ನೀವೇನೆ ಷಡ್ಯಂತ್ರ ಮಾಡಿದ್ರೂ ನಾವು 10 ಕೆಜಿ ಅಕ್ಕಿ ಕೊಡ್ತೀವಿ: ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ವಿತರಿಸಲು ಕರ್ನಾಟಕ ರಾಜ್ಯಕ್ಕೆ ಅಕ್ಕಿ ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ರಾಜ್ಯ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಬಡವರಿಗೆ ಅಕ್ಕಿ ಕೊಡಲು ಕೇಂದ್ರ ರಾಜಕೀಯ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿದ್ದು, ನೀವೆಷ್ಟೇ ಷಡ್ಯಂತ್ರ ಮಾಡಿದ್ರೂ ನಾವು 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿದೆ. ಇದಕ್ಕೆ ಬಸವಣ್ಣನವರ ಉದಾಹರಣೆಯನ್ನು ನೀಡಿರುವ ಕಾಂಗ್ರೆಸ್ ಬಿಜೆಪಿಗರ ಕುತಂತ್ರಗಳು ಫಲಿಸಲ್ಲ ನಮ್ಮ ಕೆಲಸ ನಿಲ್ಲಲ್ಲ ಎಂದು ಹೇಳಿದೆ.

"ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಬಿಜೆಪಿ ನಾಯಕರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ನಾವು ಅನ್ನಭಾಗ್ಯದ ಅಕ್ಕಿಯನ್ನು 10 ಕೆ.ಜಿ.ಗೆ ಏರಿಸುವುದು ನಿಶ್ಚಿತ. ಬಸವಣ್ಣನ ಅನುಭವ ಮಂಟಪದ ದಾಸೋಹಕ್ಕೂ ವಿರೋಧಿಗಳು ಇಂತಹದ್ದೇ ಅಡೆತಡೆಗಳನ್ನು ಸೃಷ್ಟಿಸಿದ್ದರು. ನಮ್ಮ ಅನ್ನಭಾಗ್ಯದ ದಾಸೋಹವನ್ನು ಬಿಜೆಪಿಗರ ಯಾವ ಕುತಂತ್ರವೂ ತಡೆಯಲು ಸಾಧ್ಯವಿಲ್ಲ." ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕೇಂದ್ರ ಸರ್ಕಾರ ಹಾಗೂ @BJP4Karnataka ನಾಯಕರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ನಾವು ಅನ್ನಭಾಗ್ಯದ ಅಕ್ಕಿಯನ್ನು 10 ಕೆಜಿಗೆ ಏರಿಸುವುದು ನಿಶ್ಚಿತ.
— Karnataka Congress (@INCKarnataka) June 15, 2023
ಬಸವಣ್ಣನ ಅನುಭವ ಮಂಟಪದ ದಾಸೋಹಕ್ಕೂ ವಿರೋಧಿಗಳು ಇಂತಹದ್ದೇ ಅಡೆತಡೆಗಳನ್ನು ಸೃಷ್ಟಿಸಿದ್ದರು.
ನಮ್ಮ ಅನ್ನಭಾಗ್ಯದ ದಾಸೋಹವನ್ನು ಬಿಜೆಪಿಗರ ಯಾವ ಕುತಂತ್ರವೂ ತಡೆಯಲು ಸಾಧ್ಯವಿಲ್ಲ.
ತೀವ್ರವಾದ ಅಕ್ಕಿ ರಾಜಕೀಯ
ಎಫ್‌ಸಿಐ ಅಧಿಕಾರಿಗಳು ಮೊದಲು 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ ಎಂದು ಹೇಳಿದ್ದರು, ಆದರೆ ನಂತರ ಕೇಂದ್ರ ಸರ್ಕಾರದ ಸೂಚನೆಯಂತೆ ಹಿಂದೆ ಸರಿದಿದ್ದಾರೆ ಎಂದು ಕರ್ನಾಟಕ ಸರ್ಕಾರ ಆರೋಪ ಮಾಡಿದೆ. ಎಫ್‌ಸಿಐ ಇದಕ್ಕೆ ಪ್ರತಿಕ್ರಿಯೆ ನೀಡಿ, ನಿಮಯಗಳಂತೆ ಅಕ್ಕಿ ಪೂರೈಕೆ ಮಾಡಲಾಗುತ್ತದೆ, ರಾಜ್ಯ ಸರ್ಕಾರ ಕೇಳಿದಷ್ಟು ಅಕ್ಕಿ ಕೊಡಲು ದಾಸ್ತಾನು ಇಲ್ಲ ಎಂದು ಹೇಳಿದೆ.
ಸಿದ್ದರಾಮಯ್ಯ ಈ ಬಗ್ಗೆ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಡವರ ಅಕ್ಕಿಯಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು.
ಸದ್ಯ ಸಿದ್ದರಾಮಯ್ಯ ಅವರ ಸರ್ಕಾರ 10 ಕೆ.ಜಿ. ಅಕ್ಕಿ ಕೊಡಲೇಬೇಕೆಂದು ಪಣ ತೊಟ್ಟಿದ್ದು, ತೆಲಂಗಾಣ ಮತ್ತು ಛತ್ತಿಸ್‌ಗಢ ರಾಜ್ಯಗಳ ಜೊತೆ ಮಾತುಕತೆ ನಡೆಸುತ್ತಿದೆ. ಇತರೆ ರಾಜ್ಯಗಳಿಂದ ಆಗಲಿ ಅಕ್ಕಿ ಖರೀದಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಮುಂದಾಗಿದೆ.
ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ನುಡಿದಂತೆ ಜುಲೈ ತಿಂಗಳಿನಿಂದ 10 ಕೆ.ಜಿ. ಅಕ್ಕಿ ಕೊಡದೇ ಇದ್ದರೆ ಪ್ರತಿಭಟನೆ ಮಾಡುವುದಾಗಿದೆ ಹೇಳಿದೆ. ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ, 5 ಕೆ.ಜಿ. ಅಕ್ಕಿಯ ದುಡ್ಡನ್ನು ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications