Karnataka CM: ಇಂದೇ ಸಿಎಂ ಹೆಸರು ಘೋಷಣೆ? ಹೈಕಮಾಂಡ್ ಮುಂದಿರುವ ಆಯ್ಕೆಗಳೇನು?
ಬೆಂಗಳೂರು ಮೇ 15: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆಗೇರಲು ಸಿದ್ದವಾಗಿದೆ. ಇನ್ನೇನು ಹೈಕಮಾಂಡ್ ಸಿಎಂ ಆಯ್ಕೆ ಮಾಡುವುದೊಂದೇ ಬಾಕಿ. ರಾಜ್ಯದಲ್ಲಿ ಸಿಎಂ ಆಯ್ಕೆ ಬಗ್ಗೆ ಹೈಕಮಾಂಡ್ ತುಂಬಾ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದ್ದು ಇಂದು ಸಿಎಂ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗಾದರೆ ಹೈಕಮಾಂಡ್ ಮುಂದಿರುವ ಆಯ್ಕೆಗಳೇನು? ಸಿದ್ದರಾಮಯ್ಯ ಸೇನೆ ಸಿದ್ದರಾಮಯ್ಯ ಅವರನ್ನೇ ಸಿಎಂ ಆಯ್ಕೆಗೆ ಒತ್ತಾಯಿಸುತ್ತಿರೋದು ಯಾಕೆ?
ಹೈಕಮಾಂಡ್ ಮುಂದಿರುವ ಮೊದಲ ಆಪ್ಷನ್ ಸಿದ್ದರಾಮಯ್ಯ ಒಬ್ಬರು ಸಿಎಂ, ಮೂರು ಡಿಸಿಎಂ ಆಯ್ಕೆ ಮಾಡೋದಾಗಿದೆ. ಅಂದರೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ ಇನ್ನುಳಿದಂತೆ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡುವುದು. ಅದರಲ್ಲಿ ಒಕ್ಕಲಿಗ ಸಮುದಾಯದ ಡಿಕೆ ಶಿವಕುಮಾರ್, ಲಿಂಗಾಯತ ಸಮುದಾಯದ ಎಂಬಿ ಪಾಟೀಲ್ ಮತ್ತು ದಲಿತ ಸಮುದಾಯದ ಡಾ. ಜಿ ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಕೊಡೋ ಪ್ಲ್ಯಾನ್ ನಡೆದಿದೆ.

ಹೈಕಮಾಂಡ್ ಮುಂದಿರುವ ಎರಡನೇ ಆಪ್ಷನ್ ಅಂದರೆ ಡಿಕೆ ಶಿವಕುಮಾರ್ ಸಿಎಂ ಮೂವರು ಡಿಸಿಎಂ. ಎರಡನೇ ಆಪ್ಷನ್್ನಲ್ಲಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿ ಹಿಂದುಳಿದ ವರ್ಗದಿಂದ ಸಿದ್ದರಾಮಯ್ಯ, ಲಿಂಗಾಯತ ಸಮುದಾಯದ ಎಂಬಿ ಪಾಟೀಲ್ ಮತ್ತು ದಲಿತ ಸಮುದಾಯದ ಡಾ. ಜಿ ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಕೊಡೋ ಆಪ್ಷನ್ ಇದಿಯಂತೆ.
ಇನ್ನೂ ಮೂರನೇ ಆಪ್ಷನ್ ನಲ್ಲಿ ಫಿಫ್ಟಿ-50 ಫಾರ್ಮುಲಾ ಇದೆ. ಅಂದರೆ ಈ ಸಲದ ಸರ್ಕಾರದಲ್ಲಿ ಡಿಸಿಎಂ ಯಾವುದೂ ಬೇಡ. ಹೀಗೆ ಮೂರು ನಾಲ್ಕು ಡಿಸಿಎಂ ಪೋಸ್ಟ್ಗಳನ್ನು ಸೃಷ್ಟಿ ಮಾಡಿದರೆ ದಕ್ಷ ಆಡಳಿತವನ್ನು ಕೊಡಲು ಆಗುವುದಿಲ್ಲ. ಹೀಗಾಗಿ ಒಬ್ಬರನ್ನೇ ಸಿಎಂ ಮಾಡಲಿಕ್ಕೆ ಮೂರನೇ ಆಪ್ಷನ್ ಇಟ್ಟುಕೊಳ್ಳಲಾಗಿದೆ. ಅದರಂತೆ ವಯಸ್ಸು ವರ್ಚಸ್ಸು ಆಧಾರದ ಮೇಲೆ ಮೊದಲ ಎರಡುವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗ್ತಾರೆ, ಆನಂತರ ಎರಡು ವರೆ ವರ್ಷ ಡಿಕೆ ಶಿವಕುಮಾರ್ ಸಿಎಂ ಆಗ್ಲಿ ಅನ್ನೋ ಮಾತುಗಳು ಕೇಳಿ ಬಂದಿವೆ.

ಆಪ್ಷನ್ ನಂಬರ್ ನಾಲ್ಕು- ಓನ್ಲಿ ಸಿದ್ದು ಸಿಎಂ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಅಹಿಂದ ನಾಯಕ ಸಿದ್ದರಾಮಯ್ಯ ಕಾರಣದಿಂದ. ಹೀಗಾಗಿ ಸಿದ್ದರಾಮಯ್ಯ ಇಡಿ ರಾಜ್ಯದ ಉದ್ದಗಲಕ್ಕೂ ಜನ ಮನ್ನಣೆಯನ್ನು ಗಳಿಸಿದ್ದಾರೆ. ಆದರೆ ಡಿಕೆ ಶಿವಕುಮಾರ್ ಪವರ್ ಇರೋದು ಬೆಂಗಳೂರು ಕನಕಪುರದಲ್ಲಿ ಮಾತ್ರ. ಆದ್ದರಿಂದ ಸಿದ್ದರಾಮಯ ಬೆನ್ನಿಗೆ ಅತಿ ಹೆಚ್ಚು ಶಾಸಕರ ಬೆಂಬಲ ಇದೆ.
ಕಾಡಿನ ರಾಜ ಸಿಂಹ ಒಬ್ಬನೇ ಇರುವಂತೆ ರಾಜ್ಯದಲ್ಲಿ ಒಬ್ಬನೇ ಸಿಎಂ ಇರಬೇಕು. ಒಬ್ಬ ಸಿಎಂ ಮೂರು ನಾಲ್ಕು ಡಿಸಿಎಂಗಳು ಸೃಷ್ಟಿಯಾದರೆ ದಕ್ಷ ಮತ್ತು ಸುಸ್ಥಿರ ಅಧಿಕಾರ ಕೊಡಲು ಸಾಧ್ಯವೇ ಇಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲ ಸಿದ್ದರಾಮಯ್ಯ ಸಿಎಂ ಆದರೆ ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ಕೊಡಬಹುದು. ಜೊತೆಗೆ ಜೆಡಿಎಸ್ ಹಾಗೂ ಬಿಜೆಪಿಯನ್ನು ಪ್ರಬಲವಾಗಿ ಎದುರಿಸಬಹುದು. 2024ರ ಲೋಕಸಭಾ ಚುನಾವಣೆಯಲ್ಲೂ ಕರ್ನಾಟದಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ. ಆದರೆ ಡಿಕೆ ಶಿವಕುಮಾರ್ ಸಿಎಂ ಆದರೆ ಅವರ ಮೇಲೆ ಐಟಿ,ಇಡಿ ತೂಗು ಕತ್ತಿಗಳಿರುವುದರಿಂದ ಅಜ್ಜೆಸ್ಟ್ಮೆಂಟ್ ರಾಜಕಾರಣ ನಡೆಯುತ್ತದೆ. ಜೆಡಿಎಸ್ ಕೂಡ ನಿಧಾನಕ್ಕೆ ಸ್ಟ್ರಾಂಗ್ ಆಗುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಜೊತೆಗೆ ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಸಿಎಂ ಆಗಬಾರದು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಕ್ಕೆ ಶೇ.80ರಷ್ಟು ಸಿದ್ದರಾಮಯ್ಯ ಅವರೇ ಕಾರಣ. ಹೀಗಾಗಿ ಐದು ವರ್ಷ ಸಿದ್ದರಾಮಯ್ಯ ಆಡಳಿತ ನಡೆಸಬೇಕು. ಸಿದ್ದರಾಮಯ್ಯ ಒಬ್ಬರೇ ಸಿಎಂ ಆಗಿದ್ದರೆ ಕರ್ನಾಟಕದಲ್ಲಿ ದಕ್ಷ ಆಡಳಿತ ಕೊಡಲು ಸಾಧ್ಯವಾಗುತ್ತದೆ. ಬಿಜೆಪಿ ಪಕ್ಷದಲ್ಲಾದಂತೆ ಐದು ವರ್ಷಕ್ಕೆ ಇಬ್ಬರು ಮೂವರು ಸಿಎಂ ಡಿಸಿಎಂ ಗಳಾದರೆ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ರಾಜಕೀಯ ವಿಶ್ಲೇಷಣೆಗಳು ಹೇಳುತ್ತವೆ.
ಒಂದು ವೇಳೆ ಸಿದ್ದರಾಮಯ್ಯಗೆ ಸಿಎಂ ಹುದ್ದೆ ತಪ್ಪಿದರೆ ರಾಜ್ಯದಲ್ಲಿ ಅರಾಜಕತೆ ಉಂಟಾಗುತ್ತದೆ. ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಭಾನುವಾರ 136 ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ ಹೈಕಮಾಂಡ್ ನಾಯಕರು ಇಂದು ಅಂತಿಮ ತೀರ್ಮಾನವನ್ನು ಘೋಷಣೆ ಮಾಡೋ ಸಾಧ್ಯತೆ ಇದೆ. ಹಾಗಾಗಿ ರಾಜ್ಯದಲ್ಲಿ ಸಿಎಂ ಯಾರಾಗಲಿದ್ದಾರೆ ಎನ್ನುವ ಕುತೂಹಲ ಹಾಗೇ ಉಳಿದಿದೆ.












Click it and Unblock the Notifications