'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
ಬೆಂಗಳೂರು ಏಪ್ರಿಲ್ 19: ಕರ್ನಾಟಕ ಲೋಕಸಭಾ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಬಲ ಪಕ್ಷ ಕಾಂಗ್ರೆಸ್ ಬಿಜೆಪಿ ವಿರುದ್ಧ ಜಾಕೀರಾತಿನ ಮೂಲಕ ದಾಳಿ ಶುರುಮಾಡಿದೆ.
ಪತ್ರಿಕೆಯಲ್ಲಿ 'ಚೊಂಬು' ಜಾಹೀರಾತು ನೀಡುವ ಮೂಲಕ ಮೋದಿ ಸರ್ಕಾರದ ವಿರುದ್ದ ಕಾಂಗ್ರೆಸ್ ನೇರ ದಾಳಿಗಿಳಿದಿದೆ. ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು! ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎಂದು ಮತಯಾಚನೆ ಮಾಡಿದೆ. ಹಾಗಾದರೆ ಕಾಂಗ್ರೆಸ್ ನೀಡಿದ ಜಾಹೀರಾತಿನಲ್ಲಿ ಏನಿದೆ?

ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು!
* ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು
* ತೆರಿಗೆ ಹಂಚಿಕೆಯಲ್ಲಿ ಚೊಂಬು
* ರೈತರ ಆದಾಯ ಡಬಲ್ ಮಾಡುವ ಚೊಂಬು
* ಬರ/ನೆರೆ ಪರಿಹಾರದ ಚೊಂಬು
27 ಜನ ಬಿಜೆಪಿ/ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು
ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು, ಕನ್ನಡಿಗರ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ.. ಎಂದು ಜಾಹೀರಾತು ನೀಡಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26ಕ್ಕೆ ಶುರುವಾಗಲಿದೆ. ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ಆರಂಭಿಸಿದೆ. ನರೇಂದ್ರ ಮೋದಿ ಹೆಸರೇಳಿಕೊಂಡು ಮತಯಾಚನೆ ಮಾಡುವ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ಜಾಹೀರಾತಿನ ಮೂಲಕ ಪ್ರಚಾರ ಆರಂಭಿಸಿದೆ.

ಮೊದಲ ಹಂತದಲ್ಲಿ ಕರ್ನಾಟಕದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿರುಸಿನ ಪ್ರಚಾರ ಆರಂಭಿಸಿದೆ. ಮೋದಿ ಆಡಳಿತದ ಅವಧಿಗೂ ಮುನ್ನ ನೀಡಿ ಈಡೇರದ ಭರವಸೆಗಳ ಬಗ್ಗೆ ಕಾಂಗ್ರೆಸ್ ಮತದಾರರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದೆ. ನಿರುದ್ಯೋಗ, ರೈತರ ಆದಾಯ, ಬರ ಪರಿಹಾರ, ಖಾತೆಗೆ ಹಣ ಇಂತೆಲ್ಲಾ ಭರವಸೆಗಳನ್ನು ಬಿಜೆಪಿ ಅಧಿಕಾರಕ್ಕೂ ಮುನ್ನ ನೀಡಿಜನರ ಕಣ್ಣಿಗೆ ಮಣ್ಣೆರೆಚಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಮನವಿ ಮಾಡಿಕೊಂಡಿದೆ.
ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಅಂದ್ರೆ ಮೇ 7ರಂದು ಚುನಾವಣೆ ನಡೆಯಲಿದೆ.

ಎರಡನೇ ಹಂತದ ಚುನಾವಣೆಗೆ ಏಪ್ರಿಲ್ 19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 20ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು , ಏಪ್ರಿಲ್ 22 ನಾಮಿನೇಷನ್ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ದೇಶದ 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಸುಮಾರು 97 ಕೋಟಿ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.












Click it and Unblock the Notifications