ಪಣಿ ಜೋರಾಗಿದೆ.
ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ಆಯನೂರು ಮಂಜುನಾಥ್ ಅವರು ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ದತೆಯನ್ನ ನಡೆಸಿದ್ದು, ಈ ಬಾರಿ ಈ ಕ್ಷೇತ್ರವೂ ಸಾಕಷ್ಟು ಕುತೂಹಲವನ್ನ ಹುಟ್ಟಿಸಿದೆ.
ಸೊರನದಲ್ಲಿ ಮತ್ತೆ ಶುರುವಾಯ್ತು ಬಂಗಾರಪ್ಪ ಮಕ್ಕಳ ಕದನ!
ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ರಾಜ್ಯದ ಹಾಟ್ ಕ್ಷೇತ್ರಗಳಲ್ಲಿ ಸೊರಬ ಕ್ಷೇತ್ರವೂ ಒಂದಾಗಿದ್ದು, ಪ್ರತಿ ಚುನಾವಣೆ ಸ್ಪರ್ಧೆಗೆ ಕಿಚ್ಚು ಹಚ್ಚಿದವರೇ ಬಂಗಾರಪ್ಪ ಮಕ್ಕಳು ಎಂದರೇ ತಪ್ಪಾಗುವುದಿಲ್ಲ. ಸಹೋದರರ ನಡುವೆ ಉಂಟಾದ ಕೌಟುಂಬಿಕ ವೈಮನಸ್ಸು ಪ್ರತಿ ಬಾರಿಯ ಚುನಾವಣೆ ಕದನಕ್ಕೂ ಕಾರಣವಾಗಿದೆ.
ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣದಲ್ಲಿದ್ದು, ಬಿಜೆಪಿಯಿಂದ ಹಾಲಿ ಶಾಸಕರಾಗಿರುವ ಕುಮಾರ್ ಬಂಗಾರಪ್ಪ ಅವರನ್ನ ಕಣಕ್ಕಿಳಿಸುವ ಸಿದ್ದತೆಯನ್ನ ಹೈಕಮಾಂಡ್ ಮಾಡಿದ್ದು, ಹೈವೋಲ್ಟೇಜ್ ಕ್ಷೇತ್ರವಾಗಲಿದೆ.
ಬೆಳಗಾವಿ ಸಾಹುಕಾರ್ ಜಾರಕಿಹೊಳಿ ಅವರನ್ನ ಸೋಲಿಸಲು ಕೈ ತಯಾರಿ
ರಾಜಕೀಯ ವೈರಿಗಳಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಸಾಕಷ್ಟು ಟೀಕೆಗಳು ನಡೆಯುತ್ತಿದ್ದು, ಬೆಳಗಾವಿಯ ಪ್ರಬಲ ಜಾರಕಿಹೊಳ್ ಕುಟುಂಬದ ಸಾಹುಕಾರ್ ಎಂದು ರಮೇಶ್ ಜಾರಕಿಹೊಳಿ ಅವರು 1999 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ರಮೇಶ್ ಜಾರಕಿಹೊಳಿ ವಿರುದ್ದ ಮಹಾಂತೇಶ್ ಕಾಡಡಿಯನ್ನ ಕಣಕ್ಕಿಳಿಸಿದೆ.
ಬಳ್ಳಾರಿ ನಗರ ಕ್ಷೇತ್ರಕ್ಕಾಗಿ ರೆಡ್ಡಿ ಕುಟುಂಬದಲ್ಲೇ ಪೈಪೋಟಿ
ಗಣಿ ನಗರಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಸಿಲಿನೊಂದಿಗೆ ಚುನಾವಣ ಕಾವು ಸಹ ಜೋರಾಗಿದೆ. ಕ್ಷೇತ್ರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ನಲ್ಲೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಕೆಆರ್‌ಪಿ ಅಭ್ಯರ್ಥಿ ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮಾಜಿ ಸಚಿವ, ಗಣಿ ಉದ್ಯಮಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥ ಜಿ ಜನಾರ್ದನ ರೆಡ್ಡಿ ಅವರು ಇಲ್ಲಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮಿ ಅವರನ್ನು ಕಣಕ್ಕಿಳಿಸಿದ್ದು, ರೆಡ್ಡಿ ಸಹೋದರ ನಡುವೆ ಭಾರೀ ಫೈಪೋಟಿ ಏರ್ಪಡಿಟ್ಟಿದೆ.
ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಸೋಲಿಸಲು ಬಿಜೆಪಿ ಪ್ಲಾನ್!
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಹಾಗೂ ಹಾಲಿ ಚಿತ್ತಾಪುರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ 2013 ಮತ್ತು 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಇದೀಗ 2023 ರ ವಿಧಾನಸಭಾ ಚುನಾವಣಾ ತಯಾರಿಯಲ್ಲಿದ್ದು, ಕಾಂಗ್ರೆಸ್ ಹೈಕಮಾಂಡ್ ಚಿತ್ತಾಪುರಕ್ಕೆ ಪ್ರಿಯಾಂಕ್ ಖರ್ಗೆ ಅವರನ್ನ ಕಣಕ್ಕಿಳಿಸಿದ್ದಾರೆ.
ಸತತ ಎರಡು ಬಾರಿ ಆಯ್ಕೆಯಾಗಿರುವ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪುನಃ ಆಯ್ಕೆಯಾಗುವ ವಿಶ್ವಾಸದಲ್ಲಿ ಪ್ರಿಯಾಂಕ್ ಖರ್ಗೆ ಇರಲಿದ್ದು, ಪ್ರಿಯಾಂಕ್ ಖರ್ಗೆಯನ್ನ ಸೋಲಿಸಲು ಬಿಜೆಪಿ ನಾಯಕರು ಸಮರ್ಥ ಪೈಪೋಟಿ ನೀಡಿ ಗೆಲ್ಲುವ ತವಕದಲ್ಲಿ ಇದ್ದಾರೆ.
ಕೊರಟಿಗೆರೆಯಲ್ಲಿ ಡಾ.ಜಿ ಪರಮೇಶ್ವರ್ ಸೋಲಿಸಲು ಬಿಜೆಪಿ ಪ್ಲಾನ್!?
ಮಾಜಿ ಉಪಮುಖ್ಯಮಂತ್ರಿ ಹಾಗೂ ಐದು ಬಾರಿ ಶಾಸಕರಾಗಿದ್ದ ಜಿ ಪರಮೇಶ್ವರ ಮತ್ತೆ ಕೊರಟಿಗೆರೆಯಲ್ಲಿ ಮರು ಆಯ್ಕೆ ಬಯಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿದ್ದು, ಈ ಬಾರೀ ಚುನಾವಣೆಯಲ್ಲಿ ಈ ಕ್ಷೇತ್ರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಸಂಸದ ಜಿ ಎಸ್ ಬಸವರಾಜ್ ಹಾಗೂ ಪರಮೇಶ್ವರ್ ನಡುವೆ ಫೈಟ್ ಏರ್ಪಟ್ಟಿದ್ದು, ಸೋಲಿಸಲು ಬಿಜೆಪಿ ಪ್ಲಾನ್ ನಡೆಸಿದೆ.
ಸಿ ಟಿ ರವಿ ಸೋಲಿಸಲು ಕೈ ಮಾಸ್ಟರ್ ಪ್ಲಾನ್ !
2023ರ ರಾಜ್ಯ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಗೊಂಡಿದ್ದು. ಇದರಂತೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಇದರಂತೆ ಶಾಸಕ ಸಿಟಿ ರವಿ ಹಾಗೂ ಬಿಜೆಪಿ ಭದ್ರಕೋಟೆಯಾಗಿರುವ ಚಿಕ್ಕಮಗಳೂರನ್ನು ವಶಕ್ಕೆ ಪಡೆದುಕೊಳ್ಳಲು ಚುನಾವಣೆಯಲ್ಲಿ ಹೊಸ ಮುಖವನ್ನ ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ. ಸಾಕಷ್ಟು ಬಂಡಾಯದ ಕ್ಷೇತ್ರವಾದ ಚಿಕ್ಕಮಗಳೂರಿನಲ್ಲಿ ಅಳೆದು ತೂಗಿ ಕಾಂಗ್ರೆಸ್ ಸಿ ಟಿ ರವಿ ಅವರನ್ನ ಸೋಲಿಸಲು ತಂತ್ರಗಾರಿಯನ್ನ ನಡೆಸಿದೆ.
ಹ್ಯಾಟ್ರಿಕ್ ವಿಜಯ ಸಾಧಿಸಿದ ಎಂ.ಬಿ.ಪಾಟೀಲ್ ಸೋಲಿಸಲು ಕಮಲ-ದಳ ಸಿದ್ದತೆ
ಬಬಲೇಶ್ವರ ಕ್ಷೇತ್ರದಲ್ಲಿ ಪ್ರಬಲ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ಎದುರಿಸುವಲ್ಲಿ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಯಶಸ್ವಿಯಾಗಿದ್ದಾರೆ. ಈ ಬಾರಿ ಅಂತದ್ದೇ ಕಸರತ್ತು ನಡೆಸುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ತಮ್ಮದಾಗಿಸಿಕೊಳ್ಳಲು, ಕ್ಷೇತ್ರದಲ್ಲಿನ ತಮ್ಮ ಹಿಡಿತ ಕೈ ತಪ್ಪದಂತೆ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರವನ್ನ ಮತ್ತೆ ಕೈ ವಶಪಡಿಸಿಕೊಳ್ಳುವ ತವಕ
ಬಹುತೇಕ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು 2018ರಲ್ಲಿ ಶ್ರೀರಾಮುಲು ಬಿಜೆಪಿಯ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಮತ್ತೆ ಕ್ಷೇತ್ರವನ್ನ ವಶಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ ಪ್ಲಾನ್ ನಡೆಸಿದ್ದು, ಈ ಕ್ಷೇತ್ರ ಸಾಕಷ್ಟು ಕುತೂಹಲವನ್ನ ಹುಟ್ಟು ಹಾಕಿದೆ.












Click it and Unblock the Notifications