ಕರ್ನಾಟಕದಲ್ಲಿ 75 ವರ್ಷಗಳಲ್ಲೇ ಕಂಡರಿಯದ ಬರ; ₹60 ಸಾವಿರ ಕೋಟಿ ನಷ್ಟ, ಕೇಂದ್ರದ ನೆರವಿಗೆ ಮನವಿ!
ಸಂಡೂರು: ರಾಜ್ಯದಲ್ಲಿ ಕಳೆದ 75 ವರ್ಷಗಳಲ್ಲಿ ಕಾಣದಷ್ಟು ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರು ಎದುರಿಸುತ್ತಿರುವ ನೈಜ ಪರಿಸ್ಥಿತಿಯನ್ನು ಕಣ್ಣಾರೆ ಕಂಡು, ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಸರ್ಕಾರದಿಂದ ಅಗತ್ಯ ನೆರವು ಒದಗಿಸುವ ಉದ್ದೇಶದಿಂದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ. ಪರಮೇಶ್ವರ ಅವರು ಹೇಳಿದರು.
ಇಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಮೆಕ್ಕೆಜೋಳ ಬೆಳೆ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ರೈತರೊಂದಿಗೆ ಅವರು ಸಂವಾದ ನಡೆಸಿ ಡಿಸಿಎಂ ಮಾತನಾಡಿದರು.

ರಾಜ್ಯದಾದ್ಯಂತ ಅತ್ಯಂತ ಗಂಭೀರವಾದ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ಪೀಳಿಗೆಯ ಬಹುತೇಕ ಜನ ಇಂತಹ ಬರವನ್ನು ತಮ್ಮ ಬದುಕಿನಲ್ಲಿ ನೋಡಿರಲಿಕ್ಕಿಲ್ಲ. ರಾಜ್ಯದ ಯಾವ ಭಾಗವೂ ಸಂಪೂರ್ಣವಾಗಿ ಬರದ ಪರಿಣಾಮದಿಂದ ಹೊರತಾಗಿಲ್ಲ. ಸುಮಾರು 240 ತಾಲೂಕುಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಬರದ ಸಂಕಷ್ಟ ಎದುರಾಗುತ್ತಿದೆ. ರೈತರು ಅತ್ಯಂತ ಕಷ್ಟದಲ್ಲಿದ್ದು, ವಿವಿಧ ಭಾಗಗಳಲ್ಲಿ ಬೆಳೆಯುವ ಜೋಳ, ರಾಗಿ, ಸೂರ್ಯಕಾಂತಿ, ತೊಗರಿ ಸೇರಿದಂತೆ ಬಹುತೇಕ ಬೆಳೆಗಳು ಮಳೆ ಕೊರತೆಯಿಂದ ನಾಶವಾಗಿವೆ ಎಂದು ತಿಳಿಸಿದರು.
ಮೈಸೂರು ಭಾಗದ ತಾಲೂಕುಗಳಿಗೆ ಭೇಟಿ ನೀಡಿದಾಗಲೂ ಇದೇ ರೀತಿಯ ಪರಿಸ್ಥಿತಿ ಕಂಡು ಬಂದಿತ್ತು. ಬಳ್ಳಾರಿ ಭಾಗದ ಹಲಕುಂದಿ ಗ್ರಾಮದಲ್ಲಿ ರೈತರು ಬಿತ್ತಿದ್ದ ತೊಗರಿ ಸಂಪೂರ್ಣ ಹಾನಿಗೀಡಾಗಿರುವುದನ್ನು ಪರಿಶೀಲಿಸಲಾಗಿದೆ. ತೊಗರಿ ಹಾಳಾದ ಬಳಿಕ ಸ್ವಲ್ಪ ಮಳೆ ಬಂದಾಗ ಮತ್ತೆ ಜೋಳ ಬಿತ್ತಿದ ರೈತರಿದ್ದಾರೆ. ಆದರೆ ಜೋಳ ಎರಡು ಎಲೆ ಬರುವಷ್ಟರಲ್ಲಿ ಮತ್ತೆ ಒಣಗಿಹೋಗಿದೆ ಎಂದು ವಿವರಿಸಿದರು.
ಮಳೆ ಕೊರತೆಗೆ ಬೆಳೆ ಹಾಳು, ಕೀಟ ಬಾಧೆ
ಬಂಡ್ರಿ ಗ್ರಾಮದಲ್ಲಿ ಮೆಕ್ಕೆಜೋಳದ ಜಮೀನನ್ನು ಪರಿಶೀಲಿಸಿದಾಗ ಬೆಳೆ ಮಳೆ ಕೊರತೆಯಿಂದ ಒಣಗಿರುವುದರ ಜೊತೆಗೆ ಕೀಟಬಾಧೆಯೂ ಉಂಟಾಗಿರುವುದು ಕಂಡುಬಂದಿದೆ. ಬೆಳೆ ರೈತನಿಗೆ ಇಳುವರಿ ನೀಡದ ಸ್ಥಿತಿಯಷ್ಟೇ ಅಲ್ಲ, ದನಗಳಿಗೆ ಮೇವಾಗಿಯೂ ಬಳಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿನ ಬರ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಒಂದು ಕಡೆ, ನಾನು ಮತ್ತೊಂದು ಕಡೆ, ಅಧಿಕಾರಿಗಳು ವಿವಿಧ ಭಾಗಗಳಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಸರ್ಕಾರ ಯಾವ ರೀತಿಯಲ್ಲಿ ರೈತರ ನೆರವಿಗೆ ಬರಬಹುದು ಎಂಬುದನ್ನು ನಿರ್ಧರಿಸಲು ನೈಜ ಪರಿಸ್ಥಿತಿಯನ್ನು ಕಣ್ಣಾರೆ ನೋಡಲಾಗುತ್ತಿದೆ ಎಂದು ಡಾ. ಪರಮೇಶ್ವರ ಹೇಳಿದರು.
ಏನಾದರೂ ಮಾಡಿ ರೈತನನ್ನು ಈ ಕಷ್ಟದಿಂದ ಪಾರು ಮಾಡಬೇಕು. ಅವರಿಗೆ ನೆರವು ಮತ್ತು ಸಹಾಯ ನೀಡಬೇಕು ಎಂಬ ಉದ್ದೇಶದಿಂದಲೇ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಬರ ನಿರ್ವಹಣೆಗೆ ಆದ್ಯತೆಗೆ ತಾಕೀತು
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಪ್ರಸ್ತುತ ಬರ ನಿರ್ವಹಣೆಯನ್ನೇ ಮೊದಲ ಆದ್ಯತೆಯಾಗಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಇತರೆ ಆಡಳಿತಾತ್ಮಕ ಕೆಲಸಗಳಿಗಿಂತ ಮೊದಲು ಬರದ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ಆ ಬಳಿಕ, ನಾನು ಬೆಂಗಳೂರಿನಿಂದ ಇಲ್ಲಿವರೆಗೆ ಬಂದಿರುವುದು ನಿಮ್ಮ ಕಷ್ಟವನ್ನು ಕೇಳಲು. ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಹೇಳುವುದಕ್ಕಿಂತ ಮೊದಲು ನೀವು ಎದುರಿಸುತ್ತಿರುವ ತೊಂದರೆಗಳನ್ನು ಹೇಳಬೇಕು. ನಿಮ್ಮ ಅಹವಾಲುಗಳನ್ನು ನೇರವಾಗಿ ಕೇಳಲು ಬಂದಿದ್ದೇನೆ ಎಂದು ರೈತರನ್ನು ಮುಕ್ತವಾಗಿ ಮಾತನಾಡುವಂತೆ ಆಹ್ವಾನಿಸಿದರು.
ರೈತರಾದ ನಾಗರಾಜ, ಈಶ್ವರಪ್ಪ ಮತ್ತು ಮೈಲೇಶ ಮಾತನಾಡಿ, ವಲಸೆ ತಡೆಯಲು ನರೇಗಾ ನಿಯಮ ಸಡಿಲಿಸುವಂತೆ, ಸಾಲ ಮತ್ತು ಬಡ್ಡಿ ವಸೂಲಿ ಮಾಡದಂತೆ ಸರ್ಕಾರ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ, ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ, ಜಾನುವಾರುಗಳಿಗೆ ಮೇವು, ಶಾಶ್ವತ ನೀರಾವರಿ ಯೋಜನೆ ರೂಪಿಸುವಂತೆ ಹಾಗೂ ಬರಕ್ಕೆ ಶಾಶ್ವತ ಪರಿಹಾರ ನೀಡುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಂತೆ ಮನವಿ ಮಾಡಿದರು.
₹60 ಸಾವಿರ ಕೋಟಿ ನಷ್ಟ; ₹8-10 ಸಾವಿರ ಕೋಟಿ ನೆರವಿಗೆ ಮನವಿ
ರಾಜ್ಯದಲ್ಲಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಒಟ್ಟಾರೆ ನಷ್ಟ ಸುಮಾರು ₹60 ಸಾವಿರ ಕೋಟಿವರೆಗೆ ತಲುಪಿದೆ. ಮೊದಲ ಮೆಮೊರಾಂಡಮ್‌ನಲ್ಲಿ ಸುಮಾರು 117 ತಾಲೂಕುಗಳ ಪರಿಸ್ಥಿತಿ ಒಳಗೊಂಡು ಸುಮಾರು ₹40 ಸಾವಿರ ಕೋಟಿ ನಷ್ಟದ ವಿವರವನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ನಂತರ ಇನ್ನಷ್ಟು ತಾಲೂಕುಗಳ ನಷ್ಟವನ್ನು ಸೇರಿಸಿ ಒಟ್ಟಾರೆ ಸುಮಾರು ₹60 ಸಾವಿರ ಕೋಟಿ ನಷ್ಟ ಅಂದಾಜಿಸಲಾಗಿದೆ ಎಂದರು.
ಆದರೆ ರಾಜ್ಯ ಸರ್ಕಾರ ₹60 ಸಾವಿರ ಕೋಟಿಯನ್ನೇ ಪರಿಹಾರವಾಗಿ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ NDRF ಮಾರ್ಗಸೂಚಿ ಮತ್ತು ಲೆಕ್ಕಾಚಾರದ ಪ್ರಕಾರವೇ ನೆರವು ಕೇಳಲಾಗಿದೆ. ಆ ಲೆಕ್ಕಾಚಾರದಲ್ಲಿ ಸುಮಾರು ₹8 ಸಾವಿರ ಕೋಟಿ ಪರಿಹಾರಕ್ಕೆ ಅರ್ಹತೆ ಬರುತ್ತಿದ್ದು, ಸುಮಾರು ₹8-10 ಸಾವಿರ ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರದಿಂದ ಬಂದ ತಂಡ ರಾಜ್ಯದ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಇಲ್ಲಿ ನಿಜವಾಗಿಯೂ ಗಂಭೀರ ಬರ ಇದೆ ಎಂಬುದನ್ನು ತಂಡವೂ ಅರಿತುಕೊಂಡಿದೆ. ತಂಡವು ವರದಿ ಸಲ್ಲಿಸಿದ ಬಳಿಕ ಕೇಂದ್ರ ಗೃಹ ಸಚಿವಾಲಯದ ಮಟ್ಟದಲ್ಲಿ ಪರಿಹಾರ ನಿರ್ಧಾರವಾಗಲಿದೆ ಎಂದರು.
ಹಿಂದಿನ ಬರದ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೆರವು ಕೇಳಿದ್ದರೂ ಆರಂಭದಲ್ಲಿ ಹಣ ಬಿಡುಗಡೆಯಾಗಿರಲಿಲ್ಲ. ನಂತರ ನ್ಯಾಯಾಲಯದ ಸೂಚನೆಯ ಬಳಿಕ ಸುಮಾರು ₹3,500 ಕೋಟಿ ಬಿಡುಗಡೆಯಾಯಿತು. ಈ ಬಾರಿ ಕೇಂದ್ರ ತಂಡವೇ ಪರಿಸ್ಥಿತಿಯನ್ನು ಕಣ್ಣಾರೆ ನೋಡಿರುವುದರಿಂದ ರಾಜ್ಯಕ್ಕೆ ನ್ಯಾಯಯುತ ನೆರವು ದೊರೆಯಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
60 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ಸಂವಾದದ ವೇಳೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಾ. ಪರಮೇಶ್ವರ ಅವರು, ಸಂಬಂಧಿತ ಯೋಜನೆಯ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಸುಮಾರು 60 ಹಳ್ಳಿಗಳಿಗೆ ಕುಡಿಯುವ ನೀರು ದೊರೆಯಲಿದೆ ಎಂದರು.
ಐದು ತಾಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಾವಗಡವರೆಗೆ ನೀರು ತಲುಪಿಸುವ ಯೋಜನೆಗೆ ಸುಮಾರು ₹2,640 ಕೋಟಿ ವೆಚ್ಚ ಮಾಡಲಾಗಿದೆ. ಈಗಾಗಲೇ ಪಾವಗಡ ಭಾಗದ ಹಲವು ಹಳ್ಳಿಗಳಿಗೆ ನೀರು ದೊರೆಯುತ್ತಿದೆ. ಇದೇ ರೀತಿಯಲ್ಲಿ ಉಳಿದ ಭಾಗಗಳಿಗೂ ಯೋಜನೆಯ ಪ್ರಯೋಜನ ತಲುಪಲಿದೆ ಎಂದು ತಿಳಿಸಿದರು.
ಬೇರೆ ತಾಲೂಕಿಗೆ ನೀರು ಬಂದಿದೆ, ನಮಗೆ ಬಂದಿಲ್ಲ ಎಂಬ ಆತಂಕ ಬೇಡ. ಯೋಜನೆಯ ವ್ಯಾಪ್ತಿಯಲ್ಲಿರುವ ಎಲ್ಲ ತಾಲೂಕು ಮತ್ತು ಹಳ್ಳಿಗಳಿಗೆ ನೀರು ತಲುಪಿಸುವ ಕೆಲಸ ನಡೆಯುತ್ತಿದೆ ಎಂದರು.
ಮೈಕ್ರೋಫೈನಾನ್ಸ್ ಕಿರುಕುಳ ನೀಡಿದರೆ ಎಫ್‌ಐಆರ್
ಖಾಸಗಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರ ಮನೆಗಳಿಗೆ ಹೋಗಿ ಸಾಲ ವಸೂಲಿಗಾಗಿ ಕಿರುಕುಳ ನೀಡುವಂತಿಲ್ಲ ಎಂದು ಪರಮೇಶ್ವರ ಎಚ್ಚರಿಸಿದರು. ಯಾವುದೇ ಮೈಕ್ರೋಫೈನಾನ್ಸ್ ಸಂಸ್ಥೆ ರೈತರಿಗೆ ಬೆದರಿಕೆ ಹಾಕುವುದು, ಮನೆಗೆ ನುಗ್ಗುವುದು ಅಥವಾ ಕಿರುಕುಳ ನೀಡುವುದು ಕಂಡುಬಂದರೆ ತಕ್ಷಣ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ರೈತರಿಗೆ ತಿಳಿಸಿದರು. ಈ ವಿಚಾರವನ್ನು ಕೃಷಿ ಇಲಾಖೆ ಅಧಿಕಾರಿಗಳು ನಿರಂತರವಾಗಿ ಮಾನಿಟರ್ ಮಾಡಬೇಕು. ಯಾವ ಮೈಕ್ರೋಫೈನಾನ್ಸ್ ಸಂಸ್ಥೆಯವರಾದರೂ ರೈತರಿಗೆ ಕಿರುಕುಳ ನೀಡಿದರೆ ತಕ್ಷಣ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


Click it and Unblock the Notifications
