Karnataka Dam Water Level: ಕರ್ನಾಟಕದಲ್ಲಿ ಭರ್ಜರಿ ಮಳೆ; ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು?
ಬೆಂಗಳೂರು, ಜುಲೈ 30: ಕರುನಾಡಿನಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರಾಜ್ಯದ ಹಲವೆಡೆ ಏಪ್ರಿಲ್ ತಿಂಗಳಿನಿಂದಲೇ ಮಳೆಯ ಆರ್ಭಟ ಶುರುವಾಗಿದ್ದು, ರಾಜ್ಯದ ಜಲಾಶಯ, ಮಳೆಯಿಂದಾಗಿ ರಾಜ್ಯದ ಅನೇಕ ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಇದರಿಂದ ಜಲಮೂಲ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು, ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ.
ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು,ಮತ್ತೆ ಮಳೆ ಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತ ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕರ್ನಾಟಕದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಜಲಾಯಶಗಳು ಕೂಡ ಭರ್ತಿಯಾಗಿವೆ.

ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಳೆಯಿಂದಾಗಿ ಭದ್ರಾ, ಹಾರಂಗಿ, ಕಬಿನಿ, ಕೆಆರ್ಎಸ್, ಹೇಮಾವತಿ, ಲಿಂಗನಮಕ್ಕಿ, ಆಲಮಟ್ಟಿ, ಮಲಪ್ರಭಾ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಜುಲೈ 30) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಕರುನಾಡಲ್ಲಿ ಈ ಬಾರಿ ಮಳೆ ರೂಪದಲ್ಲಿ ಸುನಾಮಿ ಎದ್ದಿದ್ಯೋ ಒಂದೂ ಗೊತ್ತಾಗ್ತಿಲ್ಲ. ಪುಷ್ಯ ಮಳೆಯ ಹೊಡೆತಕ್ಕೆ ಇಡೀ ಕರುನಾಡೇ ಮತ್ತೊಮ್ಮೆ ಮುಳುಗೇಳೋದಕ್ಕೆ ಶುರುವಾಗಿದೆ. ಪಶ್ಚಿಮ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪಶ್ಚಿಮ ಮಹಾರಾಷ್ಟ್ರದ ಉತ್ತರ ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ.
ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ. ಹೀಗಾಗಿ ತುಂಗಾ ಜಲಾಶಯದಿಂದ 68,599 ಕ್ಯೂಸೆಕ್ ಮತ್ತು ಭದ್ರಾ ಜಲಾಶಯದಿಂದ 39,017 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಇನ್ನೂ ಈ ಎರಡು ಜಲಾಶಯಗಳಲ್ಲಿ ನೀರು ಸೇರಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತುಂಗ ಮತ್ತು ಭದ್ರಾ ಜಲಾಶಯಗಳಿಂದ 112170 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿ ಎಂ ಗಂಗಾಧರಸ್ವಾಮಿ ಅವರು ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯಗಳ ನೀರಿನ ಮಟ್ಟ, ಒಳ ಹರಿವು, ಹೊರ ಹರಿವು ಹೆಚ್ಚಾಗಿದ್ದು, ಜಲಾಶಯದಲ್ಲಿ 105.788 ಟಿ.ಎಂ.ಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಈಗಾಗಲೇ 80.001 ಟಿ.ಎಂ.ಸಿ ಭರ್ತಿಯಾಗಿದೆ.
ಇನ್ನೂ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ 35 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರಿಂದ 25 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನೂ ಧಾರಾಕಾರ ಮಳೆ ಮುಂದುವರಿದಿರುವುದರಿಂದ ನದಿಗೆ ಬಿಡುವ ನೀರಿನ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ.
ಆಲಮಟ್ಟಿ ಜಲಾಶಯದಲ್ಲಿ ಒಳಹರಿವು 60,160 ಕ್ಯೂಸೆ ಇದ್ದು, ಹೊರ ಹರಿವನ್ನು 1,20,000 ಕ್ಯೂಸೆಕ್‌ಗೆ ಏರಿಸಲಾಗಿದೆ. ಇನ್ನು, ನಾರಾಯಣಪುರ ಜಲಾಶಯಕ್ಕೆ ಒಳಹರಿವು 1,20,000 ಕ್ಯೂಸೆಕ್ ಇದ್ದು, ಹೊರ ಹರಿವು 1,23,400 ಕ್ಯೂಸೆಕ್‌ನಷ್ಟಿದೆ. ಇತ್ತ ಮಂಡ್ಯ ಭಾಗದಲ್ಲೂ ಭಾರೀ ಮಳೆಯಾಗಿದ್ದು, ಕೆಆರ್ ಎಸ್ ಜಲಾಶಯದ ಗರಿಷ್ಟ ನೀರಿನ ಮಟ್ಟ 124.80 ಅಡಿಯಷ್ಟಿದೆ. ಇಂದಿನ ನೀರಿನ ಮಟ್ಟ 123.80 ಅಡಿ ಇದ್ದು, ಒಳಹರಿವು 52,856 ಕ್ಯೂಸೆಕ್ ಹಾಗೂ ಹೊರ ಹರಿವು 56,447 ಕ್ಯೂಸೆಕ್‌ನಷ್ಟಿದೆ.












Click it and Unblock the Notifications