ಕರ್ನಾಟಕ ಕಾಂಗ್ರೆಸ್ಸಿನಿಂದ ಸಾಲು-ಸಾಲು ಕಾರ್ಯಕ್ರಮಗಳು
ಬೆಂಗಳೂರು, ಜೂ. 30 : ಕರ್ನಾಟಕ ಸರ್ಕಾರದ ಸಾಧನೆಗಳನ್ನು ಮನೆ-ಮನೆಗೆ ತಲುಪಿಸಲು ಮತ್ತು ಪಕ್ಷ ಸಂಘಟನೆ ಮಾಡಲು ಕಾಂಗ್ರೆಸ್ ಪಕ್ಷ ಮುಂದಿನ ಐದು ತಿಂಗಳು ಸತತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಪ್ರತಿನಿಧಿಗಳ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಮುಂದಿನ ಐದು ತಿಂಗಳು ಸತತವಾಗಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಾದಾಯಾತ್ರೆ, ಸಮಾವೇಶ ಮುಂತಾದವುಗಳು ಇವುಗಳಲ್ಲಿ ಸೇರಿವೆ ಎಂದರು.

ಎಐಸಿಸಿ ಮಹಾಧಿವೇಶನದ ಮಾದರಿಯಲ್ಲಿ ಮೂರು ದಿನಗಳ ಕೆಪಿಸಿಸಿ ಮಹಾಧಿವೇಶನ ನಡೆಸುವ ಪ್ರಯೋಗವನ್ನು ಅಕ್ಟೋಬರ್ ನಲ್ಲಿ ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು. [ಸೋಲಿನ ಆತ್ಮಾವಲೋಕನ ಮಾಡಿಕೊಂಡ ಕಾಂಗ್ರೆಸ್]
ಪಾದಯಾತ್ರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪಾದಯಾತ್ರೆ ನಡೆಸುವ ಉದ್ದೇಶ ಪಕ್ಷಕ್ಕೆ ಇದೆ. ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇಲ್ಲವೋ ಆ ಕ್ಷೇತ್ರಗಳಲ್ಲಿ ಪರಾಜಿತ ಅಭ್ಯರ್ಥಿ ಹಾಗೂ ಸ್ಥಳೀಯ ನಾಯಕರು ಪಾದಯಾತ್ರ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಹೊಸ ಸದಸ್ಯರ ನೋಂದಣಿ : ಪಕ್ಷಕ್ಕೆ ನೂತನ ಸದಸ್ಯರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಡಿಸೆಂಬರ್ ವೇಳೆಗೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಿನಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳ ಸಮಾವೇಶ ನಡೆಸಲಾಗುವುದು ಎಂದು ಪರಮೇಶ್ವರ್ ಹೇಳಿದರು.
ದೂರು ರವಾನಿಸಲಾಗಿದೆ : ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಬಗ್ಗೆ ಬಂದ ದೂರುಗಳನ್ನು ಶಿಸ್ತು ಸಮಿತಿಗೆ ರವಾನಿಸಲಾಗಿದ್ದು, ಶಿಸ್ತು ಸಮಿತಿಯಿಂದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ವೇಳೆ ತಟಸ್ಥವಾಗಿ ಉಳಿದಿದ್ದನ್ನು ಸಹ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗುವುದು ಎಂದರು.
ನಾನು ಸನ್ಯಾಸಿಯಲ್ಲ : ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿರುವವರು ತಾಳ್ಮೆಯಿಂದ ಕಾಯಬೇಕು ಎಂದು ಎಲ್ಲರೂ ಹೇಳುತ್ತಾರೆ. ನಾನೂ ಮೂರು ಪಕ್ಷದ ಸಂಘಟನೆಗೆ ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿದೆ, ಇನ್ನೂ ತಾಳ್ಮೆಯಿಂದ ಇರು ಎಂದರೆ ನಾನು ಸನ್ಯಾಸಿಯಲ್ಲ ಎಂದು ಪರೋಕ್ಷವಾಗಿ ಸ್ಥಾನಮಾನದ ಕುರಿತಂತೆ ಮಾತನಾಡಿದರು.












Click it and Unblock the Notifications