KN Rajanna: ನನಗೆ ಮಾಟ-ಮಂತ್ರ ಮಾಡಿಸ್ತಾರೆ, ನಿಂಬೆಹಣ್ಣು, ಹೂವು ಮೊಳೆ ಹಾಕ್ತಾರೆ
ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಬಾಂಬ್ ಸಿಡಿಸಿದ್ದ ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸಚಿವರಾದ ತಮ್ಮ ಮೇಲೆಯೇ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎನ್ನುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಈ ಬಗ್ಗೆ ಮತ್ತೆ ಮಾತನಾಡಿರುವ ಅವರು ಮತ್ತೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗ್ಯಾಂಗ್‌ವೊಂದು ಹನಿಟ್ರ್ಯಾಪ್ ಮಾಡಿದ್ದು ಮಾತ್ರವಲ್ಲ ರಾಜಕೀಯವಾಗಿ ತುಳಿಯಲು ಮಾಟ, ಮಂತ್ರದ ಪ್ರಯೋಗ ಕೂಡ ಮಾಡ್ತಾರೆ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ನಾನು ಸಾರ್ವಜನಿಕ ಜೀವನದಲ್ಲಿ ಏಕಾಏಕಿ ಸುಮ್ಮನೆ ಬೆಳೆದು ಬಂದವನಲ್ಲ. ಹಲವು ಹೋರಾಟ ಮಾಡಿಕೊಂಡು, ಜನ ಮನ್ನಣೆ ಗಳಿಸಿಕೊಂಡು ಬೆಳೆದಿದ್ದೇನೆ. ಹಾಗಾಗಿ ಬೆಳೆದ ಮೇಲೆ ಈ ರೀತಿ ತೇಜೋವಧೆ ಮಾಡೋದು ಮೊದಲಿನಿಂದಲೂ ರಾಜಕಾರಣದಲ್ಲಿದೆ. ಆದರೆ ಇದರಿಂದ ಅವರಿಗೆ ಒಳ್ಳೆಯದಾಗಲ್ಲ ಎಂದು ತಿರುಗೇಟು ನೀಡಿದ್ದಾರೆ. ಹನಿಟ್ರ್ಯಾಪ್ ಯಾರು ಮಾಡಿದ್ರು ಅನ್ನೋದು ಹೇಳಲು ಸಾಧ್ಯವಿಲ್ಲ. ಈ ಹಿಂದೆ ರಮೇಶ್ ಜಾರಕಿಹೊಳಿ, ಪ್ರಜ್ವಲ್ ರೇವಣ್ಣ ಅವರನ್ನು ಏಕೆ ಟಾರ್ಗೆಟ್ ಮಾಡಿದ್ರು? ಎಲ್ಲವೂ ಒಂದೊಂದು ಉದ್ದೇಶ ಇಟ್ಟುಕೊಂಡೇ ಮಾಡಿರುತ್ತಾರೆ. ಆದರೆ, ನನ್ನ ಮೇಲಿನ ಉದ್ದೇಶ ಏನೆಂಬುದು ನನಗೆ ಗೊತ್ತಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ನನಗೆ ಮಾಟ ಮಂತ್ರ ಮಾಡಿಸ್ತಾರೆ, ನಿಂಬೆಹಣ್ಣು, ಹೂವು ಹಾಕುವುದು, ಮೊಳೆ ಹಾಕುವುದು ಅದೆಲ್ಲವನ್ನೂ ಮಾಡ್ತಾರೆ. ಏಕೆಂದರೆ ರಾಜಕಾರಣದಲ್ಲಿ ಇರುವವರನ್ನ ತೇಜೋವಧೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. ಇನ್ನು ಹನಿಟ್ರ್ಯಾಪ್‌ನಲ್ಲಿ ಕೃತ್ಯದಲ್ಲಿ ಯಾರು ಭಾಗಿ ಆಗುತ್ತಾರೆ ಎನ್ನುವುದನ್ನು ಪತ್ತೆ ಹಚ್ಚಲೇಬೇಕು. ಅವರಿಗೆ ಶಿಕ್ಷೆ ಕೊಡಿ ಎಂದು ನಾನು ಒತ್ತಾಯಿಸಲ್ಲ, ಆದರೆ ಮುಂದೆ ಈ ರೀತಿಯ ಘಟನೆಗಳು ಆಗಬಾರದು ಅನ್ನೋದೆ ನನ್ನ ಉದ್ದೇಶ ಎಂದಿದ್ದಾರೆ.
ನಾನು ಸದನದಲ್ಲಿ ಹೇಳಿದಂತೆ ಹನಿಟ್ರ್ಯಾಪ್ ವಿಚಾರದಲ್ಲಿ ನನ್ನ ಮಾತಿಗೆ ಬದ್ಧನಾಗಿದ್ದೇನೆ. ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಲಿಖಿತ ದೂರನ್ನು ಕೂಡ ನೀಡುತ್ತೇನೆ. ಆದರೆ ಈಗ ನಾನು ಒಂದು ಮೂರು ದಿನಗಳ ಕಾಲ ಬಿಡುವಿಲ್ಲದ ದಿನಚರಿಯಲ್ಲಿದ್ದೇನೆ. ವಿವಿಧೆಡೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿದೆ. ಹಾಗಾಗಿ ಮೂರು ದಿನ ಕಳೆದ ನಂತರ ನಾನೇ ಗೃಹ ಸಚಿವರನ್ನು ಭೇಟಿಯಾಗಿ ದೂರು ಕೊಡುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ.

ನಾನು ಸದ್ಯ ಬೆಂಗಳೂರಿಗೂ ಹೋಗಲ್ಲ, ಅವಶ್ಯಕತೆ ಬಿದ್ದರೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತೇನೆ. ಆದರೆ, ಗೃಹ ಸಚಿವರನ್ನು ಭೇಟಿಯಾಗುತ್ತೇನೆ. ಆದರೆ, ಹನಿಟ್ರ್ಯಾಪ್ ವಿಚಾರವಾಗಿ ನಾನು ಸಿಎಂ ಅವರನ್ನು ಭೇಟಿಯಾಗಿಲ್ಲ. ಆದರೆ, ನಿನಗೆ ಏನು ತೋಚುತ್ತೋ ಅದನ್ನೇ ಮಾಡು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದು ಸರ್ಕಾರಕ್ಕೆ ಬಿಟ್ಟಿರೋ ವಿಚಾರ. ಇದರಲ್ಲಿ ಯಾರೆಲ್ಲ ಇದ್ದಾರೆ ಅನ್ನೋದು ಹೊರಗೆ ಬರಲೇಬೇಕು, ಹೈಕಮಾಂಡ್‌ಗೆ ದೂರು ಕೊಡಲೇಬೇಕು. ಏಕೆಂದರೆ ಯಾರಾದ್ರೂ ಮುಂದೆ ಸಿಡಿ ತಗೊಂಡು ಹೋಗಿ ಕೊಟ್ರೆ ರಾಜಣ್ಣ ಮೊದಲೇ ಹೇಳಿದ್ರು ಅನ್ನೋದು ತಿಳಿದಿರಬೇಕಲ್ಲ. ಆದ್ರೆ ನಾನಂತೂ ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಕಡೆ ಹಲೋ ಅಂದ್ರೆನೇ ಆ ಕಡೆ ಇಂದಲೂ ಹಲೋ ಅನ್ನೋದು ಎಂಬ ಡಿಕೆ ಶಿವಕುಮಾರ್ ಮಾತಿಗೆ ತಿರುಗೇಟು ನೀಡಿರುವ ರಾಜಣ್ಣ, , ಅದರ ಬಗ್ಗೆ ನನಗೆ ತಿಳಿದಿಲ್ಲ, ಅದು ಅವರ ಅನುಭವ ಇರಬಹುದು, ಹಾಗಾಗಿ ಹೇಳಿರುತ್ತಾರೆ. ನಾನ್ಯಾರಿಗೂ ಕೆಟ್ಟದ್ದು ಬಯಸಿಲ್ಲ ಎಂದು ಸಚಿವ ರಾಜಣ್ಣ ಟಾಂಗ್ ನೀಡಿದ್ದಾರೆ.












Click it and Unblock the Notifications