Data Center Hub: ಮಂಗಳೂರು ಡೇಟಾ ಸೆಂಟರ್ ಸನ್ಯಾಸಿ ಸಂಸಾರದ ಕಥೆ: ರಾಜಾರಾಂ ತಲ್ಲೂರು ಬರಹ
ಮಂಗಳೂರು: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಡೇಟಾ ಸೆಂಟರ್‌ಗಳನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಯೋಜನೆ ರೂಪಿಸುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಕರಾವಳಿಯಲ್ಲಿ ಹೇಗಾದರೂ ಮಾಡಿ ಡೇಟಾ ಸೆಂಟರ್‌ಗಳನ್ನು ತರುವ ಮಹತ್ವಾಕಾಂಕ್ಷೆ ಇರುವ ಕೆಲವೇ ಕೆಲವು ಜನ "ಡೇವಲಪ್‌ಮೆಂಟ್‌ನ ಗುತ್ತಿಗೆ ಹಿಡಿದವರು" ಅದಕ್ಕಾಗಿ ಹೊರತಂದಿರುವ ವರದಿಯೊಂದನ್ನು ಗಂಭೀರವಾಗಿ ಓದತೊಡಗಿದ್ದೇನೆ. ಈ ಕೆಲಸ ಮಾಡಬೇಕಾದ ಮಾಧ್ಯಮಗಳು, ಈ ವರದಿ ಹೊರಬಂದಿದೆ ಎಂಬ ವರದಿ ಪ್ರಕಟಿಸಿ ಕೈ ತೊಳೆದುಕೊಂಡಿವೆ; ಅದಕ್ಕೆ ಜಾಹೀರಾತಿನ ದುಡ್ಡು ಎಷ್ಟು ಬರಬಹುದೆಂಬ ಲೆಕ್ಕಾಚಾರದಲ್ಲಿ ಅವರು ಇರಬಹುದು. ಇರಲಿ ಅವರ ವ್ಯವಹಾರ ಅದು. ನಾಗರಿಕರಾಗಿ ನಾವು ಇಂತಹ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನಮಗೆ ಉಳಿಗಾಲ ಇಲ್ಲ. ಇವರೆಲ್ಲ ನಮ್ಮನ್ನು ನುಂಗಿ ನೀರುಕುಡಿಯಲಿದ್ದಾರೆ. ಇನ್ನು ಕೆಲವು ದಿನ ಈ ವರದಿಯಲ್ಲಿ ಓದಿದ್ದನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ.

ಈ ಡೇಟಾ ಸೆಂಟರ್‌ಗಳಿಗೆ ಪ್ರತೀ ಮೆಗಾವಾಟ್ ಸಾಮರ್ಥ್ಯಕ್ಕೆ, ವರ್ಷದ 365 ದಿನವೂ, ದಿನಕ್ಕೆ 40,000-60,000 ಲೀಟರ್ ನೀರು ಅಗತ್ಯವಿದೆಯಂತೆ ಮತ್ತು ಸದ್ಯಕ್ಕೆ ಇಲ್ಲಿ ಲಭ್ಯ ಇರುವ ನೀರಿನ ಆಧಾರದಲ್ಲಿ ಮಂಗಳೂರಿನಲ್ಲಿ 267-401 ಮೆಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಸ್ಥಾಪಿಸಬಹುದಂತೆ! ಅಂದರೆ, ಪ್ರತಿದಿನ 1.60-2.41 ಕೋಟಿ ಲೀಟರ್ ನೀರಿಗೆ ಗಿರಾಕಿ ಸಿದ್ಧವಾಗಿದೆ.
ಇವರಲ್ಲದೇ ಈಗಾಗಲೇ ಅಂದಾಜು 10 ಕೋಟಿ ಲೀಟರ್ ನೀರು ಪ್ರತಿದಿನ ಬೇರೆ ಕೈಗಾರಿಕೆಗಳಿಗೆ ಹೋಗುತ್ತಿದೆ. ಬೇಸಗೆಯ 3-4 ತಿಂಗಳುಗಳಲ್ಲಿ, ಸಮುದ್ರ ತೀರದಲ್ಲಿದ್ದರೂ ಮನೆವಾರ್ತೆಯ ಬಳಕೆ ನೀರಿಗೆ ಹಾಹಾಕಾರ ಏಳುವುದು ಕರಾವಳಿಗೆ ಹೊಸದೇನಲ್ಲ. 2024ರ ಮಾರ್ಚ್ ತಿಂಗಳಿನಲ್ಲಿ ದ.ಕ. ಜಿಲ್ಲಾಧಿಕಾರಿಗಳು ಈಗಾಗಲೇ ಇರುವ ಕೈಗಾರಿಕೆಗಳಿಗೆ, ನಿಮ್ಮ ಬೇಡಿಕೆಯ 50% ನೀರು ಮಾತ್ರ ಬಳಸಿ ಎಂದು ವಿನಂತಿಸಿಕೊಂಡ ಪತ್ರಿಕಾವರದಿ ನೋಡಿದ್ದೇನೆ. 2016ರಲ್ಲಿ ತುಂಬೆಯ ನೀರು ಶೂನ್ಯಮಟ್ಟಕ್ಕೆ ಹೋದಾಗ, 2026ರ ಜನಸಂಖ್ಯೆಯ ಅಂದಾಜು ಇರಿಸಿಕೊಂಡು ಹೊಸ ವ್ಯವಸ್ಥೆ ಆದದ್ದು, ಈಗ ಇತಿಹಾಸ.
ವಾಸ್ತವ ಹೀಗಿರುವಾಗ, ಏಕಾಏಕಿ ಮಂಗಳೂರಿನಲ್ಲಿ ಬೇಕಾದಷ್ಟು ನೀರು ಇದೆ ಎಂದು ಪರಿಣತ (ತಜ್ಞರ) ವರದಿ ಸಿದ್ಧವಾಗುತ್ತದೆ ಮತ್ತು ಎಲ್ಲರೂ ಅದಕ್ಕೆ "ಜಯ ಜಯ" ಎಂದು ಜಯಕಾರ ಹಾಕುತ್ತಾರೆ ಎಂದಾದರೆ, ಒಂದೋ ಕರಾವಳಿ ಡ್ರಗ್ಸ್ ಹೆಚ್ಚಾಗಿ ಮತ್ತಿನಲ್ಲಿದೆ, ಇಲ್ಲವೇ ಇನ್ನು ಎಚ್ಚರಿಕೆಯೇ ಆಗದಷ್ಟು ಗಾಢವಾಗಿ ನಿದ್ರಿಸುತ್ತಿದೆ.
ಒಮ್ಮೆ ಡೇಟಾ ಸೆಂಟರುಗಳು ಊಹಿಸಿದ ಪ್ರಮಾಣದಲ್ಲಿ ತಲೆ ಎತ್ತಿದವೆಂದರೆ, ದೇಶದಲ್ಲಿ ಉತ್ಪಾದನೆ ಆಗುವ ಒಟ್ಟು ವಿದ್ಯುತ್ತಿನ 70%ನಷ್ಟು ಅವೇ ನುಂಗಲಿದ್ದು, ಉಳಿದ 30% ನಲ್ಲಿ ಉಳಿದ ಎಲ್ಲ ಉದ್ಯಮಗಳು, ಮನೆವಾರ್ತೆಯ ಬಳಕೆ ಮುಗಿಯಬೇಕು ಎಂಬುದು ಜಾಗತಿಕ ಲೆಕ್ಕಾಚಾರ. ಅದಕ್ಕಾಗಿಯೇ ನ್ಯೂಕ್ಲಿಯರ್ ವಿದ್ಯುತ್‌ನಂತಹ ಹೊಸಹೊಸ ಹಾದಿಗಳನ್ನು ಕಂಡುಕೊಳ್ಳಲಾಗುತ್ತಿದೆ. ಭಾರತದಲ್ಲೇ 2024-25ರ ಒಟ್ಟು ವಿದ್ಯುತ್ ಬಳಕೆ 1694 ಟೆರಾವಾಟ್ ಆದರೆ, 2035ರ ಹೊತ್ತಿಗೆ ಅದು ಡೇಟಾ ಸೆಂಟರುಗಳ ಕಾರಣಕ್ಕೆ 4041 ಟೆರಾವಾಟ್‌ಗೆ ಏರಲಿದೆಯಂತೆ. ಇನ್ನಿತರ ವಿದ್ಯುತ್ ಚಾಲಿತ ವಾಹನ ಮತ್ತಿತರ ಬೇಡಿಕೆಗಳು ಇದಕ್ಕೆ ಸೇರಿಕೊಳ್ಳಲಿವೆ.
ಇಂತಹ ಸನ್ನಿವೇಶದಲ್ಲಿ, ಕರ್ನಾಟಕದಲ್ಲಿ ಸದ್ಯಕ್ಕೆ 2025ರ ಲಭ್ಯ ಲೆಕ್ಕಾಚಾರದ ಪ್ರಕಾರ ಪ್ರತಿದಿನ 226.25 ಮಿಲಿಯ ಯೂನಿಟ್ ವಿದ್ಯುತ್ ಉತ್ಪಾದನೆ ಆದರೆ, ಬೇಡಿಕೆ ಅಂದಾಜು 264 ಮಿಲಿಯ ಯೂನಿಟ್ ಇದೆ. ಸದ್ಯಕ್ಕೆ ವಿದ್ಯುತ್ ಉತ್ಪಾದನೆ ಸರ್ ಪ್ಲಸ್ ಇದ್ದರೂ ಅದು ಅತ್ಯಂತ ತೆಳು ಸರ್ ಪ್ಲಸ್. ವಾಸ್ತವ ಹೀಗಿರುವಾಗ, ಏಕಾಏಕಿ ಕರಾವಳಿಯಲ್ಲಿ 260-400 ಮೆಗಾವಾಟ್ ಗಾತ್ರದ 6.24 ಮಿಲಿಯ ಯೂನಿಟ್-9.6 ಮಿಲಿಯ ಯೂನಿಟ್ ಪ್ರತಿದಿನ ಬೇಡುವ ಡೇಟಾ ಸೆಂಟರ್ ಸ್ಥಾಪನೆ ಆಗಬೇಕೆಂದು ಒಂದಿಷ್ಟು ಪ್ರಭಾವೀ ಜನ ಕೇಳಲಾರಂಭಿಸಿದ್ದಾರೆ. ಇಲ್ಲಿನ ಮೆಸ್ಕಾಂ ಸರಬರಾಜು ಮಾಡುತ್ತಿರುವುದೇ ದಿನಕ್ಕೆ ಅಂದಾಜು 12 - 25 ಮಿಲಿಯ ಯೂನಿಟ್. ಅದರಲ್ಲಿ ಅರ್ಧಕ್ಕರ್ಧ ಡೇಟಾ ಸೆಂಟರ್ ನುಂಗಿದರೆ ಉಳಿದವರ ಪಾಡೇನು.
ಇದರ ಅರ್ಥ ಇಲ್ಲಿ ಇನ್ನಷ್ಟು ವಿದ್ಯುತ್ ಉತ್ಪಾದನೆ ಆಗಬೇಕು. ಅದಕ್ಕಾಗಿ ಒಂದೋ ಅದಾನಿ UPCL ಸಾಮರ್ಥ್ಯ ಹೆಚ್ಚಬೇಕು, ಇಲ್ಲವೇ ಹೊಸದಾಗಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಆಗಬೇಕು! ಅದಕ್ಕೆ ಬೇಕಾದ ಮೂಲ ಸೌಕರ್ಯ, ಅದು ಮಾಡುವ ಮಾಲಿನ್ಯ. ಇತ್ಯಾದಿಗಳೆಲ್ಲ ಕರಾವಳಿಗೆ ಹೆಚ್ಚುವರಿ ಬೋನಸ್!
ಡೆಲಾಯಿಟ್‌ನಂತಹ ವೃತ್ತಿಪರ ಕನ್ಸಲ್ಟೇಷನ್ ಸಂಸ್ಥೆ ಸಿದ್ಧಪಡಿಸಿರುವ ಈ ವರದಿಯಲ್ಲಿ, ಡೇಟಾ ಸೆಂಟರ್ ಬೇಕೆಂದು ಒತ್ತಾಯಿಸುತ್ತಿರುವವರು ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮಂಡಿಸಿದ್ದಾರೆ. ಇದು ನಿಜಕ್ಕೂ ಸನ್ಯಾಸಿ ಸಂಸಾರದಂತೆ ಕಾಣಿಸುತ್ತಿದೆ. ಅವರ ಬೇಡಿಕೆಗಳನ್ನು ಯಥಾವತ್ ಇಲ್ಲಿ ಕೊಟ್ಟಿದ್ದೇನೆ:
1. ಡೇಟಾ ಸೆಂಟರುಗಳಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತ ಆಗುವಂತಿಲ್ಲ. ಹಾಗಾಗಿ, ಮಂಗಳೂರನ್ನು ನ್ಯಾಷನಲ್ ಗ್ರಿಡ್‌ಗೆ ಸಂಪರ್ಕಿಸಿ, ಡುವಲ್ ಗ್ರಿಡ್ ಕನೆಕ್ಟಿವಿಟಿ ಒದಗಿಸಬೇಕು, ಪ್ರತ್ಯೇಕವಾದ ಡೇಟಾ ಸೆಂಟರ್ ಪವರ್ ಕಾರಿಡಾರ್ ಗಳನ್ನು, ಪವರ್ ರಿಲಯಬಿಲಿಟಿ ಜೋನ್‌ಗಳನ್ನು ರೂಪಿಸಬೇಕು.
2. UPCLನಂತಹ ಕಾರ್ಖಾನೆಗಳಿಂದ ವಿದ್ಯುತ್ ನೇರ ಖರೀದಿ ಒಪ್ಪಂದಕ್ಕೆ (PPA) ನಿಯಮಗಳನ್ನು ಸಡೀಲ ಮಾಡಬೇಕು.
3. ಗ್ರೂಪ್ ಕ್ಯಾಪ್ಟಿವ್ ಮಾದರಿಯ (ಅಂದರೆ ಮಾಲಕರೇ ತಮ್ಮ ವಿದ್ಯುತ್ ಉತ್ಪಾದಿಸಿಕೊಳ್ಳುವ) ವಿದ್ಯುತ್ತನ್ನು ನವೀಕರಿಸಬಲ್ಲ ಇಂಧನ ಮೂಲಗಳಿಂದ ಉತ್ಪಾದಿಸಿಕೊಳ್ಳಲು ಅವಕಾಶ ಕೊಡಬೇಕು; ಅದಕ್ಕೆ ಮತ್ತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಬ್ಸಿಡಿ ಕೊಡಬೇಕು.
4. 400 KV ಟ್ರಾನ್ಸ್‌ಮಿಷನ್ ಲೈನ್‌ಗಳನ್ನು 700KVಗೆ ಏರಿಸಬೇಕು. 100MWಗಿಂತ ಹೆಚ್ಚಿನ ಗಾತ್ರದ DCಗಳಿಗೆ ಕಂಪನಿ ಖರ್ಚಿನಲ್ಲಿ ಹೆಚ್ಚುವರಿ ಫೀಡರ್ ಸ್ಥಾಪಿಸಿಕೊಳ್ಳಲು ಅವಕಾಶ ಕೊಡಬೇಕು.
ಇದೆಲ್ಲ ಬಂದ ಬಳಿಕ ಇನ್ನು 20 ವರ್ಷ ಬಳಿಕ ಕರಾವಳಿ ಹೇಗಿರಲಿದೆ, ನಾವು ನಮ್ಮ ಮುಂದಿನ ಜನಾಂಗಕ್ಕೆ ಎಂತಹ ಕರಾವಳಿಯನ್ನು ಬಿಟ್ಟು ಹೋಗಲಿದ್ದೇವೆ ಎಂಬುದನ್ನು ಸ್ವಲ್ಪ ತಣ್ಣಗೆ ಕುಳಿತು, ಪಕ್ಷ, ಜಾತಿ, ರಾಜಕೀಯ, ಭಯ-ಭಕ್ತಿ ಎಲ್ಲವನ್ನೂ ಬದಿಗಿಟ್ಟು ಯೋಚನೆ ಮಾಡಿ ನೋಡಿ. ಒಟ್ಟಿನಲ್ಲಿ ಒಂದಂತೂ ಸ್ಪಷ್ಟ. ಕರಾವಳಿಯನ್ನು ಮೂಗು ಒತ್ತಿ ಬಾಯಿ ಕಳೆಸುವುದು ಹೇಗೆ ಎಂಬುದನ್ನು ಕಾರ್ಪೋರೇಟ್‌ಗಳು, ಸರ್ಕಾರಗಳು ಚೆನ್ನಾಗಿ ಅರ್ಥ ಮಾಡಿಕೊಂಡಿವೆ ಎಂದು ಅವರು ಹೇಳಿದ್ದಾರೆ.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ












Click it and Unblock the Notifications