ಕರ್ನಾಟಕ ಬರ ಘೋಷಣೆ: 102 ತಾಲ್ಲೂಕುಗಳ ವರದಿ ಸಿದ್ಧ; ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಜಿ. ಪರಮೇಶ್ವರ್

ಕರ್ನಾಟಕದಲ್ಲಿ ಬರ ಘೋಷಣೆಗೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಕರ್ನಾಟಕದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬರ ಘೋಷಣೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಬರ ಘೋಷಿಸುತ್ತೇವೆ. ಪ್ರತಿ ವಾರವೂ ಬರ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಬರ ಪರಿಸ್ಥಿತಿಯನ್ನು ಅವಲೋಕಿಸಲು ಬಿಜೆಪಿಯವರು ಕೂಡ ತಂಡ ಮಾಡಿಕೊಂಡು ಹೋಗಿದ್ದರು. ಆದರೆ ಆ ಬಗ್ಗೆ ಸದನದಲ್ಲಿ ಚರ್ಚೆಯೂ ಮಾಡಿಲ್ಲ. ಮುಖ್ಯಮಂತ್ರಿಗಳಿಗಾಗಲಿ, ಕಂದಾಯ ಸಚಿವನಾದ ನನಗಾಗಲಿ ವರದಿ ಅಥವಾ ಪತ್ರವನ್ನೂ ನೀಡಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರೈತರಿಗೆ ಬೆಳೆ ನಷ್ಟವಾಗಿದೆ. ವಿರೋಧ ಪಕ್ಷದವರು ಈ ಬಗ್ಗೆ ಚರ್ಚೆಗಳನ್ನು ಮಾಡಿ, ಸಲಹೆಗಳನ್ನು ಕೊಡಬೇಕು. ಆ ಕೆಲಸ ಮಾಡುವ ಬದಲು ಸದನದಲ್ಲಿ ಬರೀ ರಾಜಕೀಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Karnataka Drought

ಪರಮೇಶ್ವರ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ ಎಂದು ಹೈಕಮಾಂಡ್‌ಗೆ ಒತ್ತಾಯಿಸಿರುವುದಾಗಿ ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ರಾಜೀನಾಮೆ ನೀಡುವ ವೇಳೆ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಿದ್ದರು. ಅದನ್ನು ಹೈಕಮಾಂಡ್‌ ಪರಿಗಣನೆಗೆ ತೆಗೆದುಕೊಂಡಿಲ್ಲ. ಉಪ ಮುಖ್ಯಮಂತ್ರಿಯಾಗಿ ನನ್ನನ್ನು ಮಾಡಬೇಕು ಎಂದೂ ಅವರು ಹೇಳಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ಹೇಳಿರುವುದು ಸತ್ಯ ಎಂದರು.

ಸಚಿವ ನಾಗೇಂದ್ರ ರಾಜೀನಾಮೆಯ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು

ನಾಗೇಂದ್ರ ಅವರ ರಾಜೀನಾಮೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇಂದು ಅಥವಾ ನಾಳೆ ಮುಖ್ಯಮಂತ್ರಿಗಳು ದೆಹಲಿಗೆ ಹೋಗುತ್ತಾರೆ. ಹೈಕಮಾಂಡ್‌ ಭೇಟಿಯಾದರೆ ಅಲ್ಲಿ ಈ ಬಗ್ಗೆ ಚರ್ಚೆಗಳು ನಡೆಯಬಹುದು. ಸಂಪುಟ ಪುನರ್‌ ರಚನೆ ಊಹಾಪೋಹವಷ್ಟೇ. ಹೈಕಮಾಂಡ್‌ ತೀರ್ಮಾನದಂತೆ ಆಗುತ್ತದೆ ಎಂದರು.

ಯಾವ ಚಾರ್ಜ್‌ಶೀಟ್‌ನಲ್ಲೂ ನಾಗೇಂದ್ರ ಅವರ ಹೆಸರು ಇಲ್ಲ. ನಾನು ಗೃಹಸಚಿವನಾಗಿದ್ದವನು. ನನಗೆ ಮಾಹಿತಿ ಇದೆ. ಸಿಬಿಐ ತನಿಖೆ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಆಗುತ್ತದೆ. ಈ ವಿಚಾರದಲ್ಲಿ ಬಿಜೆಪಿ ಪಾದಯಾತ್ರೆ ಮಾಡುತ್ತಿರುವುದು ರಾಜಕೀಯವಷ್ಟೇ. ಸದನದಲ್ಲೂ ಪ್ರಶ್ನೆಗಳನ್ನು ಕೇಳಿ ಉತ್ತರಿಸಲು ನಾವು ಸಮರ್ಥರಿದ್ದೇವೆ ಎಂದು ಹೇಳಿದ್ದೆವು. ಆದರೆ ಈಗ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಉದ್ಯಾನವನಗಳ ಶೇ.5ರಷ್ಟು ಜಾಗಗಳ ಬಳಕೆಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕ ಉದ್ದೇಶಕ್ಕಾಗಿ ಜಾಗ ಬಳಕೆಯಾಗಲಿದೆ. ಅದು ನಿರ್ದಿಷ್ಟವಾಗಿ ಕಾರ್ಪೊರೇಶನ್‌ನವರು ಮಾಡಿದಾಗಲೇ ತಿಳಿಯುತ್ತದೆ. ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಶುಲ್ಕ ಪಾವತಿಸುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದ ಸಮಯದಲ್ಲೂ ಈ ಬಗ್ಗೆ ಚರ್ಚೆಗಳನ್ನು ಮಾಡಿದ್ದೆವು. ರಸ್ತೆಗಳು ಇರುವುದು ಜನ ಓಡಾಡುವುದಕ್ಕೆ. ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದರೆ ರಸ್ತೆಗಳು ಕಾಣುವುದೇ ಇಲ್ಲ. ಹಾಗಾಗಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ತೀರ್ಮಾನ ಗೊತ್ತಾಗಲಿದೆ ಎಂದಿದ್ದಾರೆ.

ಒಳಮೀಸಲಾತಿ ಜಾರಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು

ಮುಂದುವರಿದು ದೇಶದಲ್ಲಿ ಅಸಮಾನತೆ ತೊಲಗಬೇಕಾದರೆ ಮೀಸಲಾತಿ ಮತ್ತು ಒಳಮೀಸಲಾತಿ ಇರಲೇಬೇಕು ಎಂಬ ಸಿದ್ದರಾಮಯ್ಯನವರ ಹೇಳಿಕೆಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಜಿ.ಪರಮೇಶ್ವರ್ ಅವರು, ಒಳಮೀಸಲಾತಿ ಈಗ ಮುಗಿದ ಕಥೆ. ಬಹಳ ವರ್ಷಗಳಿಂದ ನಡೆಯುತ್ತಿದ್ದ ಹೋರಾಟದ ಹಿನ್ನೆಲೆಯಲ್ಲಿ ಒಳಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ ಐವತ್ತನ್ನು ಮೀರಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಇರುವ ಕಾರಣ ಒಳಮೀಸಲಾತಿಯ ಜಾರಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಇತಿಮಿತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ ಎಂದೂ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+