ರಾಜ್ಯದಲ್ಲಿ ಜೋರಾಗಿದೆ 'ಸಿಎಂ ಅಧಿಕಾರ' ಹಸ್ತಾಂತರದ ಜಟಾಪಟಿ!

ಬೆಂಗಳೂರು, ಜನವರಿ 10: ಆಡಳಿತರೂಢ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ನಾಯಕರ ನಡೆಯಿಂದ ಗೊತ್ತಾಗುತ್ತಿದೆ. ಸಿಎಂ ಅಧಿಕಾರದ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳ ಗುದ್ದಾಟ ಒಳಗೊಳಗೆ ಜೋರಾಗಿಯೇ ನಡೆಯುತ್ತಿದ್ದರೂ ಮೇಲ್ನೋಟಕ್ಕೆ ಏನೂ ಆಗಿಲ್ಲ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ನೀಡಲು ಹೆಣಗಾಡುತ್ತಿರುವುದು ಎದ್ದು ಕಾಣಿಸುತ್ತಿದೆ.

ಈ ಹಿಂದೆ ಸಿಎಂ ಅಧಿಕಾರವಧಿಯನ್ನು ಯಾವುದೇ ಜಂಜಾಟವಿಲ್ಲದೆ ಪೂರ್ಣಗೊಳಿಸಿದ ಸಿದ್ದರಾಮಯ್ಯರಿಗೆ ಈ ಬಾರಿ ಹೆಜ್ಜೆ, ಹೆಜ್ಜೆಗೂ ಸವಾಲ್ ಗಳು ಎದುರಾಗುತ್ತಿದ್ದು ಎಲ್ಲವನ್ನು ನಿಭಾಯಿಸಿ ಐದು ವರ್ಷ ಪೂರ್ಣಗೊಳಿಸುತ್ತಾರಾ? ಅಧಿಕಾರ ಬಿಟ್ಟುಕೊಡುತ್ತಾರಾ? ಎಂಬುದೇ ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.

Karnataka Congress Faces Power Transfer Controversy Amidst Leadership Struggles

ಸಿಎಂ ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಒಪ್ಪಂದ ಆಗಿದೆಯೋ ಇಲ್ಲವೋ ಎನ್ನುವುದು ಇಲ್ಲಿವರೆಗೆ ಅವರಿಬ್ಬರು ಮತ್ತು ಹೈಕಮಾಂಡ್ ನ್ನು ಹೊರತುಪಡಿಸಿ ಉಳಿದಂತೆ ಯಾರಿಗೂ ಗೊತ್ತಿಲ್ಲ. ಆದರೂ ಆ ಬಗ್ಗೆ ಚರ್ಚೆ ಮಾತ್ರ ಪುಂಖಾನುಪುಂಖವಾಗಿ ನಡೆಯುತ್ತಿದೆ. ಎಲ್ಲರೂ ಅವರಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ ವರ್ಷಗಳು ಕಳೆಯುತ್ತಿದ್ದಂತೆಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಣಗಳ ನಡುವೆ ಕಚ್ಚಾಟಗಳು ಮುನ್ನಲೆಗೆ ಬರುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

ಇಷ್ಟಕ್ಕೂ ಅಧಿಕಾರ ಹಂಚಿಕೆ ವಿಚಾರದಲ್ಲಿ ಒಪ್ಪಂದ ಆಗದೇ ಹೋಗಿದ್ದರೆ ಒಬ್ಬ ಸಿಎಂ ಆಡಳಿತ ನಡೆಸುತ್ತಿರುವಾಗಲೇ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆಗಳು ಪಕ್ಷದ ವೇದಿಕೆಯಿಂದಾಚೆ ಏಕೆ ಬರುತ್ತಿವೆ? ನಾಯಕರೇ ಆ ವಿಚಾರವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಬಹಿರಂಗವಾಗಿ ಏಕೆ ಹೇಳಬೇಕು? ಇದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಬಹುಮತ ಪಡೆದು ಅಧಿಕಾರ ಹಿಡಿದ ಕಾಂಗ್ರೆಸ್ ಗೆ ಆರಂಭದಲ್ಲಿಯೇ ಸಿಎಂ ಸ್ಥಾನದ ವಿಚಾರದಲ್ಲಿ ಕಗ್ಗಂಟು ಶುರುವಾಗಿತ್ತು ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ...

ನಿಲ್ಲದ ಸಿಎಂ ಗಾದಿಗೆ ಸಂಬಂಧಿಸಿದ ಹೇಳಿಕೆಗಳು

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಮಗೆ ಬೇಕೆಂದು ಹಠಕ್ಕೆ ಬಿದ್ದಿದ್ದರು. ಹಾಗಾಗಿ ಹಲವು ದಿನಗಳ ಕಸರತ್ತು ಬಳಿಕ ಸಿದ್ದರಾಮಯ್ಯರವರಿಗೆ ಸಿಎಂ ಸ್ಥಾನವನ್ನು ನೀಡಲಾಯಿತು. ಆದರೆ ಹೀಗೆ ಸಿಎಂ ಸ್ಥಾನವನ್ನು ನೀಡುವ ವೇಳೆ ಅಧಿಕಾರದ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಆಗಿದ್ದು, ಎರಡೂವರೆ ವರ್ಷದ ನಂತರ ಅಧಿಕಾರವನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಬೇಕೆನ್ನುವುದು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿ. ಆದರೆ ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡು ಕೆಲವೇ ತಿಂಗಳುಗಳಲ್ಲಿಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕರು ಹೇಳಿಕೆಗಳನ್ನು ನೀಡಲು ಆರಂಭಿಸಿದ್ದರು.

Karnataka Congress Faces Power Transfer Controversy Amidst Leadership Struggles

ಸಿದ್ದರಾಮಯ್ಯನವರೇ ಐದು ವರ್ಷವೂ ಸಿಎಂ ಆಗಿರುತ್ತಾರೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಎಂದು ಬಹಿರಂಗವಾಗಿಯೇ ಹೇಳಲಾರಂಭಿಸಿದರು. ಈ ವಿಚಾರ ಹೈಕಮಾಂಡ್ ಅಂಗಳಕ್ಕೆ ಹೋಗಿ ನಾಯಕರಿಗೆ ಖಡಕ್ ಸಂದೇಶ ರವಾನೆಯಾದರೂ ಸಿಎಂ ಗಾದಿಗೆ ಸಂಬಂಧಿಸಿದಂತೆ ಹೇಳಿಕೆಗಳು ಮಾತ್ರ ನಿಂತಂತೆ ಕಾಣುತ್ತಿಲ್ಲ. ಈಗಾಗಲೇ ಕಾಂಗ್ರೆಸ್ ನ ಹಲವು ನಾಯಕರು ಸಿಎಂ ಆಗುವ ಆಕಾಂಕ್ಷೆಯನ್ನು ಹೊರಹಾಕಿರುವುದನ್ನು ರಾಜ್ಯದ ಜನ ನೋಡಿದ್ದಾರೆ. ಹಾಗಾದರೆ ಒಬ್ಬ ಸಿಎಂ ಇರುವಾಗಲೇ ಪಕ್ಷದ ನಾಯಕರಿಂದ ಇಂತಹ ಹೇಳಿಕೆಗಳೇಕೆ ಬರುತ್ತಿವೆ ಎನ್ನುವುದೇ ಅಚ್ಚರಿ.

ಸಿದ್ದರಾಮಯ್ಯನವರ ವರ್ಚಸ್ಸು ಕುಗ್ಗುತ್ತಿದೆಯಾ?

ಸಾಮಾನ್ಯವಾಗಿ ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸುವುದು, ಶಾಸಕರು ತನಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುವುದು ರಾಜಕೀಯದಲ್ಲಿ ಸಾಮಾನ್ಯವಾಗಿದೆ. ಆದರೆ ಪ್ರಭಾವಿ ನಾಯಕನೊಬ್ಬ ಸಿಎಂ ಆಗಿರುವಾಗಲೇ ಇನ್ನಿತರ ನಾಯಕರು ಸಿಎಂ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸುತ್ತಿರುವುದು ಸಿದ್ದರಾಮಯ್ಯನವರ ವರ್ಚಸ್ಸು ಕುಗ್ಗುತ್ತಿರುವುದಕ್ಕೆ ಸಾಕ್ಷಿನಾ?. ಹೀಗಾಗಿಯೇ ತನ್ನ ಬಣದ ಒಂದಷ್ಟು ಹಿಂದುಳಿದ ನಾಯಕರನ್ನು ಮುಂದಿಟ್ಟುಕೊಂಡು ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ತಂತ್ರ ಹೂಡುತ್ತಿದ್ದಾರಾ? ಹೀಗೊಂದು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ನಂಬಿಕೆಯಿಂದ ಒಕ್ಕಲಿಗರು ಡಿಕೆಶಿಯನ್ನು ಬೆಂಬಲಿಸಿದರು ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಜ್ಯದಲ್ಲಿ 136 ಸ್ಥಾನಗಳನ್ನು ಗೆಲ್ಲುವಲ್ಲಿ, ತದನಂತರ ಉಪಚುನಾವಣೆಯಲ್ಲಿ ಮತ್ತೆರಡು ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳುವಲ್ಲಿ ಡಿಕೆಶಿ ಅವರ ತಂತ್ರ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಅವರಿಗೆ ಮುಂದೆ ಸಿಎಂ ಸ್ಥಾನವನ್ನು ಬಿಟ್ಟುಕೊಡುವುದು ಸಿದ್ದರಾಮಯ್ಯ ಅವರಿಗೂ ಕಷ್ಟವಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಬಣದ ಸಚಿವರು ಮತ್ತು ಶಾಸಕರಿಗ ಅದು ಇಷ್ಟವಿಲ್ಲ. ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದ್ದರಿಂದ ಅವರೆಲ್ಲರೂ ಸಿದ್ದರಾಮಯ್ಯ ಅವರೇ ಪೂರ್ಣಾವಧಿಯ ಸಿಎಂ ಆಗಿರಬೇಕೆಂದು ಬಯಸುತ್ತಿದ್ದಾರೆ.

Karnataka Congress Faces Power Transfer Controversy Amidst Leadership Struggles

ಅಧಿಕಾರ ಹಸ್ತಾಂತರದ ಜಟಾಪಟಿಗೆ ಇತಿಶ್ರೀ ಯಾವಾಗ?

ಹಾಸನದಲ್ಲಿ ಸಿದ್ದರಾಮಯ್ಯ ಬಣದಿಂದ ಸಮಾವೇಶ ಹಮ್ಮಿಕೊಂಡು ಡಿಕೆಶಿಗೆ ಟಕ್ಕರ್ ನೀಡಲು ಮಾಡಿದ ತಂತ್ರವೂ ವಿಫಲವಾಗಿದೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಮಹಾಧೀವೇಶನದಲ್ಲೂ ಡಿಕೆಶಿ ಪ್ರಾಬಲ್ಯವಿತ್ತು. ಈ ನಡುವೆ ಡಿನ್ನರ್ ಪಾರ್ಟಿ ನಡೆಸಿ ಡಿಕೆಶಿಗೆ ಗುದ್ದು ಕೊಡುವ ಪ್ರಯತ್ನ ವಿಫಲವಾಗಿದೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಅವರನ್ನು ಇಳಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದ್ದು, ಕೆಲವರು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಯಕೆಯನ್ನು ಮುಂದಿಟ್ಟಿರುವುದು ಗೋಚರಿಸುತ್ತಿದೆ.

ಹೊಸ ವರ್ಷದ ಆರಂಭದಲ್ಲಿಯೇ ಕಾಂಗ್ರೆಸ್ ಪಕ್ಷದೊಳಗಿನ ಜಟಾಪಟಿ ಜೋರಾಗಿದ್ದು, ಮೇಲ್ನೋಟಕ್ಕೆ ಏನೂ ನಡೆಯುತ್ತಿಲ್ಲ ಎಂಬಂತೆ ತೇಪೆ ಹಾಕುತ್ತಿದ್ದರೂ ಎಲ್ಲವೂ ಬಹಿರಂಗವಾಗುತ್ತಿವೆ. ಇದೀಗ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಅದಾದ ನಂತರ ದೆಹಲಿ ಕಡೆಗೆ ಹೊರಟು ನಿಂತಿದ್ದಾರೆ. ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಶುರುಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಆಡಳಿತಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದರೂ ಆಂತರಿಕ ಕಚ್ಚಾಟ ನಿಂತಂತೆ ಕಾಣುತ್ತಿಲ್ಲ. ಮುಂದೆ ಜಾಸ್ತಿಯಾಗಬಹುದೇ ವಿನಃ ಕಡಿಮೆಯಂತು ಆಗುವುದಿಲ್ಲ. ಇದರ ಫಲಾಫಲಗಳು ಏನು ಎಂಬುದನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+